Koppal: ಪ್ರೀತಿಸಿದವಳು ತಮ್ಮನ ಹೆಂಡ್ತಿಯಾದ್ಲು.. ಹಿಂದು ಮಹಿಳೆಯ ಇಡೀ ಕುಟುಂಬವನ್ನೇ ಕೊಂದ ಆಸಿಫ್!
ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿ ಹಿಂದೂ ಧರ್ಮದಂತೆಯೇ ಕುಟುಂಬ ಸಾಗಿಸುತ್ತಿದ್ದ ಮಹಿಳೆ ವಸಂತಾ, ಆಕೆಯ ತಾಯಿ ರಾಜೇಶ್ವರಿ ಹಾಗೂ ಐದು ವರ್ಷದ ಪುತ್ರ ಧರ್ಮತೇಜ ಸಾವಿಗೆ ಕಾರಣವಾದ ಮುಸ್ಲಿಂ ವ್ಯಕ್ತಿ ಆಸಿಫ್‌ನನ್ನು ಬಂಧಿಸಲು ಪೊಲೀಸರು ಯಶಸ್ವಿಯಾಗಿದ್ದಾರೆ.
ಕೊಪ್ಪಳ (ಮೇ.29): ಜಿಲ್ಲೆಯನ್ನು ಬೆಚ್ಚಿಬೀಳಿಸಿದ್ದ ಹೊಸಲಿಂಗಾಪುರ ಗ್ರಾಮದಲ್ಲಿ ಮೂವರ ಸಾವಿನ ಪ್ರಕರಣದಲ್ಲಿ ಪೊಲೀಸರು ಆರೋಪಿ ಆಸಿಫ್‌ನನ್ನು ಬಂಧಿಸಿದ್ದಾರೆ. ಪ್ರೀತಿಸಿದ ಮಹಿಳೆ ಸಿಗಲಿಲ್ಲ ಎನ್ನುವ ಏಕೈಕ ಕಾರಣಕ್ಕೆ ಮಹಿಳೆಯ ಇಡೀ ಕುಟುಂಬವನ್ನೇ ಆರೋಪಿ ಕೊಲೆ ಮಾಡಿದ್ದ. ಎರಡು ದಿನಗಳ ಹಿಂದೆ ಕೊಪ್ಪಳ ಜಿಲ್ಲೆಯ ಹೊಸಲಿಂಗಾಪುರ ಗ್ರಾಮದಲ್ಲಿ ಘಟನೆ ನಡೆದಿತ್ತು. ಮನೆಯಲ್ಲಿಯೇ ಮೂವರ ಶವಗಳು ಅನುಮಾನಾಸ್ಪದವಾಗಿ ಪತ್ತೆಯಾಗಿತ್ತು. ಎರಡು ವರ್ಷಗಳ ಹಿಂದೆ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದ ವಸಂತಾ, ಹಿಂದೂ ಧರ್ಮದಂತೆಯೇ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಆದರೆ, ಎರಡು ದಿನಗಳ ಹಿಂದೆ ತಮ್ಮ ಮನೆಯಲ್ಲಿಯೇ ವಸಂತಾ ಹಾಗೂ ಆಕೆಯ ವೃದ್ಧ ತಾಯಿ ರಾಜೇಶ್ವರಿ ಹಾಗೂ ಐದು ವರ್ಷದ ಮಗನನ್ನು ಕೊಲೆ ಮಾಡಲಾಗಿತ್ತು. ಪ್ರಕರಣವನ್ನು 24 ಗಂಟೆಯ ಒಳಗಾಗಿ ಬೇಧಿಸುವಲ್ಲಿ ಕೊಪ್ಪಳದ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರೀತಿಸಿದ ಮಹಿಳೆ ಸಿಗಲಿಲ್ಲ ಎನ್ನುವ ಕಾರಣಕ್ಕೆ ಮಹಿಳೆಯ ಇಡಿ ಕುಟುಂಬವನ್ನ ಆರೋಪಿ ಕೊಲೆ ಮಾಡಿದ್ದಾರೆ.
ವಸಂತಾಳ ಎರಡನೆ ಗಂಡನ ಸಹೋದರನಿಂದಲೇ ವಸಂತಕುಮಾರಿಯ ಇಡಿ ಕುಟುಂಬವನ್ನು ಹತ್ಯೆ ಮಾಡಲಾಗಿದೆ. ವಸಂತಾ ಎರಡು ವರ್ಷದ ಹಿಂದೆ ಆರೀಫ್‌ನನ್ನು ಮದುವೆಯಾಗಿದ್ದಳು. ಆರೀಫ್‌ನ ಅಣ್ಣ ಆಸಿಫ್, 50 ವರ್ಷದ ರಾಜೇಶ್ವರಿ, 28 ವರ್ಷದ ವಸಂತಾ ಕುಮಾರಿ ಹಾಗೂ 5 ವರ್ಷದ ಸಾಯಿ ಧರ್ಮತೇಜನನ್ನು ಕೊಲೆ ಮಾಡಿದ್ದಾನೆ. ಕೊಪ್ಪಳದ ಮುನಿರಾಬಾದ್ ಪೊಲೀಸರು ಘಟನೆ ನಡೆದ 24 ಗಂಟೆಯಲ್ಲಿ ಆಸಿಫ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೂವರ ಕತ್ತು ಹಿಸುಕಿ ಕೊಲೆ ಮಾಡಿದ್ದ ಆಸಿಫ್ ಆ ಬಳಿಕ ಪರಾರಿಯಾಗಿದ್ದ. ಸಂಜೆ 4;30 ಕ್ಕೆ ಅಜ್ಜಿ ಹಾಗೂ ಮೊಮ್ಮಗನ ಕೊಲೆ ಮಾಡಿದ್ದ ಆಸಿಫ್, 5.30 ಕ್ಕೆ ಕೆಲಸ ಮುಗಿಸಿ ಬಂದ ವಸಂತ ಕುಮಾರಿಯನ್ನ ಕೊಲೆ ಮಾಡಿ ಪರಾರಿಯಾಗಿದ್ದ. ಪೊಲೀಸರು ಹೇಳಿರುವ ಪ್ರಕಾರ, ಆಸಿಫ್ ಕೂಡ ವಸಂತಾ ಕುಮಾರಿಯನ್ನು ಪ್ರೀತಿ ಮಾಡುತ್ತಿದ್ದ. ಆದರೆ, ವಸಂತಾ ಕುಮಾರಿ ಮಾತ್ರ ಆಸಿಫ್‌ನ ತಮ್ಮನಾದ ಆರಿಫ್‌ನನ್ನು ಮದುವೆಯಾಗಿದ್ದಳು. ಸಹೋದರರಾದ ಆಸಿಫ್, ಆರಿಫ್ ಮತ್ತು ವಸಂತಾ ಕುಮಾರಿ ಹತ್ತಿರದ ಗೊಂಬೆ ಫ್ಯಾಕ್ಟರಿಯಲ್ಲಿಯೇ ಕೆಲಸ ಮಾಡುತ್ತಿದ್ದರು.
ಪ್ರಕರಣದ ಪೂರ್ತಿ ಡಿಟೇಲ್ಸ್: ಅನ್ಯಕೋಮಿನ ವ್ಯಕ್ತಿ ಮದುವೆಯಾಗಿದ್ದ ಮಹಿಳೆ ಸೇರಿ, ಒಂದೇ ಕುಟುಂಬದ ಮೂವರು ಶವವಾಗಿ ಪತ್ತೆ!
ವಸಂತಾಳ ತಾಯಿ ರಾಜೇಶ್ವರಿ, ಮಗಳನ್ನು ಆರಿಫ್ ಜೊತೆ ಮದುವೆ ಮಾಡಿಸಿದ್ದಳು. ತಾನು ಪ್ರೀತಿಸಿದ್ದ ಮಹಿಳೆಯನ್ನ ತಮ್ಮನ ಜೊತೆ ಮದುವೆ ಮಾಡಿಸಿದ ಹಿನ್ನೆಲೆಯಲ್ಲಿ ಮನೆಗೆ ಬಂದು ಪದೇ ಪದೇ ಆಸಿಫ್ ಜಗಳ ಆಡುತ್ತಿದ್ದ. ಮೇ 27 ರಂದು ಸಂಜೆ 4 ಗಂಟೆಗೆ ಮನೆಗೆ ಬಂದಿದ್ದ ಆಸೀಫ್ ಎಲ್ಲರನ್ನೂ ಕೊಲೆ ಮಾಡಿ ಪರಾರಿಯಾಗಿದ್ದ. ಕೊಲೆ ಆರೋಪಿಯನ್ನ 24 ಗಂಟೆಯ ಒಳಗೆ ಬಂಧಿಸಿದ ಪೊಲೀಸರನ್ನು ಎಸ್‌ಪಿ ಯಶೋಧಾ ವಂಟಗೋಡಿ ಅಭಿನಂದಿಸಿದ್ದು ಸಿಬ್ಬಂದಿಗೆ ಬಹುಮಾನ ಘೋಷಣೆ ಮಾಡಿದ್ದಾರೆ.