ಚೈಲ್ಡ್‌ ಪೋರ್ನೋಗ್ರಫಿ ವೆಬ್‌ಸೈಟ್‌ ನಡೆಸುತ್ತಿದ್ದ ಭಾರತೀಯ ಮೂಲದ ಮನೋವೈದ್ಯನಿಗೆ ವೂಲ್ವಿಚ್ ಕ್ರೌನ್ ಕೋರ್ಟ್‌ 6 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದೆ. 

ನವದೆಹಲಿ (ಜೂ.26): ಚೈಲ್ಡ್‌ ಪೋರ್ನೋಗ್ರಫಿ ವೆಬ್‌ಸೈಟ್‌ ಹಾಗೂ ನಿಂದನಾರ್ಹ ವೆಬ್‌ಸೈಟ್‌ ನಡೆಸುತ್ತಿದ್ದ ಕಾರಣಕ್ಕೆ ಯುನೈಟೆಡ್ ಕಿಂಗ್‌ಡಂನಲ್ಲಿ ಭಾರತೀಯ ಮನೋವೈದ್ಯರಿಗೆ ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಆಗ್ನೇಯ ಲಂಡನ್‌ನ ಲೆವಿಶ್ಯಾಮ್‌ನಲ್ಲಿ ನೆಲೆಸಿರುವ 33 ವರ್ಷದ ಡಾ. ಕಬೀರ್ ಗರ್ಗ್ ಜೈಲು ಪಾಲಾಗಿರುವ ವ್ಯಕ್ತಿ. ಮಕ್ಕಳನ್ನು ಶೋಷಣೆ ಮಾಡುವ ವೆಬ್‌ಸೈಟ್‌ಅನ್ನು ನಡೆಸುತ್ತಿದ್ದ ಬಗ್ಗೆ ತಪ್ಪು ಒಪ್ಪಿಕೊಂಡ ಕಾರಣಕ್ಕೆ ವೂಲ್ವಿಚ್ ಕ್ರೌನ್ ಕೋರ್ಟ್‌ ಶಿಕ್ಷೆ ವಿಧಿಸಿದೆ ಎಂದು ಬಿಬಿಸಿ ವರದಿ ಮಾಡಿದೆ. ವೂಲ್ವಿಚ್ ಕ್ರೌನ್ ಕೋರ್ಟ್‌ನಲ್ಲಿ ಜೂನ್ 23 ರಂದು ಶಿಕ್ಷೆಗೆ ಗುರಿಯಾದ ಗಾರ್ಗ್ ಅವರನ್ನು ಆಜೀವ ಲೈಂಗಿಕ ಅಪರಾಧಿ ಎಂದು ನೋಂದಾಯಿಸಲಾಗುತ್ತದೆ. ಮಕ್ಕಳನ್ನು ಒಳಗೊಂಡ ನಿಂದನೀಯ ಚಿತ್ರಗಳ ಹಂಚಿಕೆಗೆ ಮೀಸಲಾಗಿರುವ ಡಾರ್ಕ್ ವೆಬ್ ಪ್ಲಾಟ್‌ಫಾರ್ಮ್‌ಗೆ ಅವರು "ಮಾಡರೇಟರ್" ಆಗಿ ಕಾರ್ಯನಿರ್ವಹಿಸಿದ್ದಾರೆ ಎಂದು ನ್ಯಾಯಾಲಯವು ಬಹಿರಂಗಪಡಿಸಿದೆ.

ನ್ಯಾಷನಲ್ ಕ್ರೈಮ್ ಏಜೆನ್ಸಿಯ ಆಡಮ್ ಪ್ರೀಸ್ಟ್ಲಿ, "ಮಕ್ಕಳ ಲೈಂಗಿಕ ದೌರ್ಜನ್ಯದಲ್ಲಿ ಗಾರ್ಗ್ ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ಮಕ್ಕಳ ವಿರುದ್ಧದ ಘೋರ ಅಪರಾಧಗಳನ್ನು ಹಂಚಿಕೊಂಡ ಮತ್ತು ಶಿಶುಕಾಮಿಗಳ ಜಾಗತಿಕ ಸಮುದಾಯವನ್ನು ಪ್ರವೇಶಿಸಲು ಅವರು ಡಾರ್ಕ್ ವೆಬ್ ಅನ್ನು ಬಳಸಿಕೊಂಡರು' ಎಂದಿದ್ದಾರೆ. ಲಕ್ನೋದ ಕಿಂಗ್ ಜಾರ್ಜ್ ಮೆಡಿಕಲ್ ಯೂನಿವರ್ಸಿಟಿಯಿಂದ ಎಂಬಿಬಿಎಸ್‌ ಮುಗಿಸಿದ್ದ ಗಾರ್ಗ್, ಇಂಗ್ಲೆಂಡ್‌ ಗೆ ಸ್ಥಳಾಂತರಗೊಳ್ಳುವ ಮೊದಲು ಬೆಂಗಳೂರಿನ ನಿಮಾನ್ಸ್‌ನಲ್ಲಿ ಕೆಲಸ ಮಾಡಿದ್ದರು.

ಕಬೀರ್‌ ಗಾರ್ಗ್‌ನಲ್ಲಿ ಕಳೆದ ವರ್ಷ ನವೆಂಬರ್‌ನಲ್ಲಿ ಬಂಧಿಸಲಾಯಿತು ಮತ್ತು ಜನವರಿಯಲ್ಲಿ ಮಕ್ಕಳ ಲೈಂಗಿಕ ಶೋಷಣೆ, ಜೊತೆಗೆ ಅಶ್ಲೀಲ ಚಿತ್ರಗಳ ರಚನೆ ಹಾಗೂ ಪ್ರಸಾರ, ಸೇರಿದಂತೆ ಎಂಟು ಆರೋಪಗಳಿಗೆ ತಪ್ಪೊಪ್ಪಿಕೊಂಡರು.

ವಿಶ್ವಾದ್ಯಂತ 90,000 ಸದಸ್ಯರನ್ನು ಹೊಂದಿರುವ "ದಿ ಅನೆಕ್ಸ್" ಎಂಬ ವೆಬ್‌ಸೈಟ್‌ನ ಮಾಡರೇಟರ್‌ಗಳಲ್ಲಿ ಗಾರ್ಗ್ ಕೂಡ ಒಬ್ಬನಾಗಿದ್ದ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಚೈಲ್ಡ್‌ ಪೋರ್ನೋಗ್ರಫಿಯ ನೂರಾರು ಲಿಂಕ್‌ಗಳನ್ನು ಹಂಚಿಕೊಳ್ಳುತ್ತಿದ್ದೆ ಎಂದಿರುವ ಗಾರ್ಗ್‌, ವೆಬ್‌ಸೈಟ್‌ ನಿರ್ವಹಣೆ ಮಾಡುವ ಪ್ರಮುಖ ವ್ಯಕ್ತಿಯೂ ಆಗಿದ್ದರು. "ಡಾರ್ಕ್ ವೆಬ್‌ನ ಇಂಥ ಸೈಟ್‌ಗಳಲ್ಲಿ ಸಾವಿರಾರು ಸದಸ್ಯರಿದ್ದರೂ, ಕೆಲವರು ಮಾತ್ರ ಸಿಬ್ಬಂದಿ ಸದಸ್ಯರಾಗಲು ಬದ್ಧರಾಗಿರುತ್ತಾರೆ ಎಂದು ಆಡಮ್ ಪ್ರೀಸ್ಟ್ಲಿ ತಿಳಿಸಿದ್ದಾರೆ.

ಶಾಲಾ, ಕಾಲೇಜು ಪಠ್ಯಕ್ರಮದಲ್ಲಿ ಸೆಕ್ಸ್‌ ಎಜುಕೇಶನ್‌, ರಾಜ್ಯ ಸರ್ಕಾರಕ್ಕೆ ಕೇರಳ ಹೈಕೋರ್ಟ್‌ ಒತ್ತಾಯ

"ತನ್ನ ಲ್ಯಾಪ್‌ಟಾಪ್‌ನಲ್ಲಿ ಚೈಲ್ಡ್‌ ಪೋರ್ನೋಗ್ರಫಿ ವೆಬ್‌ಸೈಟ್ ತೆರೆದಿದ್ದಾಗ, ಹಾಗೂ ಮಾಡರೇಟರ್ ಖಾತೆಗೆ ಲಾಗ್ ಇನ್ ಆಗಿರುವಾಗಲೇ ಅಂತರರಾಷ್ಟ್ರೀಯ ಜಂಟಿ ಕಾರ್ಯಾಚರಣೆಯ ಭಾಗವಾಗಿ ನವೆಂಬರ್ 2022 ರಲ್ಲಿ ಲೆವಿಶಾಮ್‌ನಲ್ಲಿರುವ ಅವರ ನಿವಾಸದಲ್ಲಿ ಕಬೀರ್‌ ಗಾರ್ಗ್‌ನನ್ನು ಬಂಧಿಸಲಾಗಿತ್ತು' ಎಂದು ಯುಕೆ ರಾಷ್ಟ್ರೀಯ ಅಪರಾಧ ಸಂಸ್ಥೆ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ವಿಚ್ಛೇದನಕ್ಕೆ ಪ್ರಚೋದನೆ ನೀಡಿದ ಆರೋಪ: ಹೆಣ್ಣು ಕೊಟ್ಟ ಅತ್ತೆಯನ್ನೇ ಹೊಡೆದು ಕೊಂದ ಅಳಿಯ

ಈ ವೇಳೆ ಅಧಿಕಾರಿಗಳು 7,000 ಕ್ಕೂ ಹೆಚ್ಚು ಅಶ್ಲೀಲ ಚಿತ್ರಗಳು ಮತ್ತು ವೀಡಿಯೊಗಳನ್ನು ಪತ್ತೆಹಚ್ಚಿದರು, ಜೊತೆಗೆ ಗಾರ್ಗ್ ಅವರು ಮನೋವೈದ್ಯರಾಗಿದ್ದ ಅವಧಿಯಲ್ಲಿ ಹೊಂದಿದ್ದ ವಿವಿಧ ವೈದ್ಯಕೀಯ ಜರ್ನಲ್ ಲೇಖನಗಳನ್ನು ಸಹ ಪತ್ತೆ ಮಾಡಿದರು. ವಶಪಡಿಸಿಕೊಂಡ ವಸ್ತುಗಳ ಪೈಕಿ "ಎ ಸ್ಟಡಿ ಆನ್ ಚೈಲ್ಡ್ ಅಬ್ಯೂಸ್ ಇಂಡಿಯಾ" ಎಂಬ ಜರ್ನಲ್ ಲೇಖನವೂ ಸೇರಿದೆ.