ಗೋರಖ್‌ಪುರ(ಜ.15): ಕರ್ನಾಟಕ ಮೂಲದ ಯುವಕನ ವಿರುದ್ಧ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸರ್ಕಾರ ಇತ್ತೀಚೆಗಷ್ಟೇ ಜಾರಿಗೆ ತಂದಿರುವ ನೂತನ ‘ಲವ್‌ ಜಿಹಾದ್‌’ ಕಾಯ್ದೆಯಡಿ ಕೇಸ್‌ ದಾಖಲಾಗಿದೆ.

ಕಾಲೇಜಿಗೆ ಹೋಗಿದ್ದ ಯುವತಿ ಮನೆಗೆ ವಾಪಸ್ಸಾಗದ ಕಾರಣ ಯುವತಿಯ ತಂದೆ ಜನವರಿ 5ರಂದು ದೂರು ನೀಡಿದ್ದರು. ಈ ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಕಾಣೆಯಾದ ಯುವತಿ ಮೆಹಬೂಬ್‌ ಎಂಬ ವ್ಯಕ್ತಿಯೊಂದಿಗೆ ನಿರಂತರ ಸಂಪರ್ಕ ಹೊಂದಿದ್ದು ಟ್ರೂ ಕಾಲರ್‌ನಲ್ಲಿ ಪತ್ತೆಯಾಗಿತ್ತು. ಅಲ್ಲದೆ ಮೆಹಬೂಬ್‌ ಅವರ ಮೊಬೈಲ್‌ ಲೋಕೇಷನ್‌ನಲ್ಲಿ ಅವರು ಕರ್ನಾಟಕದವರು ಎಂಬುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಯುವತಿಯ ತಂದೆ ನೀಡಿದ್ದ ದೂರಿನ ಮೇರೆಗೆ ಜನವರಿ 11ರಂದು ಆರೋಪಿ ವಿರುದ್ಧ ಅಪಹರಣ ಮತ್ತು ಮತಾಂತರ ನಿಷೇಧ ಕಾಯ್ದೆಯಡಿ ಕೇಸ್‌ ದಾಖಲಿಸಿಕೊಳ್ಳಲಾಗಿದೆ. ಕಾಣೆಯಾದ ಯುವತಿ ಮತ್ತು ಆರೋಪಿ ಯುವಕ ಪತ್ತೆಯಾದ ಬಳಿಕ ಎಲ್ಲವೂ ಖಚಿತವಾಗಲಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮುಂದಿನ ಅಧಿವೇಶನದಲ್ಲಿ ಲವ್ ಜಿಹಾದ್‌ ಕಾಯ್ದೆ ಚರ್ಚೆ..?

ಪ್ರಕರಣ ಹಿನ್ನೆಲೆ?:

ಬೆಂಗಳೂರು ಮೂಲದ ಮೆಹಬೂಬ್‌, ಸಾಮಾಜಿಕ ಜಾಲತಾಣದ ಮೂಲಕ, ಗೋರಖ್‌ಪುರ ಮೂಲದ ಯುವತಿ ಜೊತೆ ಸ್ನೇಹ ಬೆಳೆಸಿದ್ದ. ಉದ್ಯೋಗ ಕೊಡಿಸುವುದಾಗಿ ಆಕೆಯನ್ನು ನಂಬಿಸಿದ್ದ ಆತ ಬಳಿಕ ಆತ ಆಕೆಯ ಜೊತೆಗೆ ಸಲುಗೆ ಬೆಳೆಸಿಕೊಂಡಿದ್ದ. ಈ ವೇಳೆ ಎಲ್ಲೂ ಆತ ತಾನು ಮುಸ್ಲಿಂ ಸಮುದಾಯಕ್ಕೆ ಸೇರಿದವನು ಎಂದು ತಿಳಿಸಿರಲಿಲ್ಲ. ಜೊತೆಗೆ ಇತ್ತೀಚೆಗೆ ತನ್ನ ಮಗಳನ್ನು ಅಪಹರಿಸಿದ್ದಾನೆ ಎಂದು ನಿವೃತ್ತ ಯೋಧರೂ ಆಗಿರುವ ಯುವತಿಯ ತಂದೆ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.