ಕರ್ನಾಟಕದ ಅಥಣಿ ಮೂಲದ ಮಹಿಳೆಯೊಬ್ಬಳು ತನ್ನ ಮೂವರು ಹೆಣ್ಣು ಮಕ್ಕಳೊಂದಿಗೆ ಮಹರಾಷ್ಟ್ರದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಎರಡು ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಚಿಕ್ಕೋಡಿ (ಅ.11): ರಾಜ್ಯದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದ ಮಹಿಳೆ ಹಾಗೂ ಆಕೆಯ ಮೂವರು ಹೆಣ್ಣುಮಕ್ಕಳ ಶವ ಮಹಾರಾಷ್ಟ್ರದ ಕೆರೆಯಲ್ಲಿ ಪತ್ತೆಯಾಗಿದೆ. ಎರಡು ದಿನಗಳ ಹಿಂದೆ ಮುಂಜಾನೆಯ ವೇಳೆಗೆ ಮನೆ ಬಿಟ್ಟುಹೋಗಿದ್ದ ತಾಯಿ ಮತ್ತು ಮಕ್ಕಳು ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಎರಡು ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮತಾರಾಷ್ಟ್ರದ ಜತ್ತ ತಾಲೂಕಿನ ಬಿಳ್ಳೂರು ಗ್ರಾಮದ ಕೆರೆಯಲ್ಲಿ ಈ ಘಟನೆ ನಡೆದಿದೆ. ಮೃತರನ್ನು 30 ವರ್ಷದ ಸುನೀತಾ ತುಕಾರಾಮ್ ಮಾಳಿ, 13 ವರ್ಷದ ಮಗಳು ಅಮೃತಾ, 9 ವರ್ಷದ ಅಂಕಿತಾ ಹಾಗೂ 7 ವರ್ಷದ ಐಶ್ವರ್ಯಾ ಶವವಾಗಿ ಪತ್ತೆಯಾಗಿದ್ದಾರೆ. ಈ ನಾಲ್ವರ ಶವ ಬಿಳ್ಳೂರು ಗ್ರಾಮದ ಕೆರೆಯಲ್ಲಿಯೇ ಪತ್ತೆಯಾಗಿದೆ. ಕಳೆದ ಭಾನುವಾರದಂದು ಇವರೆಲ್ಲರೂ ಮನೆ ಬಿಟ್ಟು ಹೋಗಿದ್ದರು. ಅದೇ ದಿನ ರಾತ್ರಿ ಊರ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಯಾವ ಕಾರಣಕ್ಕಾಗಿ ಇವರ ಸಾವಾಗಿದೆ ಎನ್ನುವ ಮಾಹಿತಿ ಇನ್ನಷ್ಟೇ ಸಿಗಬೇಕಿದೆ. ಕೌಟುಂಬಿಕ ಸಮಸ್ಯೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೇಲ್ನೋಟಕ್ಕೆ ಕಾಣುತ್ತಿದೆ. ಮಹಾರಾಷ್ಟ್ರದ ಜತ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕೆಲ ವರ್ಷಗಳ ಹಿಂದೆಯೇ ಸುನೀತಾ ಅವರನ್ನು ಮಹಾರಾಷ್ಟ್ರ ಜತ್ತ ತಾಲೂಕಿನ ಬಿಳ್ಳೂರಿಗೆ ಮದುವೆ ಮಾಡಿ ಕೊಡಲಾಗಿತ್ತು. ಆದರೆ, ಕಳೆದ ಭಾನುವಾರ ಅವರು ಒಮ್ಮಿಂದೊಮ್ಮಲೆ ಕಾಣೆಯಾಗಿದ್ದರು. ಜೊತೆಗೆ ಅವರು ಮಕ್ಕಳು ಕೂಡ ಕಾಣುತ್ತಿರಲಿಲ್ಲ. ಮನೆಯವರು ತೀವ್ರ ಹುಡುಕಾಟ ನಡೆಸಿದಾಗ ಗ್ರಾಮದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಪ್ರಕರಣ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
