Bengaluru crime: ಕಂಡೋರ ಸೈಟಿನ ಮೇಲೆ ಕೋಟ್ಯಂತರ ಸಾಲ: 3 ಇಎಂಐ ಕಟ್ಟಿ ಎಸ್ಕೇಪ್ ಆಗಿಬಿಡ್ತಿದ್ದ ಖದೀಮ!
ನಗರದ ವಿವಿಧೆಡೆ ನಿವೇಶನ ಖರೀದಿ ನೆಪದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‌ಗಳಿಗೆ ಸಲ್ಲಿಸಿ ಕೋಟ್ಯಂತರ ರುಪಾಯಿ ಸಾಲ ಪಡೆದು ವಂಚಿಸುತ್ತಿದ್ದ ಖತರ್ನಾಕ್ ವಂಚಕನನ್ನು ಶೇಷಾದ್ರಿಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ಜ.31) : ನಗರದ ವಿವಿಧೆಡೆ ನಿವೇಶನ ಖರೀದಿ ನೆಪದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‌ಗಳಿಗೆ ಸಲ್ಲಿಸಿ ಕೋಟ್ಯಂತರ ರುಪಾಯಿ ಸಾಲ ಪಡೆದು ವಂಚಿಸುತ್ತಿದ್ದ ಖತರ್ನಾಕ್ ವಂಚಕನನ್ನು ಶೇಷಾದ್ರಿಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತುಮಕೂರಿನ ತಿಪಟೂರು ಮೂಲದ ಲೋಕೇಶ್(43) ಬಂಧಿತ. ಆರೋಪಿಯು 2018ರಲ್ಲಿ ನಿವೇಶನ ಖರೀದಿಸುವ ನೆಪದಲ್ಲಿ ವ್ಯಕ್ತಿಯೊಬ್ಬರಿಂದ ದಾಖಲೆಗಳ ಜೆರಾಕ್ಸ್ ಪ್ರತಿ ಪಡೆದು ಬಳಿಕ ಅವುಗಳನ್ನೇ ಬಳಸಿಕೊಂಡು ನಕಲಿ ದಾಖಲೆ ಸೃಷ್ಟಿಸಿ ಎಸ್‌ಬಿಐಗೆ ಬ್ಯಾಂಕ್‌ಗೆ ಸಲ್ಲಿಸಿ ಆ ನಿವೇಶನದ ಮೇಲೆ .83 ಲಕ್ಷ ಸಾಲ ಪಡೆದು ವಂಚಿಸಿದ್ದ. ಈ ಸಂಬಂಧ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಪೊಲೀಸರು ಆರೋಪಿಯ ಸಹಚರರಾದ ಆಯುಬ್ ಹಾಗೂ ನಾಗರಾಜ್ ಎಂಬುವವರನ್ನು ಬಂಧಿಸಿ ಜೈಲಿಗಟ್ಟಿದ್ದರು. ಅಂದಿನಿಂದ ತಲೆಮರೆಸಿಕೊಂಡಿದ್ದ ಪ್ರಕರಣದ ಕಿಂಗ್‌ಪಿನ್ ಲೋಕೇಶ್ ಐದು ವರ್ಷಗಳ ಬಳಿಕ ಪೊಲೀಸರ ಬಲೆಗೆ ಬಿದ್ದಿದ್ದಾನೆ.
BENGALURU: ಕುಡಿಯಲು ಹಣ ಕೊಟ್ಟಿಲ್ಲವೆಂದು ಪತ್ನಿಗೆ ಚಾಕು ಇರಿದ ಪಾಪಿ ಪತಿ
ಈ ಹಿಂದೆ ನಿವೇಶನ ಖರೀದಿಸುವ ನೆಪದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‌ಗಳಿಂದ ಕೋಟ್ಯಂತರ ರು. ಸಾಲ ಪಡೆದು ವಂಚಿಸಿದ ಆರೋಪದಡಿ ವಂಚಕ ಲೋಕೇಶ್ ಹಾಗೂ ಆತನ ಸಹಚರರ ವಿರುದ್ಧ ನಗರದ ಶಂಕರಪುರಂ, ವಿದ್ಯಾರಣ್ಯಪುರ, ಜಿಗಣಿ, ಕೆ.ಜಿ.ನಗರ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಜಿಗಣಿ ಠಾಣೆ ಪೊಲೀಸರು ಈ ಹಿಂದೆ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದರು. ಜಾಮೀನು ಪಡೆದು ಹೊರಬಂದ ಬಳಿಕವೂ ಆರೋಪಿಗಳು ನಿವೇಶನ ಖರೀದಿ ನೆಪದಲ್ಲಿ ಬ್ಯಾಂಕ್‌ಗಳಿಂದ ಸಾಲ ಪಡೆದು ವಂಚಿಸುವ ಕೃತ್ಯ ಮುಂದುವರೆಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ....
ಜಾಹೀರಾತು ನೋಡಿ ಸ್ಕೆಚ್
ಆರೋಪಿ ಲೋಕೇಶ್ ಪತ್ರಿಕೆಗಳಲ್ಲಿ ಬರುವ ನಿವೇಶನ ಮಾರಾಟದ ಜಾಹೀರಾತು ಹಾಗೂ ನಿವೇಶನಗಳಲ್ಲಿ ಅಂಟಿಸುವ ಮಾಹಿತಿ ಫಲಕಗಳಲ್ಲಿ ಸಂಪರ್ಕ ಸಂಖ್ಯೆ ಪಡೆದು ಬಳಿಕ ನಿವೇಶನ ಖರೀದಿಸುವ ನೆಪದಲ್ಲಿ ಕರೆ ಮಾಡುತ್ತಿದ್ದ. ಬಳಿಕ ಅವರನ್ನು ಭೇಟಿಯಾಗಿ ನಿವೇಶನ ಖರೀದಿಸುವುದಾಗಿ ವ್ಯವಹಾರ ಕುದುರಿಸುತ್ತಿದ್ದ. ಬಳಿಕ .20 ಸಾವಿರ ಟೋಕನ್ ಅಡ್ವಾನ್ಸ್ ಕೊಟ್ಟು ನಿವೇಶನದ ದಾಖಲೆಗಳ ಜೆರಾಕ್ಸ್ ಪ್ರತಿ ಪಡೆಯುತ್ತಿದ್ದ.
ನಂತರ ಈ ದಾಖಲೆಗಳನ್ನು ಬಳಸಿಕೊಂಡು ನಕಲಿ ದಾಖಲೆ ಸೃಷ್ಟಿಸಿ, ತನ್ನ ಸಹಚರರನ್ನೇ ನಿವೇಶನ ಮಾರಾಟಗಾರರು ಹಾಗೂ ಖರೀದಿದಾರರನ್ನಾಗಿ ಮಾಡಿ ನಕಲಿ ದಾಖಲೆಗಳೊಂದಿಗೆ ಬ್ಯಾಂಕ್‌ಗೆ ಸಾಲಕ್ಕೆ ಅರ್ಜಿ ಹಾಕಿಸುತ್ತಿದ್ದ. ಬಳಿಕ ಖರೀದಿದಾರನ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಸುತ್ತಿದ್ದ. ಬ್ಯಾಂಕ್‌ನವರು ಸಹ ಅಸಲಿ ದಾಖಲೆ ಎಂದು ನಂಬಿ ಸಾಲ ಮಂಜೂರು ಮಾಡುತ್ತಿದ್ದರು. ಬಳಿಕ ಆರೋಪಿಗಳು ಹಣವನ್ನು ಹಂಚಿಕೊಂಡು ಪರಾರಿಯಾಗುತ್ತಿದ್ದರು....
3 ಇಎಂಐ ಕಟ್ಟಿಎಸ್ಕೇಪ್!
ಬ್ಯಾಂಕ್‌ನಿಂದ ಲಕ್ಷಾಂತರ ರು. ಸಾಲ ಪಡೆದು ಬಳಿಕ ಆರಂಭದ ಮೂರು ತಿಂಗಳು ಸಾಲದ ಕಂತು ಪಾವತಿಸುತ್ತಿದ್ದ. ಬಳಿಕ ಸಾಲದ ಕಂತು ಪಾವತಿಸದೆ ಎಸ್ಕೇಪ್ ಆಗುತ್ತಿದ್ದ. ಬ್ಯಾಂಕ್‌ನವರು ನಿವೇಶನದ ಅಸಲಿ ಮಾಲಿಕರಿಗೆ ನೋಟಿಸ್ ನೀಡುತ್ತಿದ್ದರು. ಸಾಲ ವಸೂಲಾತಿಗೆ ಪ್ರತಿನಿಧಿಗಳನ್ನು ಮನೆಯ ಬಳಿ ಕಳುಹಿಸುತ್ತಿದ್ದರು. ಈ ವೇಳೆ ನಿವೇಶನದ ಮಾಲೀಕರು ಆಘಾತಕ್ಕೆ ಒಳಗಾಗುತ್ತಿದ್ದರು. ಆರೋಪಿಗಳು ನಗರದ ಹಲವೆಡೆ ನಿವೇಶನಗಳ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‌ಗಳಿಂದ ಕೋಟ್ಯಂತರ ರು. ಸಾಲ ಪಡೆದು ವಂಚಿಸಿದ್ದಾರೆ.
Bengaluru crime: ಗ್ರಾಹಕರ ಹಣಕ್ಕೆ ಬ್ಯಾಂಕ್ ಮ್ಯಾನೇಜರ್ ಕನ್ನ; ಐಡಿಬಿಐ ಬ್ಯಾಂಕ್ ವ್ಯವಸ್ಥಾಪಕಿ ಬಂಧನ
ನೀರವ್, ಮಲ್ಯನ್ನೇ ಬಿಟ್ಟಿಲ್ವಾ!
ಪೊಲೀಸರ ವಿಚಾರಣೆ ವೇಳೆ ಆರೋಪಿ ಲೋಕೇಶ್, ‘ವಿಜಯ್ ಮಲ್ಯ, ನೀರವ್ ಮೋದಿ ಸಾವಿರಾರು ಕೋಟಿ ರು. ವಂಚಿಸಿ ಪರಾರಿಯಾಗಿದ್ದಾರೆ. ಅವರನ್ನೇ ಏನು ಮಾಡದೆ ಬಿಡಲಾಗಿದೆ. ಇನ್ನು ನಾನು ಕೇವಲ .3-4 ಕೋಟಿ ವಂಚನೆ ಮಾಡಿದ್ದೇನೆ. ಇದನ್ನೂ ಕೇಳುತ್ತೀರಾ? ನಾನೇನು ನಿಮಗೆ ವಂಚನೆ ಮಾಡಿಲ್ಲ. ಬ್ಯಾಂಕ್‌ಗಳಿಗೆ ವಂಚನೆ ಮಾಡಿದ್ದೇನೆ. ಇದಕ್ಕೆ ನೀವು ಏಕೆ ತಲೆಕೆಡಿಸಿಕೊಳ್ಳುವಿರಿ’ ಎಂದು ಪೊಲೀಸರನ್ನೇ ಪ್ರಶ್ನಿಸಿದ್ದಾನೆ ಎಂದು ತಿಳಿದು ಬಂದಿದೆ.