ಗದ್ದನಕೇರಿ ರಾಮಾರೂಢ ಶ್ರೀಗಳಿಗೆ 1 ಕೋಟಿ ರೂ. ವಂಚಿಸಿದ್ದ ಜೆಡಿಎಸ್ ನಾಯಕ ಪ್ರಕಾಶ ಮುಧೋಳ ಅರೆಸ್ಟ್!
ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡು ಮಠದ ಸ್ವಾಮೀಜಿಗೆ 1 ಕೋಟಿ ರೂ. ವಂಚಿಸಿದ ಜೆಡಿಎಸ್ ನಾಯಕ ಪ್ರಕಾಶ್ ಮುಧೋಳನನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯ ಪೊಲೀಸರನ್ನು ಬಳಸಿಕೊಂಡು ಸ್ವಾಮೀಜಿಗೆ ಬೆದರಿಕೆ ಹಾಕಿ ಎರಡು ಕಂತುಗಳಲ್ಲಿ ಹಣ ಪಡೆದಿದ್ದಾನೆ.
ಬಾಗಲಕೋಟೆ (ಅ.01): ನಾನು ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿ (ಎಡಿಜಿಪಿ) ಎಂದು ಹೇಳಿಕೊಂಡು ಗದ್ದನಕೇರಿಯ ರಾಮಾರೂಢ ಮಠದ ಸ್ವಾಮೀಜಿಗೆ ನಿಮ್ಮ ಮೇಲೆ ಗಂಭೀರ ಆರೋಪ ಬಂದಿದೆ ಎಂದು ಎರಡು ಕಂತಿನಲ್ಲಿ 1 ಕೋಟಿ ರೂ. ಪಡೆದು ವಂಚನೆ ಮಾಡಿದ್ದ ಜೆಡಿಎಸ್ ನಾಯಕ ಪ್ರಕಾಶ್ ಮುಧೋಳನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಪೊಲೀಸರು 87 ಲಕ್ಷ ರೂ. ವಸೂಲಿ ಮಾಡಿದ್ದಾರೆ.
ಸಿನಿಮೀಯ ರೀತಿ ಪೋಲಿಸರನ್ನು ಬಳಸಿಕೊಂಡು ಪರಮ ರಾಮರೂಢ ಸ್ವಾಮೀಜಿಗೆ ಬರೋಬ್ಬರಿ 1 ಕೋಟಿ ರೂಪಾಯಿ ವಂಚನೆ ಮಾಡಿದ ಕಿರಾತಕನನ್ನು ಪೊಲೀಸರು ಬಂಧಿಸಿದ್ದಾರೆ. ನಾನು ಬೆಂಗಳೂರು ಡಿಎಸ್ಪಿ ಅಂತ ಹೇಳಿ ಸ್ಥಳೀಯ ಪೋಲಿಸರನ್ನೇ ಮಠಕ್ಕೆ ಕಳುಹಿಸಿ ಸ್ವಾಮೀಜಿಗೆ ಬೆದರಿಕೆ ಹಾಕಿದ್ದನು. ಆಗ ಪೋಲಿಸರು ಸ್ವಾಮೀಜಿ ಮಠಕ್ಕೆ ಬಂದಿದ್ದನ್ನು ನೋಡಿ ಮತ್ತಷ್ಟು ಭಯಗೊಂಡಿದ್ದ ಸ್ವಾಮೀಜಿ, ತನ್ನ ಮಠದ ಸಿಬ್ಬಂದಿ ಅಥವಾ ತನ್ನಿಂದ ಏನಾದರೂ ತಪ್ಪಾಗಿರಬಹುದು ಎಂದು ಹಣ ಕೊಡಲು ಒಪ್ಪಿಕೊಂಡಿದ್ದಾರೆ. ಇದಾದ ನಂತರ ಎರಡು ಕಂತುಗಳಲ್ಲಿ ಸ್ವಾಮೀಜಿಯಿಂದ ಬರೋಬ್ಬರಿ 1 ಕೋಟಿ ರೂ. ಹಣವನ್ನು ಪಡೆದು ನಂತರ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟು ಸಿಕ್ಕಿ ಬಿದ್ದಿದ್ದಾನೆ.
ಇದನ್ನೂ ಓದಿ: ಬಾಗಲಕೋಟೆ: ಪೊಲೀಸರ ಹೆಸರಲ್ಲಿ ಸ್ವಾಮೀಜಿಗೆ 1 ಕೋಟಿ ವಂಚನೆ
ಸ್ವಾಮೀಜಿಗೆ ವಂಚಿಸಿ ಸಿಕ್ಕಿಬಿದ್ದ ಆರೋಪಿ ಪ್ರಕಾಶ್ ಮುಧೋಳ ಎಂದು ಗುರುತಿಸಲಾಗಿದೆ. ಈತ ಕಳೆದ 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ರಾಮದುರ್ಗ ವಿಧಾನಸಭೆಯಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋತಿದ್ದರು. ಆದರೆ, ಇದೀಗ ಸ್ವಾಮೀಜಿಗೆ ಪೊಲೀಸರ ಹೆಸರಿನಲ್ಲಿ ಬೆದರಿಕೆ ಹಾಕಿ 1 ಕೋಟಿ ರೂ. ಹಣ ವಂಚಿಸಿ ಪೊಲೀಸರ ಅತಿಥಿಯಾಗಿದ್ದಾನೆ. ಈತನ ವಿರುದ್ಧ 12 ಕೇಸ್ ದಾಖಲು ಆಗಿದೆ. ಪೊಲೀಸರು ಬಂಧಿಸಿದ ಪ್ರಕಾಶ್ ಮುಧೋಳನ ಕಾರಿನಲ್ಲಿ ಪೊಲೀಸರು ಬಳಸುವಂತ ಮಾದರಿಯ ವಾಕಿಟಾಕಿ, ಪೊಲೀಸರ ಸೈರನ್, ಪೊಲೀಸ್ ವರ್ಲ್ಡ್ ಚಾನಲ್ ಲೋಗೊ, ಮೂರು ಮೊಬೈಲ್, ಎರಡು ಚೆಕ್ ಹಾಗೂ ನಾಲ್ಕು ಬಾಂಡ್ ಜಪ್ತಿ ಮಾಡಲಾಗಿದೆ. ಈತನ ವಿರುದ್ಧ 3 ಕಳ್ಳತನ, 3 ಚೀಟಿಂಗ್, 3ಸುಲಿಗೆ ಹಾಗೂ ಸಾರ್ವಜನಿಕ ಅಡತಡೆ ಸೇರಿದಂತೆ ಒಟ್ಟು 12 ಕೇಸ್‌ಗಳಿವೆ ಎಂದು ಬೆಳಗಾವಿ ಉತ್ತರ ವಲಯ ಐಜಿಪಿ ವಿಕಾಸ ಕುಮಾರ ಮಾಹಿತಿ ನೀಡಿದ್ದಾರೆ.
ತುಮಕೂರು: ನೆಲಹಾಳ್ ಕ್ರಾಸ್ ಬಳಿ ಹೈವೇಯಲ್ಲಿ ಕಾರು ಅಡ್ಡಗಟ್ಟಿ 1 ಕೋಟಿ ಹಣ ದೋಚಿದ ಕಳ್ಳರು
ಬಾಗಲಕೋಟೆ ಎಸ್ ಪಿ ಅಮರನಾಥ ರೆಡ್ಡಿ ನೇತೃತ್ವದಲ್ಲಿ ಮೂರು ಪೊಲೀಸ್ ತಂಡ ರೆಡಿ ಮಾಡಲಾಗುತ್ತದೆ. ತಕ್ಷಣ ಕ್ರಮ ಕೈಗೊಂಡು ಒಂದೇ ದಿನದಲ್ಲಿ ಪ್ರಕಾಶ್ ಮುಧೋಳ ಬಂಧನ ಮಾಡಲಾಗಿದೆ. ಪ್ರಕರಣದಲ್ಲಿ ಇನ್ನು ಮೂವರು ಭಾಗಿಯಾಗಿದ್ದಾರೆ. ಪ್ರಕಾಶ್ ಮುಧೋಳನಿಂದ 87,19,500 ರೂ. ಹಣವನ್ನು ಜಪ್ತಿ ಮಾಡಿದ್ದಾರೆ. ಜೊತೆಗೆ, ಇನ್ನೋವಾ, ಔರಾ ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಪ್ರಕಾಶ್ ಮುಧೋಳ ತನ್ನ ಕಾರನ್ನು ಪೊಲೀಸ್ ವಾಹನ ರೀತಿ ಕಾರು ಸಿದ್ದಪಡಿಸಿದ್ದನು. ಇದೀಗ ಸ್ವಾಮೀಜಿಗೆ ಏನೆಂದು ಬೆದರಿಕೆ ಹಾಕಿದ್ದ, ಈ ಕೇಸಿನಲ್ಲಿ ಯಾರಾರ ಪಾತ್ರ ಇದೆ ಎಂಬ ಬಗ್ಗೆ ತನಿಖೆ ಮುಂದುವರೆಯುತ್ತಿದೆ.