ಬೆಂಗಳೂರು(ನ.04):  ಪತ್ನಿಯನ್ನು ಮನೆಗೆ ಕರೆದೊಯ್ಯಲು ಮನೆಗೆ ಬಂದಿದ್ದ ಅತ್ತೆಯನ್ನು ಕೊಲೆ ಮಾಡಿದ್ದ ಮಾನಸಿಕ ಅಸ್ವಸ್ಥ ಹಾಗೂ ಕಿವುಡುತನದಿಂದ ಬಳಲುತ್ತಿದ್ದ ಅಪರಾಧಿಗೆ ಬುದ್ಧಿಮಾಂದ್ಯ ಮಕ್ಕಳಿಗೆ ನೀಡುವ ಶಿಕ್ಷಣ ಕೊಡಿಸಿದ ಬಳಿಕ ಹೇಳಿಕೆ ದಾಖಲಿಸಿಕೊಂಡು ಜೀವಾವಧಿ ಶಿಕ್ಷೆ ನೀಡಿರುವ ಅಪರೂಪದ ಪ್ರಕರಣ ನಗರದ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯದಲ್ಲಿ ನಡೆದಿದೆ.

ಪ್ರಕರಣ ಸಂಬಂಧ ವಿಚಾರಣೆ ನಡೆಸಿದ 67ನೇ ಹೆಚ್ಚುವರಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಸುಭಾಷ್‌ ಸಂಕದ್‌ ಅವರು, ಅಪರಾಧಿಗೆ ಶ್ರವಣ ದೋಷಕ್ಕೆ ಸಂಬಂಧಿಸಿದ ಚಿಕಿತ್ಸೆ ನೀಡುತ್ತಿರುವ ಖಾಸಗಿ ಸಂಸ್ಥೆಯಿಂದ ಒಂದು ತಿಂಗಳ ಕಾಲ ತರಬೇತಿ ಕೊಡಿಸಿದ್ದಾರೆ. ಜೊತೆಗೆ, ನಿಮ್ಹಾನ್ಸ್‌ ಮತ್ತು ಮೈಸೂರಿನ ಆಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆಯಿಂದ ಅಪರಾಧಿ ವಿಚಾರಣೆಗೆ ಅರ್ಹ ಎಂಬುದರ ಕುರಿತು ವರದಿ ಪಡೆದು ವಿಚಾರಣೆ ನಡೆಸಿದ ನಂತರ ಜೀವಾವಧಿ ಶಿಕ್ಷೆ ಮತ್ತು .10 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ.

ಪ್ರಕರಣದ ಹಿನ್ನೆಲೆ:

ಕೂಲಿ ಮಾಡಿ ಜೀವನ ನಡೆಸುತ್ತಿದ್ದ ಅಪರಾಧಿ ರಾಮಲಿಂಗಪ್ಪ ತನ್ನ ಪತ್ನಿ ಲಕ್ಷ್ಮೇ ದೇವಮ್ಮ ಜೊತೆ ಆಂಧ್ರಪ್ರದೇಶದಿಂದ ಬಂದು ಬೆಂಗಳೂರಿನ ಹೊಂಗಸಂದ್ರದಲ್ಲಿ ನೆಲೆಸಿದ್ದ. ಮಗಳು ಲಕ್ಷ್ಮೇದೇವಮ್ಮನನ್ನು ಮನೆಗೆ ಕರೆದೊಯ್ಯಲು 2012ರ ಜುಲೈ 7ರಂದು ಅತ್ತೆ ವೆಂಕಟಲಕ್ಷ್ಮಮ್ಮ ಬಂದಿದ್ದು, ಅತ್ತೆ ಮತ್ತು ಅಳಿಯನ ನಡುವೆ ಗಲಾಟೆ ತಾರಕ್ಕೇರಿತ್ತು. ಈ ವೇಳೆ ತಾಳ್ಮೆ ಕಳೆದುಕೊಂಡ ಅಳಿಯ ರಾಮಲಿಂಗಪ್ಪ ಚಾಕುವಿನಿಂದ ತನ್ನ ಅತ್ತೆಗೆ ಇರಿದಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಅತ್ತೆ ಸಾವನ್ನಪ್ಪಿದ್ದಳು. ಮೊದಲೇ ಕಿವುಡನಾಗಿದ್ದ ರಾಮಲಿಂಗಪ್ಪ, ಅತ್ತೆಯ ಕೊಲೆಯ ಬಳಿಕ ಮಾನಸಿಕವಾಗಿ ಕುಸಿದಿದ್ದ. ಕೊಲೆ ಸಂಬಂಧ ಬೊಮ್ಮನಹಳ್ಳಿ ಠಾಣೆ ಪೊಲೀಸರು, ರಾಮಲಿಂಗಪ್ಪನನ್ನು ಬಂಧಿಸಿದ್ದರು. ಜೈಲಿನಲ್ಲಿದ್ದಾಗ ಆತ ಮಾನಸಿಕ ಸ್ಥಿತಿಮಿತ ಕಳೆದುಕೊಂಡಿದ್ದ.

ಲಿಂಗರಾಜು ಮರ್ಡರ್‌ ಕೇಸ್‌: BBMP ಮಾಜಿ ಸದಸ್ಯ ದಂಪತಿಗೆ ಜೀವಾವಧಿ ಶಿಕ್ಷೆ!

ಸರ್ಕಾರದಿಂದ ವಕೀಲರ ನೇಮಕ:

ಅಪರಾಧಿ ರಾಮಲಿಂಗಪ್ಪ, ಪ್ರಕರಣದಲ್ಲಿ ತನ್ನ ಪರವಾಗಿ ವಾದ ಮಂಡಿಸಲು ವಕೀಲರನ್ನು ನೇಮಿಸಿಕೊಂಡಿರಲಿಲ್ಲ. ಇದನ್ನು ಗಮನಿಸಿದ ನ್ಯಾಯಾಲಯ ಸರ್ಕಾರದ ವೆಚ್ಚದಲ್ಲಿ ಕಾನೂನು ನೆರವು ನೀಡಲು ವಕೀಲರನ್ನು ನೇಮಕ ಮಾಡಿತ್ತು. ಘಟನೆ ಕುರಿತು ಅಧ್ಯಯನ ನಡೆಸಿದ ವಕೀಲರು, ಅಪರಾಧಿ ಕಿವುಡರಾಗಿದ್ದು, ಮಾನಸಿಕ ಸ್ಥಿತಿ ಸರಿಯಿಲ್ಲ. ಮಾತನಾಡುವುದಕ್ಕೂ ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ ಎಂದು ನ್ಯಾಯಾಲಯಕ್ಕೆ ವಿವರಿಸಿದ್ದರು.
ಈ ಅಂಶವನ್ನು ಪರಿಗಣಿಸಿದ್ದ ನ್ಯಾಯಾಧೀಶರು, ‘ಮಾತೃ ಎಜುಕೇಷನ್‌ ಟ್ರಸ್ಟ್‌ ಫಾರ್‌ ಬ್ಲೈಂಡ್‌’ ಎಂಬ ಸಂಸ್ಥೆಯಿಂದ ಪರಪ್ಪನ ಅಗ್ರಹಾರದಲ್ಲಿ ಒಂದು ತಿಂಗಳ ಕಾಲ ತರಬೇತಿ ನೀಡಲು ವ್ಯವಸ್ಥೆ ಮಾಡಲು ಜೈಲು ಅಧಿಕಾರಿಗಳಿಗೆ ಸೂಚಿಸಿದ್ದರು. ಇದಾದ ನಂತರ ಮೈಸೂರಿನ ಆಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆ ಹಾಗೂ ಬೆಂಗಳೂರಿನ ನಿಮ್ಹಾನ್ಸ್‌ ಸಂಸ್ಥೆಯಿಂದ ಅಪರಾಧಿಯನ್ನು ವಿಚಾರಣೆ ನಡೆಸಲು ಅರ್ಹನಾಗಿರುವ ಕುರಿತು ವರದಿ ತರಿಸಿಕೊಂಡಿದ್ದರು.

ತೆಲುಗಿನಲ್ಲಿ ಹೇಳಿಕೆ ದಾಖಲು:

ಅಪರಾಧಿ ಆಂಧ್ರಪ್ರದೇಶದ ಮೂಲದವರಾಗಿದ್ದ ಪರಿಣಾಮ ನ್ಯಾಯಾಲಯದ ಗುಮಾಸ್ತರು ಮತ್ತು ಸರ್ಕಾರಿ ವಕೀಲರ ನೆರವಿನಿಂದ ತೆಲುಗಿನಲ್ಲಿಯೇ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಆ ನಂತರ ಕನ್ನಡ ಭಾಷೆಗೆ ಭಾಷಾಂತರಿಸಿ ಶಿಕ್ಷೆ ವಿಧಿಸಿ ಆದೇಶಿಸಿರುವುದಾಗಿ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

‘ಪತ್ನಿಯನ್ನು ತವರಿಗೆ ಕಳುಹಿಸಲು ಇಷ್ಟವಿಲ್ಲದೆ ಅತ್ತೆಗೆ ಚಾಕು ಇರಿದೆ’

ಅಪರಾಧಿ ಆಂಧ್ರಪ್ರದೇಶದ ಮೂಲದವರಾಗಿದ್ದು, ಆತನಿಗೆ ತೆಲುಗು ಭಾಷೆ ಮಾತ್ರ ಬಲ್ಲವನಾಗಿದ್ದ. ಇದರಿಂದಾಗಿ ನ್ಯಾಯಾಲಯದ ಕನ್ನಡ ಮಾತನಾಡುವುದು ಮತ್ತು ಪಾಟಿಸವಾಲು ನಡೆಸುವುದಕ್ಕೆ ಸಾಧ್ಯವಾಗಿರಲಿಲ್ಲ. ಪರಿಣಾಮ ನ್ಯಾಯಾಲಯದ ಗುಮಾಸ್ತರು ಮತ್ತು ಸರ್ಕಾರಿ ವಕೀಲರಾದ ಮೀನಾ ಕುಮಾರಿ ಅವರ ನೆರವಿನಿಂದ ಆರೋಪಿಗೆ ತೆಲುಗು ಭಾಷೆಯಲ್ಲಿ ಪ್ರಶ್ನಾವಳಿಯನ್ನು ಬರೆದು ತೋರಿಸಲಾಯಿತು. ಆತ ಅದಕ್ಕೆ ತನ್ನ ಹೇಳಿಕೆಯನ್ನು ನೀಡಿದ್ದ. ತೆಲುಗಿನಲ್ಲಿ ನೀಡಿದ ಹೇಳಿಕೆಗಳನ್ನು ವಕೀಲರು ಕನ್ನಡಕ್ಕೆ ತರ್ಜುಮೆ ಮಾಡಿ ನ್ಯಾಯಾಲಯಕ್ಕೆ ವಿವರಿಸಿದ್ದರು.

ತಪ್ಪೊಪ್ಪಿಗೆ: 

ಪ್ರಾರಂಭದಲ್ಲಿ ಕೊಲೆ ಮಾಡಿಯೇ ಇಲ್ಲ ಎಂದು ಹೇಳಿಕೆ ನೀಡಿದ್ದ ಆರೋಪಿ ರಾಮಲಿಂಗಪ್ಪ, ಪ್ರಕರಣದ ಸಂಬಂಧ ಸಾಕ್ಷ್ಯಾಧಾರಗಳು ಕೊಲೆ ಮಾಡಿರುವುದಾಗಿ ಸಾಬೀತು ಪಡಿಸುತ್ತಿವೆ. ಪ್ರಕರಣದಿಂದ ನುಣುಚಿಕೊಳ್ಳುತ್ತಿದ್ದೀಯ ಎಂದು ಪ್ರಶ್ನೆ ಮಾಡಲಾಗಿತ್ತು. ಆ ನಂತರ ಸತ್ಯ ಒಪ್ಪಿಕೊಂಡಿದ್ದ ಅಪರಾಧಿ, ಘಟನೆ ನಡೆದ ದಿನ ನಮ್ಮ ಅತ್ತೆ ತನ್ನ ಮಗಳನ್ನು ಕಳುಹಿಸಲು ಹೆಚ್ಚು ಒತ್ತಡ ಹಾಕಿದ್ದರು. ಪತ್ನಿಯನ್ನು ತವರಿಗೆ ಕಳುಹಿಸಲು ಇಷ್ಟಇರಲಿಲ್ಲ. ಅದಕ್ಕೆ ಅತ್ತೆಯನ್ನು ಬೆದರಿಸಬೇಕು ಎಂದು ಚಾಕುವಿನಿಂದ ಇರಿದಿದ್ದೆ. ಅವರು ಮೃತ ಪಟ್ಟರು ಎಂದು ತಾನು ಮಾಡಿದ್ದ ತಪ್ಪನ್ನು ಒಪ್ಪಿಕೊಂಡಿದ್ದ. ಈ ಅಂಶ ಪರಿಗಣಿಸಿದ್ದ ನ್ಯಾಯಾಲಯ ಅಪರಾಧಿಗೆ ಶಿಕ್ಷೆ ವಿಧಿಸಿದೆ.