ಐಷಾರಾಮಿ ಕಾರುಗಳಿಗೆ ರಾಜ್ಯದಲ್ಲಿ ಮೋಟಾರು ವಾಹನ ತೆರಿಗೆ ಪಾವತಿಸದ ಕಾರಣಕ್ಕಾಗಿ ಉದ್ಯಮಿ ಕೆಜಿಎಫ್‌ ಬಾಬು ಅವರ ವಸಂತನಗರ ನಿವಾಸದ ಮೇಲೆ ದಾಳಿ ಮಾಡಿದ ಜಂಟಿ ಸಾರಿಗೆ ಆಯುಕ್ತೆ ಶೋಭಾ ನೇತೃತ್ವದ ಸಾರಿಗೆ ಅಧಿಕಾರಿಗಳ ತಂಡ, ₹38.36 ಲಕ್ಷ ತೆರಿಗೆ ವಸೂಲಿ ಮಾಡಿದ್ದಾರೆ.

ಬೆಂಗಳೂರು : ಐಷಾರಾಮಿ ಕಾರುಗಳಿಗೆ ರಾಜ್ಯದಲ್ಲಿ ಮೋಟಾರು ವಾಹನ ತೆರಿಗೆ ಪಾವತಿಸದ ಕಾರಣಕ್ಕಾಗಿ ಉದ್ಯಮಿ ಕೆಜಿಎಫ್‌ ಬಾಬು ಅವರ ವಸಂತನಗರ ನಿವಾಸದ ಮೇಲೆ ದಾಳಿ ಮಾಡಿದ ಜಂಟಿ ಸಾರಿಗೆ ಆಯುಕ್ತೆ ಶೋಭಾ ನೇತೃತ್ವದ ಸಾರಿಗೆ ಅಧಿಕಾರಿಗಳ ತಂಡ, ₹38.36 ಲಕ್ಷ ತೆರಿಗೆ ವಸೂಲಿ ಮಾಡಿದ್ದಾರೆ.

ಕೆಜಿಎಫ್‌ ಬಾಬು ಅವರು ಮಹಾರಾಷ್ಟ್ರ ನೋಂದಣಿ ಹೊಂದಿದ್ದ ಎರಡು ರೋಲ್ಸ್‌ರಾಯ್ಸ್‌ ಕಾರುಗಳನ್ನು ಹೊಂದಿದ್ದರು. ಆದರೆ ನಿಯಮದಂತೆ ರಾಜ್ಯದಲ್ಲಿ ಮೋಟಾರು ವಾಹನ ತೆರಿಗೆ ಪಾವತಿಸಿರಲಿಲ್ಲ. ಈ ಕುರಿತು ಮಾಹಿತಿ ಪಡೆದ ಸಾರಿಗೆ ಅಧಿಕಾರಿಗಳು ಬುಧವಾರ ವಸಂತನಗರದಲ್ಲಿನ ಕೆಜಿಎಫ್‌ ಬಾಬು ಅವರ ನಿವಾಸಕ್ಕೆ ತೆರಳಿ, ಎಂಎಚ್ 02 ಬಿಬಿ 0002 ಮತ್ತು ಎಂಎಚ್‌ 11 ಎಎಕ್ಸ್‌ 0001 ಮಹಾರಾಷ್ಟ್ರ ನೋಂದಣಿಯ ರೋಲ್ಸ್‌ರಾಯ್ಸ್‌ ಕಾರುಗಳಿಗೆ ತೆರಿಗೆ ಪಾವತಿಸುವಂತೆ ತಿಳಿಸಿದ್ದಾರೆ.

ಅಧಿಕಾರಿಗಳ ಜತೆಗೆ ವಾಗ್ವಾದ:ಈ ವೇಳೆ ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಕೆಲಕಾಲ ವಾಗ್ವಾದ ನಡೆಸಿದ ಕೆಜಿಎಫ್‌ ಬಾಬು, ಮಹಾರಾಷ್ಟ್ರದಲ್ಲಿ ತೆರಿಗೆ ಪಾವತಿಸಿಯೇ ಇಲ್ಲಿಗೆ ತರಲಾಗಿದೆ ಎಂದು ತಿಳಿಸಿದ್ದಾರೆ. ಆಗ ಸಾರಿಗೆ ಅಧಿಕಾರಿಗಳು, ಹೊರರಾಜ್ಯಗಳಲ್ಲಿ ತೆರಿಗೆ ಪಾವತಿಸಿದ್ದರೂ, 1 ವರ್ಷಗಳಿಗಿಂತ ಹೆಚ್ಚಿನ ಅವಧಿ ಆ ವಾಹನ ಇಲ್ಲಿ ಸಂಚರಿಸುತ್ತಿದ್ದರೆ ಅದಕ್ಕೆ ರಾಜ್ಯದ ತೆರಿಗೆ ಪಾವತಿಸಬೇಕು ಎಂದಿದ್ದಾರೆ. ಅದಕ್ಕೊಪ್ಪಿದ ಕೆಜಿಎಫ್‌ ಬಾಬು, ಎಂಎಚ್ 02 ಬಿಬಿ 0002 ಸಂಖ್ಯೆಯ ರೋಲ್ಸ್‌ರಾಯ್ಸ್‌ ಕಾರಿಗೆ 19.83 ಲಕ್ಷ ರು. ಮತ್ತು ಎಂಎಚ್‌ 11 ಎಎಕ್ಸ್‌ 0001 ಸಂಖ್ಯೆಯ ರೋಲ್ಸ್‌ರಾಯ್ಸ್‌ ಕಾರಿಗೆ 18.53 ಲಕ್ಷ ರು. ತೆರಿಗೆ ಪಾವತಿಸಿದ್ದಾರೆ.

ಬಾಲಿವುಡ್‌ ನಟರ ಕಾರುಗಳುಎರಡೂ ಕಾರುಗಳನ್ನು ಈ ಹಿಂದೆ ಬಾಲಿವುಡ್‌ ನಟರು ಬಳಸುತ್ತಿದ್ದ ಕಾರುಗಳಾಗಿವೆ. ಎಂಎಚ್ 02 ಬಿಬಿ 0002 ನೋಂದಣಿ ಸಂಖ್ಯೆಯ ರೋಲ್ಸ್‌ರಾಯ್ಸ್‌ ಘೋಸ್ಟ್‌ ಕಾರು ಅಮೀರ್‌ ಖಾನ್‌ ಮತ್ತು ಎಂಎಚ್‌ 11 ಎಎಕ್ಸ್‌ 0001 ನೋಂದಣಿ ಸಂಖ್ಯೆಯ ರೋಲ್ಸ್‌ರಾಯ್ಸ್‌ ಪ್ಯಾಂಟಂ ಕಾರು ಅಮಿತಾಬ್‌ ಬಚ್ಚನ್‌ ಅವರು ಬಳಸುತ್ತಿದ್ದರು. ಆ ಕಾರುಗಳನ್ನು ತಾವು ಖರೀದಿಸಿದ್ದಾಗಿ ಕೆಜಿಎಫ್‌ ಬಾಬು ತಿಳಿಸಿದ್ದಾರೆ.