2 ಲಕ್ಷ ಲಂಚ ಬೇಡಿಕೆ ಇಟ್ಟ ಲೇಡಿ ಎಸ್‌ಐ, ಮುಖ್ಯಪೇದೆ ಅರೆಸ್ಟ್
ಕದ್ದ ಮೊಬೈಲ್ ಕಡಿಮೆ ಬೆಲೆಗೆ ಖರೀದಿಸಿದ್ದ ವ್ಯಕ್ತಿ| ಕೇಸ್ ದಾಖಲಿಸದಿರಲು ಲಂಚಕ್ಕೆ ಎಸ್‌ಐ ಬೇಡಿಕೆ| ಎಸ್‌ಐ ಪರ .1 ಲಕ್ಷ ಸ್ವೀಕರಿಸುತ್ತಿದ್ದ ಬೈಯಪ್ಪನಹಳ್ಳಿ ಠಾಣೆ ಮುಖ್ಯಪೇದೆ| ಎಸಿಬಿಯಿಂದ ಇಬ್ಬರ ಸೆರೆ|
ಬೆಂಗಳೂರು(ಜ.13): ಕದ್ದ ಮೊಬೈಲ್ ಖರೀದಿಸಿದ್ದ ವ್ಯಕ್ತಿಯೊಬ್ಬರಿಗೆ ಬೆದರಿಸಿ ಒಂದು ಲಕ್ಷ ರುಪಾಯಿ ಸ್ವೀಕರಿಸುತ್ತಿದ್ದ ವೇಳೆ ಮಹಿಳಾ ಸಬ್ ಇನ್‌ಸ್ಪೆಕ್ಟರ್ ಮತ್ತು ಮುಖ್ಯಪೇದೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಮಂಗಳವಾರ ಸಿಕ್ಕಿಬಿದ್ದಿದ್ದಾರೆ. ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಸೌಮ್ಯಾ ಮತ್ತು ಮುಖ್ಯಪೇದೆ ಜಯಪ್ರಕಾಶ್ ರೆಡ್ಡಿ ಎಸಿಬಿ ಬಂಧನಕ್ಕೊಳಗಾದವರು.
ಪರಾರಿಯಾಗಲು ಹೋಗಿ ಕೆಳಗೆ ಬಿದ್ದ:
ಈ ಮಧ್ಯೆ, ಕಾರ್ಯಾಚರಣೆ ಕೈಗೊಂಡ ಎಸಿಬಿ ಅಧಿಕಾರಿಗಳನ್ನು ಕಂಡು ಭಯಭೀತರಾದ ಪೇದೆ ಕುಮಾರ್ ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದ. ಈ ವೇಳೆ ಆಯಾ ತಪ್ಪಿ ಕೆಳಗೆ ಬಿದ್ದು ಕಾಲಿಗೆ ಪೆಟ್ಟು ಮಾಡಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾನೆ. ಪ್ರಕರಣಕ್ಕೂ ಪೇದೆ ಕುಮಾರ್‌ಗೂ ಸಂಬಂಧ ಇಲ್ಲ. ಆದರೂ ಪರಾರಿಯಾಗಲು ಯತ್ನಿಸಿದ್ದು ಕುತೂಹಲವನ್ನುಂಟು ಮಾಡಿದೆ.
2 ಲಕ್ಷ ಕೊಟ್ಟರೆ ಕೇಸ್ ಹಾಕಲ್ಲ:
ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆ ಪೊಲೀಸರು ಇತ್ತೀಚೆಗೆ ಮೊಬೈಲ್ ಕಳ್ಳತನ ಮಾಡುತ್ತಿದ್ದ ಉಸ್ಮಾನ್, ಇಮ್ರಾನ್ ಮತ್ತು ರಶೀದ್ ಎಂಬುವರನ್ನು ಬಂಧಿಸಿದ್ದರು. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಕಳವು ಮಾಡಿದ್ದ ಮೊಬೈಲನ್ನು ಚಾಮರಾಜಪೇಟೆ ನಿವಾಸಿಯೊಬ್ಬರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದರು. ಈ ಮಾಹಿತಿ ಮೇರೆಗೆ ಚಾಮರಾಜಪೇಟೆಯಲ್ಲಿರುವ ಮೊಬೈಲ್ ಖರೀದಿ ಮಾಡಿದ ವ್ಯಕ್ತಿಯ ಮನೆಗೆ ಸಬ್‌ಇನ್‌ಸ್ಪೆಕ್ಟರ್ ಸೌಮ್ಯಾ ಮತ್ತು ಮುಖ್ಯಪೇದೆ ಜಯಪ್ರಕಾಶ್ ರೆಡ್ಡಿ ತೆರಳಿದ್ದರು. ಮನೆಯಲ್ಲಿದ್ದ ಪತ್ನಿಗೆ ನಡೆದ ಘಟನೆಯನ್ನು ವಿವರಿಸಿದ ಪೊಲೀಸರು, ಪತಿಯ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗುವುದು. 2 ಲಕ್ಷ ಲಂಚ ನೀಡಿದರೆ ಪ್ರಕರಣ ದಾಖಲಿಸುವುದಿಲ್ಲ ಎಂದು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅಲ್ಲದೇ, 1 ಲಕ್ಷ ಮುಂಗಡವಾಗಿ ನೀಡುವಂತೆ ತಿಳಿಸಿದ್ದರು ಎಂದು ಎಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸ್ನೇಹಿತೆಗೆ ವಿಶ್ ಮಾಡಲು ಹೋಗಿ ಜೈಲು ಸೇರಿದ ಯುವಕ..!
ಲಂಚ ನೀಡಲು ಇಷ್ಟವಿಲ್ಲದ ಕಾರಣ ಮಹಿಳೆಯು ಎಸಿಬಿಗೆ ದೂರು ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಎಸಿಬಿ ಅಧಿಕಾರಿಗಳು ಮಂಗಳವಾರ ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಗೆ ಹೋಗಿದ್ದು, ದೂರುದಾರ ಮಹಿಳೆಯಿಂದ ಸೌಮ್ಯಾ ಪರವಾಗಿ ಜಯಪ್ರಕಾಶ್ ರೆಡ್ಡಿ 1 ಲಕ್ಷ ಸ್ವೀಕರಿಸುತ್ತಿದ್ದಾಗ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಮದುವೆ ನಿಶ್ಚಯ
2017ರ ಬ್ಯಾಚ್‌ನ ಸಬ್‌ಇನ್‌ಸ್ಪೆಕ್ಟರ್ ಸೌಮ್ಯಾ ಅವರ ವಿವಾಹ ನಿಶ್ಚಯವಾಗಿದ್ದು, ಮುಂದಿನ ತಿಂಗಳು ಸೌಮ್ಯಾ ಅವರ ಮದುವೆಗೆ ಸಿದ್ಧತೆ ನಡೆದಿತ್ತು. ಈ ನಡುವೆ ಎಸಿಬಿ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಬಂಧಿತ ಸೌಮ್ಯಾ ಅವರನ್ನು ಎಸಿಬಿ ಅಧಿಕಾರಿಗಳು ಈ ಹಿಂದೆ ಯಾವಾಗಲಾದರೂ ಲಂಚ ಪಡೆದುಕೊಂಡಿದ್ದರೆ ಎಂಬುದರ ಕುರಿತು ವಿಚಾರಣೆ ನಡೆಸುತ್ತಿದ್ದಾರೆ.