ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಅಪಘಾತ, ಇನ್ಫೋಸಿಸ್, ಆ್ಯಕ್ಸೆಂಚರ್‌ನ ನಾಲ್ವರು ಟೆಕ್ಕಿ ಮೃತ!
ಬೆಂಗಳೂರಿನ ನಾಲ್ವರು ಸಾಫ್ಟ್‌ವೇರ್ ಎಂಜಿನೀಯರ್ಸ್ ಇಂದು ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ನಡೆದ ಈ ಅಫಘಾತದಲ್ಲಿ ಇನ್ಫೋಸಿಸ್ ಹಾಗೂ ಆ್ಯಕ್ಸೆಂಚರ್ ಕಂಪನಿಯ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಬೆಂಗಳೂರು(ಸೆ.27) ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಇಂದು ಭೀಕರ ಅಪಘಾತ ಸಂಭವಿಸಿದೆ. ಸ್ವಿಫ್ಟ್ ಕಾರು ನಿಂತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಂಗಳೂರಿನ ಇನ್ಫೋಸಿಸ್ ಹಾಗೂ ಆ್ಯಕ್ಸೆಂಚರ್ ಕಂಪನಿಯ ನಾಲ್ವರು ಉದ್ಯೋಗಿಗಳು ಸ್ವಿಫ್ಟ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹೆದ್ದಾರಿಯ ಬಿಜಿ ನಗರ ಬಳಿ ಈ ಅಪಘಾತ ಸಂಭವಿಸಿದೆ. ಓರ್ವ ಯುವತಿ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.
ಮೃತರನ್ನು ನಮಿತಾ, ರಘುನಾಥ್ ಭಜಂತ್ರಿ, ಪಂಕಜ್ ಶರ್ಮಾ ಹಾಗೂ ವಂಶಿ ಕೃಷ್ಣ ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ 8 ಗಂಟೆಗೆ ಈ ಅಪಘಾತ ಸಂಭವಿಸಿದೆ. ಹಾಸನದಿಂದ ಬೆಂಗಳೂರಿನತ್ತ ಮಾರುತಿ ಸುಜುಕಿ ಸ್ವಿಫ್ಟ್ ಕಾರಿನ ಮೂಲಕ ಸಾಗುತ್ತಿದ್ದ ವೇಳೆ ಘಟನೆ ನಡೆದಿದೆ. ಹೆದ್ದಾರಿಯಲ್ಲಿ ವೇಗವಾಗಿ ಸಾಗುತ್ತಿದ್ದ ಕಾರು ರಸ್ತೆ ಬದಿಯಲ್ಲಿ ನಿಂತಿದ್ದ ಸಾರಿಗೆ ಸಂಸ್ಥೆ ಬಸ್‌ಗೆ ಡಿಕ್ಕಿ ಹೊಡೆದಿದೆ. ಅತೀಯಾದ ವೇಗದಲ್ಲಿದ್ದ ಕಾರಣ ಚಾಲಕನ ನಿಯಂತ್ರಣ ತಪ್ಪಿದೆ. ಎದುರಿಗಿದ್ದ ಬಸ್‌ಗೆ ಡಿಕ್ಕಿ ಹೊಡೆದಿದೆ.
ತೀವ್ರ ವೇಗದ ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಇದರ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಟೆಕ್ಕಿಗಳು ಮೃತಪಟ್ಟಿದ್ದಾರೆ. ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿಕ್ಕಿಯಾದ ಬೆನ್ನಲ್ಲೇ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದಾರೆ. ಕಾರಿನ ಡೋರ್ ಕತ್ತರಿಸಿ ಪ್ರಯಾಣಿಕರನ್ನು ಹೊರತೆಗಿದ್ದಾರೆ. ಆದರೆ ಡಿಕ್ಕಿಯಾದ ರಭಸಕ್ಕೆ ನಾಲ್ವರ ಪ್ರಾಣ ಪಕ್ಷಿ ಹಾರಿಹೋಗಿದೆ.