ಪ್ರತ್ಯೇಕ 5 ಕಳವು ಪ್ರಕರಣ ಭೇದಿಸಿದ ಕೊಡಗು ಪೊಲೀಸರು!
ಕೊಡಗು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 5 ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೂವರು ಖದೀಮರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಕುಶಾಲನಗರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಎರಡು ಪ್ರತ್ಯೇಕ ಕಳವು ಪ್ರಕರಣ ಭೇದಿಸಿದ ಪೊಲೀಸರಿಗೆ ಅಚ್ಚರಿ ಮೂಡುವಂತೆ ಖದೀಮರು ಐದು ಕಳವು ಪ್ರಕರಣದಲ್ಲಿ ಭಾಗಿಯಾಗಿರುವ ಸತ್ಯ ಬಯಲಾಗಿದೆ.
ವರದಿ: ರವಿ ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಫೆ.4): ಕೊಡಗು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 5 ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೂವರು ಖದೀಮರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಕುಶಾಲನಗರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಎರಡು ಪ್ರತ್ಯೇಕ ಕಳವು ಪ್ರಕರಣ ಭೇದಿಸಿದ ಪೊಲೀಸರಿಗೆ ಅಚ್ಚರಿ ಮೂಡುವಂತೆ ಖದೀಮರು ಐದು ಕಳವು ಪ್ರಕರಣದಲ್ಲಿ ಭಾಗಿಯಾಗಿರುವ ಸತ್ಯ ಬಯಲಾಗಿದೆ.
ತೀರ್ಥಹಳ್ಳಿ: ಸೋಲಾರ್ ಪ್ಯಾನಲ್ ಪ್ಲೇಟ್ ಕಳವು ಪ್ರಕರಣ: ಗ್ರಾಪಂ ಕಂಪ್ಯೂಟರ್ ಆಪರೇಟರ್ ಸೇರಿ ಇಬ್ಬರ ಬಂಧನ
ಪಟ್ಟಣದಲ್ಲಿ ನಡೆದಿದ್ದ ಎರಡು ಕಳ್ಳತನ ಪ್ರಕರಣಗಳನ್ನು ಪತ್ತೆಹಚ್ಚಿರುವ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಬಗ್ಗೆ ಕುಶಾಲನಗರ ಡಿವೈಎಸ್ಪಿ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾಹಿತಿ ನೀಡಿದರು. ಬಂಧಿತರಿಂದ 12 ಲಕ್ಷ ಮೌಲ್ಯದ 190 ಗ್ರಾಂ ಚಿನ್ನಾಭರಣ ಮತ್ತು ಕಳ್ಳತನ ಮಾಡಿದ್ದ ಹಣದಲ್ಲಿ ಖರೀದಿಸಿದ್ದ 3 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಮಡಿಕೇರಿ ತಾಲೂಕಿನ ನಾಪೋಕ್ಲು ಗ್ರಾಮದ ಎಂ.ಪಿ.ಖಾದರ್ ಎಂಬುವರ ಪುತ್ರ ಎಂ.ಎ. ಇಬ್ರಾಹಿಂ (27), ನಾಪೋಕ್ಲು ಸಮೀಪದ ಕೊಳಕೇರಿ ಗ್ರಾಮದ ಸುರೇಶ್ ಎಂಬುವವರ ಪುತ್ರ ಸುದೀಪ್ (21) ಮತ್ತು ಮಡಿಕೇರಿಯ ಅಜಾದ್ ನಗರದ ಎಂ.ಎಂ. ಮೊಹಮ್ಮದ್ ಅವರ ಪುತ್ರ ಎಂ.ಎಂ. ವಾಸಿಂ (29) ಬಂಧಿತ ಆರೋಪಿಗಳು. ಇನ್ನು ಮೂವರು ಇವರೊಂದಿಗೆ ಕಳ್ಳತನದಲ್ಲಿ ಭಾಗಿಯಾಗಿರುವ ಶಂಕೆಯಿದ್ದು ಖದೀಮರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ ಎಂದು ಎಸ್ ಪಿ ಕೆ. ರಾಮರಾಜನ್ ತಿಳಿಸಿದರು.
ಕಳ್ಳತನಕ್ಕೆ ಬಳಸಿಕೊಳ್ಳಲಾಗಿರುವ ಬಲೆನೋ ಕಾರು (ಕೆಎ 01 ಎಂಎಂ 7724) ಮಾರುತಿ ಆಲ್ಟೋ ಕಾರು ಕೆಎ 02 ಪಿ 5378) ಮಾರುತಿ 800 (ಕೆಎ 40 ಎಂ 418) ವಶಪಡಿಸಿಕೊಳ್ಳಲಾಗಿದೆ. ಅಚ್ಚರಿ ಎಂದರೆ ಈ ಮೂರು ಕಾರುಗಳನ್ನು ಕಳ್ಳತನ ಮಾಡಿದ ಹಣದಿಂದಲೇ ಖರೀದಿಸಿದ್ದರು ಎನ್ನುವುದು ಗೊತ್ತಾಗಿದೆ. ಒಟ್ಟಿನಲ್ಲಿ ಆರೋಪಿಗಳ ಬಂಧನದಿಂದ ಕುಶಾಲನಗರ ಠಾಣಾ ವ್ಯಾಪ್ತಿಯ 2 ಪ್ರಕರಣ ಭೇದಿಸಿದ ಪೊಲೀಸರಿಗೆ ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ 2 ಪ್ರಕರಣ ಮತ್ತು ವೀರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ 1 ಕಳವು ಪ್ರಕರಣವನ್ನು ಭೇದಿಸಿದಂತೆ ಆಗಿದೆ.
ಕಳವು ಪ್ರಕರಣವನ್ನು ಸಹಾಯಕ ಎಸ್ಪಿ ಕೆ.ಎಸ್. ಸುಂದರರಾಜು, ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ, ಕುಶಾಲನಗರ ವೃತ್ತ ನಿರೀಕ್ಷಕ ಬಿ.ಜಿ.ಮಹೇಶ್ ಮತ್ತು ಜಿ.ಎನ್. ಶ್ರೀಕಾಂತ ಮಾರ್ಗದರ್ಶನದಲ್ಲಿ ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ಚಂದ್ರಶೇಖರ್ ನೇತೃತ್ವದಲ್ಲಿ ಪಿಎಸೈ ಗಳಾದ ಅಪ್ಪಾಜಿ, ಭಾರತಿ, ಶ್ರೀಧರ್, ಲೋಹಿತ್, ಎಎಸೈ ವೆಂಕಟೇಶ್, ಗೋಪಾಲ್, ಗಣಪತಿ, ಪೇದೆಗಳಾದ ಸತೀಶ್, ಮಂಜುನಾಥ್, ದಯಾನಂದ, ನಾಗರಾಜ್, ಸುಧೀಶ್ ಕುಮಾರ್, ಪ್ರಕಾಶ್, ಪ್ರವೀಣ್, ಸಂದೇಶ್, ದಿವೇಶ್, ರಂಜಿತ್, ಗಣೇಶ್, ಸಹನಾ, ಶರ್ಮಿಳಾ, ಸಿಡಿಆರ್ ಘಟಕದ ರಾಜೇಶ್, ಗಿರೀಶ್, ಪ್ರವೀಣ್, ಚಾಲಕರಾದ ರಾಜು, ಅರುಣ್, ಯೋಗೀಶ್ ಮತ್ತು ಶೇಷಪ್ಪ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಮಹಾರಾಷ್ಟ್ರ ಸರ್ಕಾರಿ ಬಸ್ ಕಳವು ಮಾಡಿ ಕರ್ನಾಟಕದಲ್ಲಿ ನಿಲ್ಲಿಸಿ ಪರಾರಿ!
ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಐದು ಪ್ರಕರಣ ಭೇದಿಸಿದ ಪೊಲೀಸರಿಗೆ ಇಲಾಖೆಯಿಂದ ನಗದು ಬಹುಮಾನ ಘೋಷಣೆ ಮಾಡಲಾಗಿದೆ.