ಪ್ರೇಯಸಿಗೆ ಒಡವೆ ಕೊಡಿಸಲು, ಪರಿಚಿತನ ಮನೆಯಲ್ಲೇ ಕಳ್ಳತನ ಮಾಡಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಚಿಕನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದು ದೋಚಿದ್ದ. ಹೆಬ್ಬಗೋಡಿ ಪೊಲೀಸರು ಆರೋಪಿಯಿಂದ 416 ಗ್ರಾಂ ಚಿನ್ನ ಹಾಗೂ ನಗದು ವಶಕ್ಕೆ

ಬೆಂಗಳೂರು (ಅ.11): ಪ್ರೇಯಸಿಗೆ ಒಡವೆ ಮಾಡಿಸಿಕೊಡಲು ಪರಿಚಿತನ ಮನೆಯ ಬೀಗ ಮುರಿದು ಕಳ್ಳತನ ಮಾಡಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ದೋಚಿದ್ದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.

ಶ್ರೇಯಸ್(22) ಬಂಧಿತ ಆರೋಪಿ. ಚಿಕನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಶ್ರೇಯಸ್, ಕಳೆದ ನಾಲ್ಕು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಯುವತಿ ಒಡವೆ ಕೊಡಿಸುವಂತೆ ಪೀಡಿಸುತ್ತಿದ್ದಳಂತೆ. ಇವನ ಚಿಕನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರಿಂದ ಬರುತ್ತಿದ್ದ ಸಂಬಳಕ್ಕೆ ಒಂದು ಗ್ರಾಂ ಚಿನ್ನವೂ ಸಿಗುತ್ತಿರಲಿಲ್ಲ. ಪ್ರೇಯಸಿಗಾಗಿ ಕಳ್ಳತನಕ್ಕೆ ಪ್ಲಾನ್ ಮಾಡಿದ್ದ ಪಾಗಲ್ ಪ್ರೇಮಿ. ಇದೇ ವೇಳೆ ಚಿಕನ್ ಅಂಗಡಿ ಇಟ್ಟುಕೊಂಡಿದ್ದ ಹರೀಶ್ ಎಂಬುವವರ ಮನೆಯಲ್ಲಿ ಬಂಗಾರ ಇರುವುದು ಗೊತ್ತುಮಾಡಿಕೊಂಡಿದ್ದ ಆರೋಪಿ ಶ್ರೇಯಸ್ ಕಳ್ಳತನಕ್ಕೆ ಪ್ಲಾನ್ ಮಾಡಿದ್ದ.

ಪರಿಚಿತ ಹರೀಶ್ ಮನೆಯಲ್ಲಿ ಕಳ್ಳತನ:

ಕಳೆದ ತಿಂಗಳು 15 ರಂದು ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಟ್ಟಳ್ಳಿಯಲ್ಲಿರುವ ಹರೀಶ್ ಮನೆಗೆ ಸೈಲೆಂಟಾಗಿ ನುಗ್ಗಿದ್ದ ಶ್ರೇಯಸ್, ಬೀಗ ಮುರಿದು ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಬಳಿಕ ಕದ್ದ ಚಿನ್ನ ಮಾರಾಟ ಮಾಡಿ ಪ್ರೇಯಸಿಗೆ ಒಡವೆ ಮಾಡಿಸಿಕೊಟ್ಟಿದ್ದ ಆರೋಪಿ. ಇತ್ತ ಮನೆಯಲ್ಲಿ ಚಿನ್ನಾಭರಣ ಕಳ್ಳತನವಾಗಿರುವುದು ಗೊತ್ತಾಗಿ ಶಾಕ್ ಆಗಿದ್ದ ಹರೀಶ್, ತಕ್ಷಣ ಪೊಲೀಸ್ ಠಾಣೆಗೆ ತೆರಳಿ ಚಿನ್ನಾಭರಣ ಕಳ್ಳತನದ ಬಗ್ಗೆ ದೂರು ದಾಖಲಿಸಿದ್ದ.

ಹರೀಶ್ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಳ್ಳತನ ಪತ್ತೆಗೆ ಚುರುಕಿನ ತನಿಖೆ ವೇಳೆ ಹರೀಶ್ ಗೆ ಪರಿಚಿತನಾಗಿದ್ದ ಶ್ರೇಯಸ್ ಕಳ್ಳತನ ಮಾಡಿರುವುದು ಬಯಲಾಗಿದೆ. ಆರೋಪಿಯನ್ನ ಪತ್ತೆ ಹಚ್ಚಿ ಬಂಧಿಸಿದ ಹೆಬ್ಬಗೋಡಿ ಪೊಲೀಸರು. ಬಂಧಿತನಿಂದ ಬರೋಬ್ಬರಿ 416 ಗ್ರಾಂ ಚಿನ್ನ, 3 ಲಕ್ಷದ 46 ಸಾವಿರ ರೂ ವಶಕ್ಕೆ(ಒಟ್ಟು ಮೌಲ್ಯ 47ಲಕ್ಷ) ವಶಕ್ಕೆ ಪಡೆದು. ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ.