ಬೆಂಗಳೂರಿನ ಹೆಬ್ಬಾಳ ಕೆಂಪಾಪುರದ ಕೆಎಫ್‌ಸಿ ಬ್ರಾಂಚ್‌ನಿಂದ ಸ್ವಿಗ್ಗಿ ಮೂಲಕ ಆರ್ಡರ್ ಮಾಡಿದ ಚಿಕನ್‌ನಲ್ಲಿ ಹುಳ ಪತ್ತೆಯಾಗಿದೆ. ಈ ಘಟನೆಯು ಬ್ರಾಂಡೆಡ್ ಹೋಟೆಲ್‌ಗಳಲ್ಲಿನ ಆಹಾರದ ಗುಣಮಟ್ಟ ಮತ್ತು ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಹಳೆಯ ಸ್ಟಾಕ್ ಮಾರಾಟದ ಆರೋಪ ಕೇಳಿಬಂದಿದೆ.
ಬೆಂಗಳೂರು (ಡಿ.4): ಬೆಂಗಳೂರು ನಗರದಲ್ಲಿನ ಬ್ರಾಂಡೆಡ್ ಹೋಟೆಲ್‌ಗಳ ಆಹಾರದ ಗುಣಮಟ್ಟದ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ. ಹೆಬ್ಬಾಳ ಕೆಂಪಾಪುರದ ಯೋಗೇಶ್ ನಗರದಲ್ಲಿರುವ ಕೆಎಫ್‌ಸಿ (KFC) ಬ್ರಾಂಚ್‌ನಲ್ಲಿ ನಡೆದ ಘಟನೆಯು ಗ್ರಾಹಕರಲ್ಲಿ ಆತಂಕ ಮೂಡಿಸಿದೆ.
KFC ಚಿಕನ್‌ಲ್ಲಿ ಹುಳ ಪತ್ತೆ, ಗ್ರಾಹಕ ಕಂಗಾಲು:
ನಗರದ ನಿವಾಸಿಯಾದ ಪವನ್ ಎಂಬುವವರು ನಿನ್ನೆ (ಬುಧವಾರ) ರಾತ್ರಿ ಸ್ವಿಗ್ಗಿ ಮೂಲಕ ಕೆಎಫ್‌ಸಿ ಚಿಕನ್ ಅನ್ನು ಮನೆಗೆ ಆರ್ಡರ್ ಮಾಡಿದ್ದರು. ಆದರೆ, ಆರ್ಡರ್ ಬಂದ ಚಿಕನ್ ಅನ್ನು ಪರಿಶೀಲಿಸಿದಾಗ ಅದರಲ್ಲಿ ಹುಳ ಇರುವುದು ಕಂಡುಬಂದಿದೆ. ಚಿಕನ್‌ನಲ್ಲಿ ಹುಳುಗಳು ಹೊರಬರುತ್ತಿರೋದು ನೋಡಿ ಶಾಕ್ ಆಗಿದ್ದಾರೆ.
ಹಳೆಯ ಸ್ಟಾಕ್ ಮಾರಾಟದ ಆರೋಪ
ಫ್ರೆಶ್ ಚಿಕನ್ ಬದಲಿಗೆ, ಫ್ರಿಡ್ಜ್‌ನಲ್ಲಿಟ್ಟಿದ್ದ ಹಳೆಯ ಸ್ಟಾಕ್ ಅನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹುಳ ಇರುವುದನ್ನು ಗಮನಿಸಿದ ತಕ್ಷಣ ಪವನ್ ಅವರು ರಾತ್ರೋ ರಾತ್ರಿ ಆರ್ಡರ್ ಬಂದಿದ್ದ ಹೆಬ್ಬಾಳ ಕೆಂಪಾಪುರ ಯೋಗೇಶ್ ನಗರದ ಕೆಎಫ್‌ಸಿ ಬ್ರ್ಯಾಂಚ್‌ಗೆ ಭೇಟಿ ನೀಡಿದ್ದಾರೆ. ಆದರೆ ಈ ವೇಳೆ ಕೆಎಫ್‌ಸಿ ಸಿಬ್ಬಂದಿ ವರ್ತಿಸಿದ ರೀತಿ ಹೇಗಿತ್ತು?
ಸಿಬ್ಬಂದಿಯಿಂದ ಉಡಾಫೆ ಉತ್ತರ
ಗ್ರಾಹಕ ಪವನ್ ಈ ಬಗ್ಗೆ ಪ್ರಶ್ನಿಸಿದಾಗ, ಕೆಎಫ್‌ಸಿ ಸಿಬ್ಬಂದಿ ಸರಿಯಾದ ಉತ್ತರ ನೀಡದೆ ಉಡಾಫೆ ಮಾತುಗಳನ್ನಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಚಿಕನ್‌ನಲ್ಲಿ ಹುಳುಗಳು ಪತ್ತೆಯಾಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಬ್ರಾಂಡೆಡ್ ಹೆಸರಿನಡಿ ಕಳಪೆ ಆಹಾರ ಮಾರಾಟ ಮಾಡುತ್ತಿರುವ ಈ ವ್ಯವಸ್ಥೆಯ ಬಗ್ಗೆ ಗ್ರಾಹಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ನಗರದಲ್ಲಿನ ಆಹಾರ ಸುರಕ್ಷತೆಯ ಕುರಿತು ಮತ್ತೊಮ್ಮೆ ತೀವ್ರ ಚರ್ಚೆಗೆ ಕಾರಣವಾಗಿದೆ. ಇದುವರೆಗೂ ಕೆಎಫ್‌ಸಿ ಫ್ರೆಶ್ ಚಿಕನ್ ಎಂದೇ ನಂಬಲಾಗಿತ್ತು. ಇದೀಗ ಚಿಕನ್‌ನಲ್ಲಿ ಹುಳು ಹೊರಬರುತ್ತಿರುವುದು ನೋಡಿ ಕೆಎಫ್‌ಸಿ ಗ್ರಾಹಕರು ಬೆಚ್ಚಿಬಿದ್ದಿದ್ದಾರೆ.


