ಬೆಂಗಳೂರು(ಫೆ.18): ದೇಶದಲ್ಲಿ ಉಗ್ರಗಾಮಿ ಚಟುವಟಿಕೆಗಳಿಗೆ ವಿನಿಯೋಜಿಸಲು ಹಣಕ್ಕಾಗಿ ನಗರದಲ್ಲಿ ದರೋಡೆ ನಡೆಸಿದ್ದ ಬಾಂಗ್ಲಾದೇಶ ಮೂಲದ ನಿಷೇಧಿತ ಭಯೋತ್ಪಾದಕ ಸಂಘಟನೆ ‘ಜಮಾತ್‌ ಉಲ್‌ ಮುಜಾಹಿದ್ದೀನ್‌ ಬಾಂಗ್ಲಾದೇಶ್‌(ಜೆಎಂಬಿ)’ನ 11 ಶಂಕಿತ ಉಗ್ರರ ವಿರುದ್ಧ ನಗರದ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಆರೋಪಪಟ್ಟಿ ಸಲ್ಲಿಸಿದೆ.

2018-19ರ ಅವಧಿಯಲ್ಲಿ ನಗರ ಹೊರವಲಯದ ಅತ್ತಿಬೆಲೆ, ಕೆ.ಆರ್‌.ಪುರ ಹಾಗೂ ಕೊತ್ತನೂರು ಠಾಣಾ ವ್ಯಾಪ್ತಿಯಲ್ಲಿ ನಾಲ್ಕು ಕಡೆ ಶಂಕಿತರ ಉಗ್ರರು ದರೋಡೆ ಕೃತ್ಯ ಎಸಗಿದ್ದರು. ಈ ಬಗ್ಗೆ 2020ರ ಫೆಬ್ರವರಿ ಮತ್ತು ಏಪ್ರಿಲ್‌ನಲ್ಲಿ ಪ್ರತ್ಯೇಕ ಎಫ್‌ಐಆರ್‌ ದಾಖಲಿಸಿಕೊಂಡು ಎನ್‌ಐಎ ತನಿಖೆ ನಡೆಸಿತು. ಪ್ರಮುಖ ಆರೋಪಿ ಬಾಂಗ್ಲಾದೇಶದ ಜಹೀದುಲ್ಲಾ ಇಸ್ಲಾಂ ಅಲಿಯಾಸ್‌ ಕೌಸರ್‌ (40), ಭಾರತದಲ್ಲಿ ಜೆಎಂಬಿ ಸಂಘಟನೆಗೆ ಮುಂದಾಗಿದ್ದ. ಇದಕ್ಕಾಗಿ ಹೊಸ ಸದಸ್ಯರ ನೇಮಕಾತಿ, ಶಸ್ತಾ್ರಸ್ತ್ರ ಮತ್ತು ಸ್ಫೋಟಕ ವಸ್ತುಗಳ ಸಂಗ್ರಹಕ್ಕೆ ಚಾಲನೆ ನೀಡಿದ್ದ ಎಂದು ಎನ್‌ಐಎ ಹೇಳಿದೆ.

ದೋವಲ್‌ ಕಚೇರಿ ದೃಶ್ಯ ಪಾಕ್‌ಗೆ ಕಳಿಸಿದ್ದ ಉಗ್ರ!

2018ರ ಆಗಸ್ಟ್‌ನಲ್ಲಿ ರಾಮನಗರದಲ್ಲಿ ಜೆಎಂಬಿ ಉಗ್ರ ಕೌಸರ್‌ ಸೇರಿ 6 ಶಂಕಿತರನ್ನು ಬಂಧಿಸಿದ ಎನ್‌ಐಎ, ಆನಂತರ ಪ್ರತ್ಯೇಕ ಕಾರ್ಯಾಚರಣೆಯಲ್ಲಿ 11 ಮಂದಿಯನ್ನು ಸೆರೆ ಹಿಡಿದಿದ್ದರು. ಬಾಂಗ್ಲಾದೇಶದಲ್ಲಿ ಸರಣಿ ಬಾಂಬ್‌ ಸ್ಫೋಟದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಕೌಸರ್‌, ಜೈಲಿನಿಂದ ತಪ್ಪಿಸಿಕೊಂಡು 2011ರಲ್ಲಿ ಪಶ್ಚಿಮ ಬಂಗಾಳಕ್ಕೆ ಬಂದಿದ್ದ. 2013ರ ಜು.7ರಂದು ಬಿಹಾರದ ಬೋಧ್‌ಗಯಾದಲ್ಲಿ ಜೆಎಂಬಿ ಶಂಕಿತ ಉಗ್ರರು ಬಾಂಬ್‌ ಸ್ಫೋಟಿಸಿದ್ದರು. ಬಳಿಕ ಕರ್ನಾಟಕದಲ್ಲಿ ತಲೆಮರೆಸಿಕೊಂಡಿದ್ದ ಶಂಕಿತ ಉಗ್ರರು, ಜೆಎಂಬಿ ಸಂಘಟನೆಗೆ ಹಣಕ್ಕಾಗಿ ಬೆಂಗಳೂರಿನಲ್ಲಿ ದರೋಡೆ ನಡೆಸಿದ್ದರು. ಈ ವಿಚಾರವು ಶಂಕಿತ ಉಗ್ರ ಕೌಸರ್‌ ವಿಚಾರಣೆ ಬೆಳಕಿಗೆ ಬಂದಿತು ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತ ಶಂಕಿತ ಉಗ್ರರಿವರು

ಬಾಂಗ್ಲಾದೇಶದ ಜಹೀದುಲ್ಲಾ ಇಸ್ಲಾ ಅಲಿಯಾಸ್‌ ಕೌಸರ್‌, ನಾಜಿರ್‌ ಶೇಕ್‌, ಅಸಿಫ್‌ ಇಕ್ಬಾಲ್‌, ಅಬ್ದುಲ್‌ ಕರೀಂ, ಮುಶ್ರಫ್‌ ಹುಸೇನ್‌, ಖಾದೊರ್‌ ಖಾಜಿ, ಹಬೀಬುರ್‌ ರೆಹಮಾನ್‌, ಮುಸ್ತಾಫಿಜರ್‌ ರೆಹಮಾನ್‌, ಮೊಹಮ್ಮದ್‌ ದಿಲ್ವಾರ್‌ ಹುಸೇನ್‌, ಅರೀಫ್‌ ಹುಸೇನ್‌.