Kundalahalli accident: ಬೆಂಗಳೂರಿನ ಕುಂದಲಹಳ್ಳಿಯಲ್ಲಿ ಕಾಂಕ್ರೀಟ್ ಮಿಕ್ಸರ್ ಲಾರಿ ಚಾಲಕನ ನಿರ್ಲಕ್ಷ್ಯದಿಂದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ಮನೆಯ ಗೋಡೆ ಕುಸಿದು, ಆಟವಾಡುತ್ತಿದ್ದ 1.8 ವರ್ಷದ ಮಗು ಪ್ರಣವ್ ಮೃತಪಟ್ಟಿದ್ದಾನೆ. ಘಟನೆಯ ನಂತರ ಚಾಲಕ ಪರಾರಿಯಾಗಿದ್ದಾನೆ.
ಬೆಂಗಳೂರು (ನ.9): ಕಾಂಕ್ರೀಟ್ ಮಿಕ್ಸರ್ ಲಾರಿ ವಿದ್ಯುತ್ ಕಂಬಕ್ಕೆ ತಗುಲಿ ನಂತರ ಗೋಡೆ ಬಿದ್ದ ಪರಿಣಾಮ ಮಗುವೊಂದು ಮೃತಪಟ್ಟಿರುವ ಘಟನೆ ಶುಕ್ರವಾರ ಎಚ್‌ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಂದಲಹಳ್ಳಿ ಕಾಲೋನಿಯಲ್ಲಿ ಸಂಭವಿಸಿದೆ.
ಸಿದ್ದಪ್ಪ ಹಾಗೂ ಲಾವಣ್ಯ ದಂಪತಿಯ ಪುತ್ರ ಪ್ರಣವ್ (1.8 ವರ್ಷ) ಮೃತಪಟ್ಟಿದ್ದಾನೆ. ಲಾರಿ ಚಾಲಕನ ನಿರ್ಲಕ್ಷ್ಯದಿಂದ ಸಂಭವಿಸಿದ ಅವಘಡದಲ್ಲಿ ಗೋಡೆ ಕುಸಿದು ಬಿದ್ದು ಮಗು ಸಾವನ್ನಪ್ಪಿದೆ. ಘಟನೆ ಬಳಿಕ ಚಾಲಕ ಪರಾರಿಯಾಗಿದ್ದು, ಆತನಿಗಾಗಿ ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಂಕ್ರಿಟ್ ಮಿಕ್ಸಿಂಗ್ ಲಾರಿ ಚಾಲಕನ ನಿರ್ಲಕ್ಷ್ಯಕ್ಕೆ ಮಗು ಬಲಿ:
ನಿರ್ಮಾಣ ಹಂತದ ಕಟ್ಟಡಕ್ಕೆ ಸಿಮೆಂಟ್ ಹಾಕಲು ಎಸ್‌ಎಲ್‌ವಿ ರೆಡಿ ಮಿಕ್ಸ್ ಸಂಸ್ಥೆಗೆ ಸೇರಿದ ಕಾಂಕ್ರೀಟ್ ಮಿಕ್ಸಿಂಗ್ ಲಾರಿಯನ್ನು ಕರೆಸಲಾಗಿತ್ತು. ಕೆಲಸ ಮುಗಿಸಿ ಸಂಜೆ 3.30 ರ ಸುಮಾರಿಗೆ ತೆರಳುತ್ತಿದ್ದ ವೇಳೆ ಕುಂದಲಹಳ್ಳಿಯ 8 ನೇ ಕ್ರಾಸ್ ಬಳಿ ಲಾರಿಯ ಮೇಲ್ಭಾಗಕ್ಕೆ ವಿದ್ಯುತ್ ವೈರ್ ಸಿಕ್ಕಿಹಾಕಿಕೊಂಡಿದ್ದು, ತಕ್ಷಣವೇ ಸ್ಥಳೀಯರು ಕೂಗಿ ಕೊಂಡಿದ್ದಾರೆ. ಇದನ್ನು ಗಮನಿಸದ ಚಾಲಕ ಮುಂದಕ್ಕೆ ಲಾರಿ ಚಲಾಯಿಸಿದ್ದಾನೆ. ಇದರ ಪರಿಣಾಮ ವಿದ್ಯುತ್ ಕಂಬ ಕಿತ್ತುಕೊಂಡು, ಸಿದ್ದಪ್ಪ ಅವರ ಶೀಟ್ ಮನೆಯ ಗೋಡೆ ಕುಸಿದಿದೆ. ಮನೆಯ ಆವರಣದಲ್ಲಿ ಆಟವಾಡುತ್ತಿದ್ದ ಪ್ರಣವ್ ಮೇಲೆ ಗೋಡೆಯ ಅವಶೇಷಗಳು ಬಿದ್ದಿವೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಪ್ರಣವ್‌ನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಪರೀಕ್ಷಿಸಿದ ವೈದ್ಯರು ಮಗು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.
ಎಚ್‌ಎಎಲ್ ಠಾಣೆ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಪರಾರಿಯಾಗಿರುವ ಪಶ್ಚಿಮ ಬಂಗಾಳ ಮೂಲದ ಲಾರಿ ಚಾಲಕ ವಿಪುಲ್‌ಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಾಲಕರ ಆಕ್ರಂದನ:
ಇದ್ದ ಒಬ್ಬ ಪುತ್ರನನ್ನು ಕಳೆದುಕೊಂಡ ಸಿದ್ದಪ್ಪ ಹಾಗೂ ಲಾವಣ್ಯ ದಂಪತಿಯ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನೆಗೂ ಎರಡು ನಿಮಿಷಗಳ ಹಿಂದೆ ಪುತ್ರ ಪ್ರಣವ್ ಜತೆ ತಂದೆ ಸಿದ್ದಪ್ಪ ಮನೆಯ ಆವರಣದಲ್ಲೇ ಆಟವಾಡುತ್ತಿದ್ದರು. ಕೆಲ ಸಮಯದ ನಂತರ, ಪುತ್ರನನ್ನು ಅಲ್ಲೇ ಬಿಟ್ಟು ಕ್ಯಾನ್ ತೆಗೆದುಕೊಂಡು ನೀರು ತರಲು ತಂದೆ ಹೋಗಿದ್ದರು. ಈ ವೇಳೆ ಅವಘಡ ಸಂಭವಿಸಿದೆ. ಬೆಳಗ್ಗೆಯಿಂದ ಎರಡ್ಮೂರು ಸಲ ಕಾಂಕ್ರೀಟ್ ಮಿಕ್ಸರ್ ಲಾರಿ ಬಂದು ಹೋಗಿತ್ತು. ಆದರೆ ಲಾರಿ ಸಂಜೆ ತೆರಳುವಾಗ ಈ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
-ಕಟ್ಟಡಕ್ಕೆ ಸಿಮೆಂಟ್ ಹಾಕಲು ಎಸ್‌ಎಲ್‌ವಿ ರೆಡಿ ಮಿಕ್ಸ್ ಸಂಸ್ಥೆಗೆ ಸೇರಿದ ಮಿಕ್ಸಿಂಗ್ ಲಾರಿ ಕರೆಸಲಾಗಿತ್ತು
-ಕೆಲಸ ಮುಗಿಸಿ ತೆರಳುತ್ತಿದ್ದಾಗ ಕುಂದಲಹಳ್ಳಿ 8 ನೇ ಕ್ರಾಸ್ ಬಳಿ ಲಾರಿ ಮೇಲ್ಭಾಗಕ್ಕೆ ವಿದ್ಯುತ್ ತಂತಿ ಸಿಕ್ಕಿಕೊಂಡಿದೆ
-ಇದನ್ನು ಕಂಡ ಸ್ಥಳೀಯರು ಕೂಗಿದ್ದಾರೆ. ಇದನ್ನು ಗಮನಿಸದ ಚಾಲಕ ಮುಂದಕ್ಕೆ ಲಾರಿ ಚಲಾಯಿಸಿದ್ದಾನೆ
-ಇದರಂದ ವಿದ್ಯುತ್ ಕಂಬ ಕಿತ್ತುಕೊಂಡು, ಸಂತ್ರಸ್ತ ಸಿದ್ದಪ್ಪ ಮನೆಯ ಗೋಡೆಯೇ ಕುಸಿದಿದೆ
-ಈ ವೇಳೆ ಮನೆ ಆವರಣದಲ್ಲಿ ಆಟವಾಡುತ್ತಿದ್ದ ಮಗು ಮೇಲೆ ಗೋಡೆ ಅವಶೇಷ ಬಿದ್ದು ಸಾವು
