ಮುತ್ತತ್ತಿ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಬ್ರೇಕ್ ವಿಫಲವಾದರೂ, ಚಾಲಕನ ಸಮಯಪ್ರಜ್ಞೆಯಿಂದ 40ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮತ್ತೊಂದೆಡೆ, ಮಂಡ್ಯದ ಚಿಕ್ಕಬಾಣಸವಾಡಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷಗೊಂಡು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.

ಹಲಗೂರು (ನ.18) : ಮುತ್ತತ್ತಿಗೆ ಹೋಗುವ ಮಾರ್ಗ ಮಧ್ಯೆ ಸಿಗುವ ಕೆಸರಕ್ಕಿ ಹಳ್ಳದ ತಿರುವಿನಲ್ಲಿ ಶನಿವಾರ ಸಾರಿಗೆ ಸಂಸ್ಥೆ ಬಸ್‌ನ ಬ್ರೇಕ್ ಫೇಲ್ ಆಗಿ ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.

ಕನಕಪುರ ಡಿಪೋಗೆ ಸೇರಿದ ಕೆಎಸ್‌ಆರ್‌ಟಿಸಿ ಬಸ್

ಕನಕಪುರ ಡಿಪೋಗೆ ಸೇರಿದ ಕೆಎಸ್‌ಆರ್‌ಟಿಸಿ ಬಸ್ ಪ್ರಸಿದ್ಧ ಪ್ರವಾಸಿಗರ ಪ್ರೇಕ್ಷಣೀಯ ಸ್ಥಳ ಮುತ್ತತ್ತಿ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಕಾರ್ತಿಕ ಮಾಸದ ಅಂಗವಾಗಿ ಮತ್ತು ಶನಿವಾರ ದೇವರ ದರ್ಶನ ಪಡೆಯಲು ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತು ತೆರಳುತ್ತಿತ್ತು.

ಅನಾಹುತ ತಪ್ಪಿಸಿದ ಚಾಲಕ:

ಕೆಸರಕ್ಕಿ ಹಳ್ಳದ ಕಡಿದಾದ ರಸ್ತೆಯಲ್ಲಿ ತಿರುವು ಪಡೆಯುತ್ತಿದ್ದ ವೇಳೆ ಬಸ್‌ನ ಬ್ರೇಕ್ ವಿಫಲವಾಗಿದೆ. ಈ ವೇಳೆ ವಿಚಲಿತರಾಗದ ಚಾಲಕ ಜಯರಾಜ್‍ ಪ್ರಯಾಣಿಕರಿಗೆ ಗಟ್ಟಿಯಾಗಿ ಹಿಡಿದುಕೊಳ್ಳುವಂತೆ ಧೈರ್ಯ ಹೇಳಿದ್ದಾರೆ. ಕೂಡಲೇ ಬಸ್ ನಿಯಂತ್ರಣ ಕಳೆದುಕೊಳ್ಳದಂತೆ ಚಾಲನೆ ಮಾಡುತ್ತಾ ರಸ್ತೆ ಬದಿಯಲ್ಲಿದ್ದ ಕಲ್ಲಿನ ಗುಡ್ಡೆಗೆ ಹತ್ತಿಸಿ ಬಸ್ ನಿಲ್ಲಿಸಿದ್ದಾರೆ.

ಬ್ರೇಕ್ ವಿಫಲತೆಯಿಂದ ಇಳಿಜಾರಿನ ರಸ್ತೆಯಾಗಿದ್ದರಿಂದ ಕಲ್ಲಿನ ಗುಡ್ಡಕ್ಕೆ ಡಿಕ್ಕಿ ಹೊಡೆದು ನಿಂತ ಪರಿಣಾಮ ಬಸ್‌ನ ಮುಂಭಾಗ ಜಖಂಗೊಂಡಿದೆ. ಬಸ್‌ನಲ್ಲಿದ್ದ ಕಂಡಕ್ಟರ್ ಸೌಜನ್ಯ ಅವರಿಗೆ ಸಣ್ಣಪುಟ್ಟ ಗಾಯಗಳಾದರೆ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ. ಚಾಲಕ ಜಯರಾಜ್‍ರವರ ಸಮಯ ಪ್ರಜ್ಞೆಯಿಂದ ದೊಡ್ಡ ಅಪಘಾತವೊಂದು ತಪ್ಪಿದಂತಾಗಿದೆ.

ಚಿರತೆ ಪ್ರತ್ಯಕ್ಷ, ಗ್ರಾಮಸ್ಥರಲ್ಲಿ ಆತಂಕ

ಮಂಡ್ಯ: ತಾಲೂಕಿನ ಚಿಕ್ಕಬಾಣಸವಾಡಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷಗೊಂಡಿದ್ದು ಗ್ರಾಮಸ್ಥರಲ್ಲಿ ಆತಂಕ ಎದುರಾಗಿದೆ. ಗ್ರಾಮದ ಗದ್ದೇಗೌಡರ ಜಮೀನಿನಲ್ಲಿ ಕಾಣಿಸಿಕೊಂಡ ಚಿರತೆ ಕಾಣಿಸಿಕೊಂಡಿದೆ. ಭತ್ತದ ಗದ್ದೆಯಲ್ಲಿ ಅಡಗಿ ಕುಳಿತಿರುವ ಚಿರತೆ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಭತ್ತದ ಪೈರುಗಳ ಕೆಳಗೆ ಚಿರತೆ ಮಲಗಿತುವ ದೃಶ್ಯವನ್ನು ನೋಡಿ ಸ್ಥಳೀಯರು ಆತಂಕಕ್ಕೆ ಒಳಗಾಗಿ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿದ್ದಾರೆ.