Asianet Suvarna News Asianet Suvarna News

ಬೆಂಗಳೂರಲ್ಲಿ ಮನೆಗೆ ಹೊಕ್ಕು ಮಗುವನ್ನು ಕದ್ದೊಯ್ದ ಕಳ್ಳಿ: 42 ದಿನದ ಹಸುಗೂಸು ನಾಪತ್ತೆ

ಮಗು ಹುಟ್ಟಿ ಕೇವಲ 42 ದಿನಗಳು ಆಗಿದ್ದು, ಪೂರ್ಣವಾಗಿ ಕಣ್ಣು ಬಿಟ್ಟು ಜಗತ್ತನ್ನೇ ನೋಡಿಲ್ಲದ ಕಂದಮ್ಮನನ್ನು ಮನೆಗೆ ಹೊಕ್ಕು, ಕದ್ದುಕೊಂಡು ಹೋಗಿರುವ ಘಟನೆ ಬೆಂಗಳೂರಿನ ಕಲಾಸಿಪಾಳ್ಯದ ದುರ್ಗಮ್ಮ ಬೀದಿಯಲ್ಲಿ ನಡೆದಿದೆ.

Lady Thief stole baby from home in Bangalore 42 day old Baby goes missing sat
Author
First Published Mar 25, 2023, 5:51 PM IST

ಬೆಂಗಳೂರು (ಮಾ.25): ಇನ್ನು ಮಗು ಹುಟ್ಟಿ ಕೇವಲ 42 ದಿನಗಳು ಆಗಿದ್ದು, ಪೂರ್ಣವಾಗಿ ಕಣ್ಣು ಬಿಟ್ಟು ಜಗತ್ತನ್ನೇ ನೋಡಿಲ್ಲದ ಕಂದಮ್ಮನನ್ನು ಮನೆಗೆ ಹೊಕ್ಕು, ಕದ್ದುಕೊಂಡು ಹೋಗಿರುವ ಘಟನೆ ಬೆಂಗಳೂರಿನ ಕಲಾಸಿಪಾಳ್ಯದ ದುರ್ಗಮ್ಮ ಬೀದಿಯಲ್ಲಿ ನಡೆದಿದೆ.

ಚಾಲಾಕಿ ಕಳ್ಳರು ಮನೆಗೇ ಹೊಕ್ಕು ಕಳ್ಳತನ ಮಾಡುವುದು ಅತ್ಯಂತ ದುರಂತ ಸಂಗತಿಯಾಗಿದೆ. ಇಷ್ಟು ದಿನ ಬಸ್‌ ನಿಲ್ದಾಣ, ಆಸ್ಪತ್ರೆ, ಜಾತ್ರೆಗಳು ಅಥವಾ ರಸ್ತೆಗಳಲ್ಲಿ ಮಗುವಿನ ಬಗ್ಗೆ ಮೈಮರೆತು ಕುಳಿತಾಗ ಮಗು ಕಳ್ಳತನ ಆಗಿರುವ ಘಟನೆಗಳು ನಡೆದಿವೆ. ಆದರೆ, ಈಗ ನಾವು ಮನೆಯಲ್ಲಿ ಸುರಕ್ಷಿತವಾಗಿ ಇದ್ದರೂ ಮನೆಗೇ ಹೊಕ್ಕು ಮಕ್ಕಳನ್ನು ಕಳ್ಳತನ ಮಾಡುತ್ತಿರುವ ಘಟನೆ ಅತ್ಯಂತ ಅಮಾನವೀಯವಾಗಿದೆ. ಒಂಭತ್ತು ತಿಂಗಳು ಹೊತ್ತು -ಹೆತ್ತ ಮಗುವನ್ನು ಕ್ಷಣಾರ್ಧದಲ್ಲಿ ಎತ್ತಿಕೊಮಡು ಹೋಗಿರುವ ಘಟನೆ ನಡೆದಿದ್ದು, ಈ ಬಗ್ಗೆ ಸಿಸಿಟಿವಿ ಕ್ಯಾಮರಾದಲ್ಲಿ ಎಲ್ಲವೂ ಸೆರೆಯಾಗಿದೆ.

Bengaluru: ತಪ್ಪಿದ ಕಾರು ದುರಂತ, ಎಣ್ಣೆ ಮತ್ತಿನಲ್ಲಿ ಅತಿವೇಗದ ಚಾಲನೆ, ಟಯರ್ ಬ್ಲಾಸ್ಟ್ ಆದ್ರೂ ರಿಮ್ ನಲ್ಲೆ ಚಾಲನೆ!

ನಿದ್ರೆಯಿಂದ ಎದ್ದ ತಾಯಿಗೆ ಮಗು ಕಾಣಿಸಿಲ್ಲ: ಹೆರಿಗೆ ಆಗಿ ಕೇವಲ 42 ದಿನಗಳು ಆಗಿದ್ದು, ಆಸ್ಪತ್ರೆಯಿಮದ ಡಿಸ್ಚಾರ್ಜ್‌ ಆಗಿ ಬಂದಿದ್ದ ತಾಯಿ, ಮನೆಯಲ್ಲಿ ಮಗುವಿಗೆ ಹಾಲುಣಿಸಿ ಮಲಗಿಸಿದ್ದಳು. ಇನ್ನು ಮಗುವಿನ ಜೊತೆಗೆ ಬಾಣಂತಿ ತಾಯಿಯೂ ನಿದ್ರೆಗೆ ಜಾರಿದ್ದಾಳೆ. ಇನ್ನು ಬೇಸಿಗೆಯ ಹಿನ್ನೆಲೆಯಲ್ಲಿ ಚಿಕ್ಕ ಮನೆಯಲ್ಲಿ ಹೊರಗಿನ ಗಾಳಿ ಬರಲೆಂದು ಬಾಗಿಲ ಬಳಿಯೇ ತಾಯಿ- ಮಗು ಮಲಗಿದ್ದಾರೆ. ಆದರೆ, ಅದೇ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ, ತಾಯಿ- ಮಗು ನಿದ್ರೆಯಲ್ಲಿರುವುದನ್ನು ನೋಡಿದ್ದಾಳೆ. ಕೂಡಲೇ ಮನೆಯ ಗೇಟ್‌ ಅನ್ನು ತೆರೆದು ಮನೆಯೊಳಗೆ ನುಗ್ಗಿದ ಮಹಿಳೆ ಮಗುವನ್ನು ಎತ್ತಿಕೊಂಡು ಹೋಗಿದ್ದಾಳೆ.

ಇನ್ನು ಈ ಘಟನೆ ಬೆಳಗ್ಗೆ ಸಮಯದಲ್ಲಿ ನಡೆದಿದೆ. ಫಾರ್ಹಿನ್ ಎಂಬಾಕೆಯ 42 ದಿನದ ಮಗು ಕಳ್ಳತನ ಆಗಿದೆ. ಮಗುವಿನ ಜೊತೆ ಪಕ್ಕದಲ್ಲಿಯೇ ಇಟ್ಟುಕೊಂಡಿದ್ದ ಮೊಬೈಲ್ ಅನ್ನೂ ಕೂಡ ಅಪರಿಚತ ಮಹಿಳೆ ಕದ್ದೊಯ್ದಿದ್ದಾಳೆ. ಕೂಡಲೇ ಮಗು ಕಳ್ಳತನ ಆಗಿರುವ ಬಗ್ಗೆ ಮನೆಯಲ್ಲಿ ಆತಂಕಗೊಂಡ ಪೋಷಕರು ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಇನ್ನು ಕೂಡಲೇ ಕಾರ್ಯ ಪ್ರವೃತ್ತವಾದ ಪೊಲೀಸರು ಮನೆಯ ಬಳಿ ಇದ್ದ ಸಿಸಿಟಿವಿ ಕ್ಯಾಮರಾ ವೀಕ್ಷಣೆ ಮಾಡಿದ್ದಾರೆ. ಕೂಡಲೇ ಮಹಿಳೆಯ ಚಹರೆಯನ್ನು ತಿಳಿದುಕೊಂಡು ಆಕೆಯ ವೀಡಿಯೋವನ್ನು ನಗರ ಇತರೆ ಪೊಲೀಸ್‌ ಠಾಣೆಗಳಿಗೆ ಹಂಚಿಕೊಂಡು ಮಗು ಪತ್ತೆಗೆ ಮುಂದಾಗಿದ್ದಾರೆ. 

ಮಧ್ಯಾಹ್ನದ ವೇಳೆಗೆ ಸಿಕ್ಕಿಬಿದ್ದ ಮಹಿಳೆ: ಇನ್ನು ಬೆಳಗ್ಗೆ ಮನೆಗೆ ಹೊಕ್ಕು ಹಸುಗೂಸನ್ನು ಕದ್ದೊಯ್ದ ಮಹಿಳೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. ಮಾಗಡಿ ರಸ್ತೆ ರೈಲ್ವೆ ಕ್ವಾಟ್ರಸ್ ಬಳಿ ಮಹಿಳೆ ಮಗುವನ್ನು ಎತ್ತಿಕೊಂಡು ಓಡಾಡುವಾಗ ಮಗು ಅಳುತ್ತಿದ್ದರೂ ಹಾಲುಣಿಸದೇ, ಬಾಣಂತಿಯಂತೆ ನಡೆದುಕೊಳ್ಳದೇ ಇರುವುದನ್ನು ಕಂಡು ಸಾರ್ವಜನಿಕರೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಧ್ಯಾಹ್ನದ ವೇಳೆಗೆ ಸಾರ್ವಜನಿಕರು 112 ಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಕೂಡಲೇ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Pocso case: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ-ಅತ್ಯಾಚಾರ ಪ್ರಕರಣ: ಆರೋಪಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಪೋಷಕರಿಗೆ ಮಗು ಒಪ್ಪಿಸಿದ ಪೊಲೀಸರು: ಮಾಗಡಿ ರಸ್ತೆಯ ಬಳಿ ಅಪರಿಚಿತ ಮಹಿಳೆ ಕದ್ದಿರುವ ಮಗುವಿನೊಂದಿಗೆ ಸಿಕ್ಕಿದ ಕೂಡಲೇ ಪೋಲೀಸರು ಮಗುವನ್ನು ಕಳೆದುಕೊಂಡು ದೂರು ದಾಖಲಿಸಿದ್ದ ಪೋಷಕರನ್ನು ಸ್ಥಳಕ್ಕೆ ಬರಲು ಹೇಳಿದ್ದಾರೆ. ಅಲ್ಲಿ ಹೋದ ಪೋಷಕರಿಗೆ ಹೋದ ಜೀವವೇ ಮರಳಿ ಬಂದಂತಾಗಿದೆ. ಕಳೆದು ಹೋಗಿದ್ದ ಮಗು ಕಳ್ಳಿಯ ಕೈಯಲ್ಲಿತ್ತು. ಆ ಮಗು ನಮ್ಮದೇ ಎಂದು ಮೊಬೈಲ್‌ನಲ್ಲಿ ಮಗುವಿನ ಫೋಟೋಗಳನ್ನು ಪೊಲೀಸರಿಗೆ ತೋರಿಸಿ ಮಗುವನ್ನು ಪಡೆದುಕೊಂಡಿದ್ದಾರೆ. ಮಗುವಿನ ತಾಯಿ ಮತ್ತು ತಂದೆ ಮಗುವನ್ನು ತಬ್ಬಿ ಅಳುತ್ತಲೇ ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ.

ಮುಳುಬಾಗಿಲು ಮಹಿಳೆಯಿಂದ ಮಗು ಕಳ್ಳತನ: ಇನ್ನು ಕೋಲಾರ ಜಿಲ್ಲೆಯ ಮುಳುಬಾಗಿಲುನಿಂದ ಬಂದು ಶಿವಾಜಿನಗರದಲ್ಲಿ ವಾಸವಿದ್ದ ನಂದಿನಿ ಅಲಿಯಾಸ್‌ ಆಯೇಷಾ ಎಂಬ ಮಹಿಳೆಯೇ ಮಗುವನ್ನು ಕದ್ದುಕೊಂಡು ಹೋದ ಕಳ್ಳಿ ಆಗಿದ್ದಾಳೆ. ಇನ್ನು ಮಗು ಅಳುತ್ತಿದ್ದರೂ ಹಾಲುಣಿಸಿದ ಆಕೆಗೆ ಸಾರ್ವಜನಿಕರು ಪ್ರಶ್ನೆ ಮಾಡಿದಾಗ ಈ ಮಗು ನಂದೇ ಎಂದು ಹೈಡ್ರಾಮಾ ಮಾಗಿ, ಮರಕ್ಕೆ ತಲೆ ಚಚ್ಚಿಕೊಂಡಿದ್ದಾಳೆ. ಆದರೆ, ಇದನ್ನು ನಂಬದ ಜನರು ಪೊಲೀಸರಿಗೆ ಮಹಿಳೆಯನ್ನು ಒಪ್ಪಿಸಿದಾಗ ಮಗು ಕದ್ದಿರುವ ಬಗ್ಗೆ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಈ ಘಟನೆ ಕುರಿತಂತೆ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

Follow Us:
Download App:
  • android
  • ios