Mysuru Kickboxer; ಆಯೋಜಕರ ನಿರ್ಲಕ್ಷ, ಪಂದ್ಯದ ವೇಳೆಯೇ ಕಿಕ್ ಬಾಕ್ಸರ್ ಸಾವು
ರಾಜ್ಯಮಟ್ಟದ ಕಿಕ್ ಬಾಕ್ಸಿಂಗ್ ನಲ್ಲಿ ಸ್ಪರ್ಧಿಸಿದ್ದ ಮೈಸೂರಿನ ಖ್ಯಾತ ಕಿಕ್ ಬಾಕ್ಸರ್ ನಿಖಿಲ್ ಪಂದ್ಯದ ವೇಳೆ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ಆಯೋಜಕರ ನಿರ್ಲಕ್ಷದಿಂದ ಈ ದುರ್ಘಟನೆ ನಡೆದಿದೆ ಎಂಬ ಆರೋಪವಿದೆ.
ಬೆಂಗಳೂರು (ಜು.14): ಆಯೋಜಕರ ನಿರ್ಲಕ್ಷದಿಂದ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ವೇಳೆ ಫೈಟರ್ ಸಾವನ್ನಪ್ಪಿರುವ ಪ್ರಕರಣ ನಡೆದಿದೆ. ರಾಜ್ಯಮಟ್ಟದ ಕಿಕ್ ಬಾಕ್ಸಿಂಗ್ ನಲ್ಲಿ ಸ್ಪರ್ಧಿಸಿದ್ದ ಮೈಸೂರಿನ ಖ್ಯಾತ ಕಿಕ್ ಬಾಕ್ಸರ್ ನಿಖಿಲ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಕಳೆದ ಭಾನುವಾರ ರಾಜ್ಯಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಅನ್ನು ಮೈಸೂರಿನ ಕೆ-ಒನ್ ಅಸೋಸಿಯೇಷನ್ ಆಫ್ ಕರ್ನಾಟಕ ಆಯೋಜಿಸಿತ್ತು. ರ್‍ಯಾಪಿಡ್ ಫಿಟ್ನೆಸ್ ನ ನವೀನ್ ರವಿಶಂಕರ್ ಎಂಬುವವರು ಈ ರಾಜ್ಯಮಟ್ಟದ ಕಿಕ್ ಬಾಕ್ಸಿಂಗ್ ನಲ್ಲಿ ಸ್ಪರ್ಧೆ ಆಯೋಜಿಸಿದ್ದರು ಎಂದು ತಿಳಿದುಬಂದಿದೆ. ಇದರಲ್ಲಿ ಮೈಸೂರಿನ ನಿಖಿಲ್ ಭಾಗವಹಿಸಿದ್ದರು. ಕಿಕ್ ಬಾಕ್ಸಿಂಗ್ ಫೈಟ್ ಮಾಡುವ ವೇಳೆ ಎದುರಾಳಿಯ ಪಂಚ್ ಗೆ ನಿಖಿಲ್ ತಲೆಗೆ ಗಂಭೀರ ಗಾಯವಾಗಿತ್ತು. ಪಂಚ್ ಬಿದ್ದ ತಕ್ಷಣ ತಲೆಗೆ ಗಂಭೀರ ಪೆಟ್ಟಾಗಿ ನಿಖಿಲ್ ಸ್ಥಳದಲ್ಲೆ ಕುಸಿದುಬಿದ್ದಿದ್ದರು.
ಇದೀಗ ನಿಖಿಲ್ ಮೃತಪಟ್ಟಿದ್ದು, ಸ್ಪರ್ಧೆ ಆಯೋಜನೆ ವೇಳೆ ಸ್ಥಳದಲ್ಲಿ ವೈದ್ಯರು, ಆಂಬುಲೆನ್ಸ್ ಸೇರಿ ಯಾವುದೇ ಮುಂಜಾಗ್ರತ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಕಿಕಿ ಬಾಕ್ಸಿಂಗ್ ಚಾಂಪಿಯನ್ ಶಿಪ್ ಆಯೋಜಕರ ವಿರುದ್ಧ ಮೃತ ನಿಖಿಲ್ ಕುಟುಂಬಸ್ಥರು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ದೂರು ದಾಖಲಾಗ್ತಿದ್ದಂತೆ ಆಯೋಜಕ ನವೀನ್ ರವಿಶಂಕರ್ ಎಸ್ಕೇಪ್ ಆಗಿದ್ದಾನೆ ಎಂದು ತಿಳಿದುಬಂದಿದೆ.
ಬಾಕ್ಸರ್ ನಿಖಿಲ್ ಸಾವು ಪ್ರಕರಣಕ್ಕೆ ಸಂಬಂಧಿಸಿ ಡಿಸಿಪಿ ಲಕ್ಷ್ಮಣ ನಿಂಬರಗಿ ಹೇಳಿಕೆ ನೀಡಿದ್ದು, ದಿನಾಂಕ 13ರಂದು ಜ್ಞಾನ ಭಾರತಿ ಠಾಣೆಯಲ್ಲಿ ಸುರೇಶ್.ಪಿ ಎಂಬುವವರು ದೂರು ನೀಡಿದ್ದಾರೆ. ರ್‍ಯಾಪಿಡ್ ಪಿನೆನೆಸ್ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಯುವಕ ಗಾಯಾಳು ಆಗಿದ್ದಾನೆ. ಪ್ರಜ್ಞಾ ಹೀನ ಸ್ಥಿತಿಗೆ ತಲುಪಿದಾಗ ಸರಿಯಾದ ಮ್ಯಾಟ್ ಇರಲಿಲ್ಲ, ಅಕ್ಸಿಜನ್ ವ್ಯವಸ್ಥೆ ಇರಲಿಲ್ಲ. ಆಯೋಕರು ನಿರ್ಲಕ್ಷದಿಂದ ಈ ಘಟನೆ ನಡೆದಿದೆ. ಮೃತ ಯುವಕನ ತಂದೆ ನೀಡಿದ ದೂರು ಆಧರಿಸಿ ತನಿಖೆ ಆರಂಭಿಸಿದ್ದೇವೆ. ಯವಕನಿಗೆ ಸರಿಯಾದ ಪ್ರಥಮ ಚಿಕಿತ್ಸೆ ನೀಡದ ಆರೋಪ ಕೇಳಿ ಬಂದಿದೆ. ತನ್ನ ಮಗನ ಸಾವಿಗೆ ಆಯೋಜಕರೇ ಕಾರಣ ಎಂದು ದೂರು ಬಂದಿದೆ ಎಂದು ಡಿಸಿಪಿ ಲಕ್ಷ್ಮಣ ಮಾಹಿತಿ ನೀಡಿದ್ದಾರೆ.
ಇನ್ನು ಜ್ಞಾನಭಾರತಿ ಠಾಣೆಯ ಸಿಬ್ಬಂದಿ ನಿರ್ಲಕ್ಷ್ಯ ಹಾಗೂ ದುರ್ನಡತೆ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಡಿಸಿಪಿ, ಆ ರೀತಿ ಸಿಬ್ಬಂದಿ ನಡೆದುಕೊಂಡಿದ್ರೆ ಕೂಲಂಕುಷವಾಗಿ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.