ಹಿರಿಯ ಐಪಿಎಸ್ ಅಧಿಕಾರಿಯೊಬ್ಬರ ಮಕ್ಕಳ ಜತೆ ದುರ್ವತನೆ ತೋರಿದ ಆರೋಪದ ಮೇರೆಗೆ ಅಪರಿಚಿತರ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು (ಮೇ.06): ಎರಡು ದಿನಗಳ ಹಿಂದೆ ನಗರದ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರ್‌ಸಿಬಿ ಮತ್ತು ಸಿಎಸ್‌ಕೆ ತಂಡಗಳ ಐಪಿಎಲ್ ಪಂದ್ಯದ ವೇಳೆ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರ ಮಕ್ಕಳ ಜತೆ ದುರ್ವತನೆ ತೋರಿದ ಆರೋಪದ ಮೇರೆಗೆ ಅಪರಿಚಿತರ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐಪಿಎಲ್ ಪಂದ್ಯದ ವೀಕ್ಷಣೆಗೆ ಅಧಿಕಾರಿ ಮಕ್ಕಳು ಡೈಮಂಡ್ ಬಾಕ್ಸ್‌ನಲ್ಲಿ ಕುಳಿತಿದ್ದಾಗ ಈ ಘಟನೆ ನಡೆದಿದ್ದು, ಐಪಿಎಸ್ ಅಧಿಕಾರಿ ಪತ್ನಿ ದೂರು ಆಧರಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. 

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಸ್ ಆವೃತ್ತಿಯ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡಗಳ ಮಧ್ಯೆ ಶನಿವಾರ ಪಂದ್ಯ ನಡೆದಿತ್ತು. ಕ್ರಿಕೆಟ್ ವೀಕ್ಷಣೆ ವೇಳೆ ನನ್ನ ಮಕ್ಕಳಿಗೆ ವಿನಾಕಾರಣ ವ್ಯಕ್ತಿಯೊಬ್ಬರು ಜೋರಾಗಿ ಕಿರುಚಾಡಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ ನನ್ನ ಮಗಳ ಜತೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಈ ವರ್ತನೆಗೆ ಆಕ್ಷೇಪಿಸಿದ್ದಕ್ಕೆ ಅವಾಚ್ಯ ಶಬ್ಧಗಳಿಂದ ಸಹ ಆರೋಪಿತರು ನಿಂದಿಸಿದರು. ಈ ಘಟನೆಯನ್ನು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ. ನನ್ನ ಮಕ್ಕಳಿಗೆ ತೊಂದರೆ ಕೊಟ್ಟಿರುವ ಆರೋಪಿತರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಉಲ್ಲೇಖವಾಗಿದೆ.

ಹಿತ್ತಲಿನಲ್ಲಿ ಗಾಂಜಾ ಬೆಳೆದ ವೃದ್ಧ: ಕೇಸ್‌ ರದ್ದುಪಡಿಸಿದ ಹೈಕೋರ್ಟ್‌

ಪತ್ನಿ ಹತ್ಯೆ ಮಾಡಿದ ಪತಿ ವಶಕ್ಕೆ: ಕೌಟುಂಬಿಕ ವಿಚಾರಕ್ಕೆ ನಡೆದ ಜಗಳದಲ್ಲಿ ಪತಿಯೇ ಕಬ್ಬಿಣದ ರಾಡ್‌ನಿಂದ ಪತ್ನಿ ಮೇಲೆ ಹಲ್ಲೆ ನಡೆಸಿ ಹತ್ಯೆಗೈದಿರುವ ಅಮಾನುಷ ಘಟನೆ ತಲಘಟ್ಟಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಲಘಟ್ಟಪುರದ ಕಾಳಪ್ಪ ಲೇಔಟ್‌ ನಿವಾಸಿ ಭಾಗ್ಯ (42) ಹತ್ಯೆಯಾದವರು. ಭಾನುವಾರ ಸಂಜೆ ಸಮಾರು 4.30ಕ್ಕೆ ಈ ಘಟನೆ ನಡೆದಿದೆ. ತಂದೆಯೇ ತಾಯಿಯ ಕೊಲೆ ಮಾಡಿರುವ ಬಗ್ಗೆ 22 ವರ್ಷದ ಪುತ್ರ ಅನುಮಾನ ವ್ಯಕ್ತಪಡಿಸಿದ್ದು, ತಂದೆ ಹಾಗೂ ಹತ್ಯೆಗೆ ಕುಮ್ಮಕ್ಕು ನೀಡಿದ ಇಬ್ಬರು ಸಂಬಂಧಿಕರ ವಿರುದ್ಧ ದೂರು ನೀಡಿದ್ದಾನೆ. ಈ ದೂರಿನ ಮೇರೆಗೆ ಮೃತಳ ಪತಿ ಶ್ರೀರಾಮ್‌ (48)ನನ್ನು ವಶಕ್ಕೆ ಪಡೆದು ವಿಚಾರಣೆ ಒಳಪಡಿಸಲಾಗಿದೆ.

ಏನಿದು ಘಟನೆ?: ಶ್ರೀರಾಮ್‌ ಮತ್ತು ಪತ್ನಿ ಭಾಗ್ಯ ಇಬ್ಬರು ಮಕ್ಕಳೊಂದಿಗೆ ಸುಮಾರು 20 ವರ್ಷಗಳಿಂದ ಕಾಳಪ್ಪ ಲೇಔಟ್‌ನಲ್ಲಿ ನೆಲೆಸಿದ್ದರು. ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಶ್ರೀರಾಮ್‌ ಇತ್ತೀಚೆಗೆ ಕೆಲಸ ಬಿಟ್ಟು ನಿರುದ್ಯೋಗಿಯಾಗಿದ್ದ. ನಿತ್ಯ ಮದ್ಯ ಸೇವಿಸಿ ಮನೆಗೆ ಬಂದು ಪತ್ನಿಗೆ ಕಿರುಕುಳ ನೀಡುತ್ತಿದ್ದ. ಕುಡಿತದ ಚಟ ಬಿಡಿಸುವ ಸಂಬಂಧ ಮದ್ಯ ವರ್ಜನ ಕೇಂದ್ರಕ್ಕೆ ಸೇರಿದ್ದ ಶ್ರೀರಾಮ್‌ 20 ದಿನಗಳ ಹಿಂದೆ ಮನೆಗೆ ಬಂದಿದ್ದ. ಆದರೂ ಚಟ ಮಾತ್ರ ಬಿಟ್ಟಿರಲಿಲ್ಲ.