ಬೆಂಗಳೂರು(ಡಿ.29): ಮೆಜೆಸ್ಟಿಕ್‌ನಲ್ಲಿರುವ ಸರ್ಕಾರಿ ಆಯುರ್ವೇದ ಕಾಲೇಜು ಸಮೀಪ ಮಾದಕ ವಸ್ತು ಮಾರಾಟಕ್ಕೆ ಯತ್ನಿಸಿದ್ದ ಇಬ್ಬರು ಉಪ್ಪಾರಪೇಟೆ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಕಾಟನ್‌ಪೇಟೆ ಕೆ.ರಾಜು ರಾಮ್‌ ಹಾಗೂ ಕಾಮಾಕ್ಷಿಪಾಳ್ಯದ ಉತ್ತಮ್‌ ಬಂಧಿತರಾಗಿದ್ದು, ಆರೋಪಿಗಳಿಂದ 1 ಕೆ.ಜಿ. 25ಗ್ರಾಂ ಅಫೀಮು ಮತ್ತು 2 ಮೊಬೈಲ್‌ ಜಪ್ತಿ ಮಾಡಲಾಗಿದೆ. ಡ್ರಗ್ಸ್‌ ಖರೀದಿಸುವ ಸೋಗಿನಲ್ಲಿ ಆಯುರ್ವೇದ ಕಾಲೇಜು ಬಳಿಗೆ ಪೆಡ್ಲರ್‌ಗಳನ್ನು ಕರೆಸಿಕೊಂಡು ಇನ್ಸ್‌ಪೆಕ್ಟರ್‌ ಸಿ.ಬಿ.ಶಿವಸ್ವಾಮಿ ನೇತೃತ್ವದ ತಂಡ ಬಂಧಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಊಟದ ಬಾಕ್ಸ್‌ನಲ್ಲಿ ಅಫೀಮು ಸಾಗಾಣಿಕೆ:

ಆರೋಪಿಗಳು ಮೂಲತಃ ರಾಜಸ್ಥಾನ ರಾಜ್ಯದವರಾಗಿದ್ದು, ಹಲವು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದಾರೆ. ಚಿಕ್ಕಪೇಟೆಯಲ್ಲಿ ಚಿನ್ನಾಭರಣ ಮಾರಾಟ ಮಳಿಗೆಯಲ್ಲಿ ಆರೋಪಿಗಳು ಕೆಲಸ ಮಾಡುತ್ತಿದ್ದರು. ಹಣದಾಸೆಗೆ ಡ್ರಗ್ಸ್‌ ದಂಧೆಗಿಳಿದ ಆರೋಪಿಗಳು, ತಮ್ಮೂರಿನಲ್ಲಿ ಕಡಿಮೆ ಬೆಲೆಗೆ ಸಿಗುವ ಅಫೀಮನ್ನು ನಗರಕ್ಕೆ ತಂದು ಮಾರಲು ನಿರ್ಧರಿಸಿದ್ದರು. ಅಂತೆಯೇ ರಾಜಸ್ಥಾನಕ್ಕೆ ಹೋಗಿ ರೈಲಿನಲ್ಲಿ ಬೆಂಗಳೂರಿಗೆ ಮರಳುವಾಗ ಊಟದ ಬಾಕ್ಸ್‌ಗಳಲ್ಲಿ ಅಫೀಮು ಅಡಗಿಸಿ ತರುತ್ತಿದ್ದರು. ಬಳಿಕ ತಲಾ 100 ಗ್ರಾಂಗೆ .25 ಸಾವಿರಕ್ಕೆ ಮಾರುತ್ತಿದ್ದರು.

150 ಬಾರ್ ಸೇರಿ ರೌಡಿಗಳ ಮನೆಗಳ ಮೇಲೆ ಪೊಲೀಸರ ದಾಳಿ

ಇದರಿಂದ ಸಿಕ್ಕಾಪಟ್ಟೆಲಾಭ ಸಿಗುತ್ತಿತ್ತು. ಕೆಲ ದಿನಗಳ ಹಿಂದೆ ಈ ಇಬ್ಬರ ಡ್ರಗ್ಸ್‌ ದಂಧೆಗೆ ಬಗ್ಗೆ ಬಾತ್ಮೀದಾರರ ಮೂಲಕ ಇನ್ಸ್‌ಪೆಕ್ಟರ್‌ ಶಿವಸ್ವಾಮಿ ಅವರಿಗೆ ಮಾಹಿತಿ ಸಿಕ್ಕಿದೆ. ಕೂಡಲೇ ಪೆಡ್ಲರ್‌ಗಳ ಸೆರೆ ಹಿಡಿಯಲು ಕಾರ್ಯಪ್ರವೃತ್ತರಾದ ಅವರು, ರಾಜು ಹಾಗೂ ಉತ್ತಮ್‌ ಅವರಿಗೆ ಗ್ರಾಹಕರ ಸೋಗಿನಲ್ಲಿ ಕರೆ ಮಾಡಿದ್ದರು. ತಮಗೆ ಅಫೀಮು ಬೇಕಿದೆ. ಮೆಜೆಸ್ಟಿಕ್‌ ಬಳಿಗೆ ಬಂದರೆ ಖರೀದಿಸುವುದಾಗಿ ಹೇಳಿದ್ದರು. ಈ ಮಾತು ನಂಬಿದ ಆರೋಪಿಗಳು ಡ್ರಗ್ಸ್‌ ಪೂರೈಸಲು ಬಂದಾಗ ಖಾಕಿ ಖೆಡ್ಡಾಕ್ಕೆ ಬಿದ್ದಿದ್ದಾರೆ ಎಂದು ಮೂಲಗಳು ಹೇಳಿವೆ.