ಬಿಬಿಎಂಪಿ ಚೀಫ್ ಇಂಜಿನಿಯರ್ ಮನೆ ಸೇರಿ ಏಕಕಾಲಕ್ಕೆ ರಾಜ್ಯದ 60 ಕಡೆ ಲೋಕಾಯುಕ್ತ ದಾಳಿ!
ಕರ್ನಾಟಕದಲ್ಲಿ ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಅಕ್ರಮ ಆಸ್ತಿ ಗಳಿಕೆ, ಆದಾಯ ಮೀರಿದ ಸಂಪತ್ತು ಗಳಿಸಿರುವ ಹಿನ್ನೆಲೆಯಲ್ಲಿ 60 ಕಡೆ ದಾಳಿ ನಡೆದಿದೆ.
ಬೆಂಗಳೂರು (ಮಾ.27): ಕರ್ನಾಟಕದಲ್ಲಿ ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಅಕ್ರಮ ಆಸ್ತಿ ಗಳಿಕೆ, ಆದಾಯ ಮೀರಿದ ಸಂಪತ್ತು ಗಳಿಸಿರುವ ಹಿನ್ನೆಲೆಯಲ್ಲಿ ರಾಜ್ಯದ 13 ಜಿಲ್ಲೆಗಳಲ್ಲಿ ಒಟ್ಟು 60 ಕಡೆ ಈ ದಾಳಿ ನಡೆದಿದೆ. ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿಯಾಗಿದೆ. ಬೆಂಗಳೂರಿನಲ್ಲಿ ಒಟ್ಟು ಐದು ಕಡೆ ದಾಳಿ ನಡೆದಿದೆ. ಬಿಬಿಎಂಪಿ ಚೀಫ್ ಇಂಜಿನಿಯರ್ ರಂಗನಾಥ್ ಮನೆ ಸೇರಿ ಹಲವು ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಮುಂಜಾನೆಯೇ ದಾಳಿ ನಡೆಸಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಯಲಹಂಕ ಬಿಬಿಎಂಪಿ ಚೀಫ್ ಇಂಜಿನಿಯರ್ ಆಗಿರುವ ರಂಗನಾಥ್ ಅವರಿಗೆ ಸೇರಿದ ಸದಾಶಿವನಗರ ಹಾಗೂ ಯಲಹಂಕ ಮನೆ ಮೇಲೆ ದಾಳಿ ನಡೆದಿದ್ದು, ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಕಾರವಾರದಲ್ಲಿ ಎಇಇ ಮನೆ ಮೇಲೆ ದಾಳಿ:
ಕಾರವಾರದಲ್ಲಿ ಕೂಡ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ ನಡೆದಿದೆ. ನಗರಾಭಿವೃದ್ಧಿ ಪ್ರಾಧಿಕಾರದ ಎಇಇ ಪ್ರಕಾಶ್ ಆರ್. ರೇವಣಕರ್ ಎಂಬವರ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಅಕ್ರಮ ಆಸ್ತಿ ಗಳಿಸಿದ ಹಿನ್ನೆಲೆ ಈ ದಾಳಿ ನಡೆದಿದೆ. ಕಾರವಾರದ ಲಿಂಗನಾಯ್ಕವಾಡದ ಐಶ್ವರ್ಯ ರೆಸಿಡೆನ್ಸಿಯಲ್ಲಿದೆ ಪ್ರಕಾಶ್ ಮನೆ ಇದ್ದು, ಮಹತ್ವದ ದಾಖಲೆ ,ವಾಹನ ಸೇರಿ ಅಧಿಕಾರಿಗಳು ಇತರೆ ಸೊತ್ತುಗಳ ಪರಿಶೀಲನೆ ನಡೆಸುತ್ತಿದ್ದಾರೆ. ಅಂಕೋಲಾದ ಅವರ್ಸಾದಲ್ಲಿರುವ ಮೂಲ ಮನೆಯ ಮೇಲೂ ದಾಳಿ ನಡೆದಿದ್ದು, ಆಸ್ತಿ ಪತ್ರಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ರಾಮನಗರಲ್ಲಿ ಗ್ರಾಪಂ ಪಿಡಿಒ ಮೇಲೆ ದಾಳಿ
ರಾಮನಗರ ತಾಲ್ಲೂಕಿನ ಮಂಚನಾಯಕನಹಳ್ಳಿ ಗ್ರಾಪಂ ಪಿಡಿಒ ಯತೀಶ್ ಗೆ ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಳು ಶಾಕ್ ನೀಡಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಹಿನ್ನಲೆ ಲೋಕಾಯುಕ್ತ ಪೋಲಿಸರ ದಾಳಿ ನಡೆದಿದ್ದು, ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ದಾಳಿಯಾಗಿದೆ. ಮಂಚನಾಯಕನಹಳ್ಳಿ ಗ್ರಾಮ ಪಂಚಾಯತಿ ಕಚೇರಿ, ಮೈಸೂರಿನ ನಿವಾಸ, ಹಾಗೂ ಬಿಡದಿಯ ಈಗಲ್ಟನ್ ರೆಸಾರ್ಟ್ ನಲ್ಲಿನ ಪ್ಲಾಟ್ ಮೇಲೆ ಕೂಡ ಏಕಕಾಲದಲ್ಲಿ ದಾಳಿ ನಡೆದಿದೆ. ಅಕ್ರಮ ಆಸ್ತಿ ಬಗ್ಗೆ ಲೋಕಾ ಪೋಲಿಸರಿಗೆ ದೂರು ನೀಡಿದ್ದ ಶೇಷಗಿರಿಹಳ್ಳಿ ಗ್ರಾಮದ ವ್ಯಕ್ತಿಯೊಬ್ಬರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಓರ್ವ ಡಿವೈಎಸ್ಪಿ ಸೇರಿದಂತೆ 10 ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ಮಾಡಿದ್ದಾರೆ. ಗ್ರಾಪಂ ಕಛೇರಿಯಲ್ಲಿ ಕಡತಗಳು. ಆಸ್ತಿ ಪತ್ರ ಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಚನ್ನಪಟ್ಟಣದಲ್ಲಿ ಕೂಡ ಲೋಕಾಯುಕ್ತ ದಾಳಿಯಾಗಿದ್ದು, ಗ್ರಾಪಂ ಪಿಡಿಒ ಮನೆ ದಾಳಿಯಾಗಿದೆ. ಚನ್ನಪಟ್ಟಣ ತಾಲ್ಲೂಕಿನ ಮೈಲನಾಯಕನಹಳ್ಳಿ ಗ್ರಾಪಂ ಪಿಡಿಒ ಶಿಬಾ ಮನೆ, ಕಚೇರಿ ಮೇಲೆ ದಾಳಿ ನಡೆದಿದೆ. ಕಳೆದ ಒಂದುವರೆ ತಿಂಗಳಿನಿಂದ ಪಿಡಿಒ ಶಿಬಾ ರಜೆಯಲ್ಲಿದ್ದು, ಅಕ್ರಮ ಆಸ್ತಿಗಳಿಕೆ ಆರೋಪ ಲೋಕಾಯುಕ್ತ ಅಧಿಕಾರಿಗಳ ದಾಳಿ ನಡೆದಿದೆ. ಚನ್ನಪಟ್ಟಣದ ಮೈಸೂರು ಬ್ಯಾಂಕ್ ರಸ್ತೆಯಲ್ಲಿರುವ ಮನೆ ಮೇಲೆ ನಾಲ್ಕು ಜನ ಮೈಸೂರು ಲೋಕಾಯುಕ್ತ ಅಧಿಕಾರಿಗಳ ತಂಡದಿಂದ ದಾಳಿ ನಡೆಸಿದ್ದು, ಶೋಧಕಾರ್ಯ ಮುಂದುವರೆದಿದೆ.
ಕೊಡಗಿನಲ್ಲಿ ಲೋಕಾಯುಕ್ತ ದಾಳಿ:
ಕೊಡಗಿನಲ್ಲಿ ಕೂಡ ಬೆಳಗ್ಗೆಯೇ ಲೋಕಾಯುಕ್ತ ದಾಳಿಯಾಗಿದೆ. ಕುಶಾಲನಗರದ ಎರಡು ಕಡೆಗಳಲ್ಲಿ ದಾಳಿ ನಡೆದಿದ್ದು, ಸೋಮವಾರಪೇಟೆ ತಾ. ಪಂ. ಇಓ ಜಯಣ್ಣ ಅವರ ಕುಶಾಲನಗರದ ಶಿವರಾಮ ಕಾರಂತ ಬಡವಣೆಯಲ್ಲಿರುವ ಮನೆ ಹಾಗೂ ದ.ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ಜಯಣ್ಣ ಕಚೇರಿ ಮೇಲೂ ದಾಳಿಯಾಗಿದೆ. ಅವರ ಅಸಿಟೆಂಟ್ ಇಂಜಿನಿಯರ್ ಫಯಾಜ್ ಅಹಮದ್ ಮನೆಯಲ್ಲೂ ಲೋಕಾಯುಕ್ತ ತಲಾಶ್ ಮಾಡಿದೆ. ಕುಶಾಲನಗರದ ಯೋಗಾನಂದ ಬಡಾವಣೆಯಲ್ಲಿರುವ ಫಯಾಜ್ ಮನೆ, ಸೋಮವಾರಪೇಟೆಯಲ್ಲಿರುವ ಕಚೇರಿ , ಕುಶಾಲನಗರದ ಮನೆ ಹಾಗೂ ಮಡಿಕೇರಿ ಅತ್ತೆ ಮನೆಯಲ್ಲಿ ಹುಡುಕಾಟ ನಡೆದಿದೆ. ಕೊಡಗು ಲೋಕಾಯುಕ್ತ ಪೊಲೀಸ್ ಲೋಕೆಶ್ ನೇತೃತ್ವದಲ್ಲಿ ನಡೆದ ದಾಳಿಯಾಗಿದೆ.
ಬೀದರ್ ಲೋಕಾಯುಕ್ತ ದಾಳಿ:
ಗಡಿ ಜಿಲ್ಲೆ ಬೀದರ್‌ನಲ್ಲಿ ಕೂಡ ಲೋಕಾಯುಕ್ತ ದಾಳಿ ನಡೆದಿದೆ. ಏಕಕಾಲಕ್ಕೆ ನಾಲ್ಕು ಕಡೆ ದಾಳಿಯಾಗಿದ್ದು, ಭಾಲ್ಕಿಯ ಕಾರಂಜಾ ಇಲಾಖೆಯ ಅಧಿಕಾರಿ ಶಿವಕುಮಾರ್ ಸ್ವಾಮಿ , ಕಾರ್ಯ ಪಾಲಕರು ಅಭಿಯಂತರ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ನಡೆದಿದೆ. ಬೀದರ್ ನಗರದ ವೀರಭದ್ರೇಶ್ವರ ಕಾಲೋನಿಯ ನಿವಾಸ, ಭಾಲ್ಕಿ ತಾಲೂಕಿನ ನಾಗೂರು ಗ್ರಾಮದ ನಿವಾಸ, ಬೀದರ್ ನಗರದ ಕಾರಂಜಾ ಕಚೇರಿ ಹಾಗೂ ಕಲಬುರಗಿಯ ಹಳೆ ನಿವಾಸದ ಮೇಲೆ ದಾಳಿಯಾಗಿದೆ. ಲೋಕಾಯುಕ್ತ ಎಸ್‌ಪಿ ಆಂಟ್ಯೋನಿ ಜಾನ್ ಮಾರ್ಗದರ್ಶನದಲ್ಲಿ ಹಾಗೂ ಡಿವೈಎಸ್‌ಪಿ ಎನ್.ಎಮ್.ಓಲೇಕಾರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಧಾರವಾಡ ಲೋಕಾಯುಕ್ತ ದಾಳಿ:
ಧಾರವಾಡ ಆರ್ ಎಪ್ ಓ ಮಹೇಶ ಹಿರೇಮಠ. ನಿವಾಸ ಮತ್ತು ಕಚೇರಿಯ ಮೆಲೆ ಲೋಕಾಯುಕ್ತ ದಾಳಿಯಾಗಿದೆ. ಧಾರವಾಡದ ಕುಮಾರೇಶ್ವರ ಬಡಾವಣೆಯಲ್ಲಿರುವ ನಿವಾಸ, ಕಚೇರಿ ಮೇಲೆ ಲೋಕಾಯುಕ್ತ ಎಸ್ ಪಿ ಶಂಕರ್ ರಾಗಿ ನೇತೃತ್ವದಲ್ಲಿ ದಾಳಿ ನಡೆದಿದ್ದು, ಮಹತ್ವದ ದಾಖಲಾತಿಗಳ ಪರಿಶಿಲನೆ ಮಾಡಲಾಗುತ್ತಿದೆ.
ಚಿಕ್ಕಬಳ್ಳಾಪುರ ಲೋಕಾಯುಕ್ತ ದಾಳಿ:
ಚಿಕ್ಕಬಳ್ಳಾಪುರ KRIDL EE ಸದಾಶಿವಯ್ಯ ಅವರ ಚಿಕ್ಕಬಳ್ಳಾಪುರ ಕಚೇರಿ, ಆಸ್ತಿ ಪಾಸ್ತಿ ಮೇಲೆ ದಾಳಿ ನಡೆದಿದೆ. ಯಲಹಂಕ ಬಾಡಿಗೆ ಮನೆ, ಮೈಸೂರಿನ ರಾಮಕೃಷ್ಣ ನಗರದ ಮನೆ, ಬಗಾದಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಮನೆ, ಟಿ.ನರಸೀಪುರದ ಒಕ್ಕಲಿಗೆರೆ ಮನೆ ಸೇರಿದಂತೆ ಆಸ್ತಿಗಳ ಮೇಲೆ ಚಿಕ್ಕಬಳ್ಳಾಪುರದಲ್ಲಿ ಲೋಕಾಯುಕ್ತ ಅಧಿಕಾರಿ ಮೋಹನ್ ನೇತೃತ್ವದಲ್ಲಿ ದಾಳಿ ನಡೆದಿದೆ.
ವಿಜಯಪುರದಲ್ಲಿ ಲೋಕಾಯುಕ್ತ ದಾಳಿ:
ಬಾಗಲಕೋಟೆ ಜಿಲ್ಲೆ ಜಮಖಂಡಿಯ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್ ಟಿ ಓ) ಷಣ್ಮುಖಪ್ಪ ತೀರ್ಥ ನಿವಾಸದ ಮೇಲೆ ದಾಳಿ ಲೋಕಾ ನಡೆದಿದೆ. ವಿಜಯಪುರ ನಗರದ ಚಾಲುಕ್ಯ ನಗರದಲ್ಲಿರೋ ನಿವಾಸ, ಸಂಬಂಧಿಕರ ನಿವಾಸಗಳ ಮೇಲೂ ಲೋಕಾಯುಕ್ತ ಎಸ್ಪಿ ಟಿ ಮಲ್ಲೇಶ ನೇತೃತ್ವದಲ್ಲಿ ದಾಳಿಯಾಗಿದೆ.
ಕೋಲಾರದಲ್ಲಿ ಲೋಕಾ ದಾಳಿ:
ರಾಮನಗರ ಜಿಲ್ಲೆ ಮಾಗಡಿ ಗ್ರಾಮೀಣ ಯೋಜನಾ ಪ್ರಾಧಿಕಾರ ಉಪನಿರ್ದೇಶಕ ನಾಗರಾಜಪ್ಪ ಅವರ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕು ಯಟ್ಟಕೋಡಿ ಗ್ರಾಮದಲ್ಲಿರುವ ಮನೆ ಮೇಲೆ ದಾಳಿಯಾಗಿದ್ದು, ಲೋಕಾಯುಕ್ತ ಎಸ್ಪಿ ಉಮೇಶ್ ನೇತೃತ್ವದಲ್ಲಿ ದಾಳಿಯಾಗಿದೆ. ನಾಗರಾಜಪ್ಪಗೆ ಸೇರಿದ 5 ಕಡೆ ದಾಳಿ ನಡೆದಿದೆ.
ಮಂಡ್ಯದಲ್ಲಿ ಲೋಕಾ ದಾಳಿ:
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಅಗಸನಪುರ ಗ್ರಾಮ ಪಂಚಾಯತಿ ಲೆಕ್ಕಸಹಾಯಕ ಕೃಷ್ಣೇಗೌಡ ಮನೆ, ಕಚೇರಿ ಮೇಲೆ ಲೋಕಾ ದಾಳಿ ನಡೆದಿದೆ. ಬೆಳ್ಳಂ ಬೆಳ್ಳಿಗೆ ಏಕಕಾಲಕ್ಕೆ ಎರಡು ಕಡೆ ದಾಳಿ ನಡೆಸಿರುವ ಅಧಿಕಾರಿಗಳು ಮನೆ ಹಾಗೂ ಕಚೇರಿಯಲ್ಲಿ ಕಡತಗಳ ಪರಿಶೀಲನೆ ನಡೆಸಲಾಗುತ್ತಿದೆ.