ಯಾವ ರೀತಿಯಲ್ಲೂ ಒಟಿಪಿ ಶೇರ್‌ ಆಗದೇ ವ್ಯಕ್ತಿಯೊಬ್ಬನ ಅಕೌಂಟ್‌ನಿಂದ 50 ಲಕ್ಷ ಹಣ ವಿತ್‌ಡ್ರಾ ಆಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಈ ಕುರಿತಾಗಿ ತನಿಖೆ ಇನ್ನೂ ಜಾರಿಯಲ್ಲಿದೆ., ಈ ವಂಚನೆಯ ಮಾಸ್ಟರ್‌ಮೈಂಡ್‌ಗಳು ಜಾರ್ಖಂಡ್‌ನ ಜಮ್ತಾರಾ ಪ್ರದೇಶದಲ್ಲಿ ನೆಲೆಸಿರಬಹುದು ಎಂದು ಪ್ರಾಥಮಿಕ ತನಿಖೆಗಳು ಸೂಚಿಸಿವೆ. 

ನವದೆಹಲಿ (ಡಿ.12): ಈಶ್ವರ ಚಂದ್ರ ವಿದ್ಯಾಸಾಗರ ಎನ್ನುವ ಮಹಾನ್‌ ವ್ಯಕ್ತಿಯ ಬಗ್ಗೆ ಹೆಚ್ಚಿನವರು ತಿಳಿದಿರಲಿಕ್ಕಿಲ್ಲ. ಮಹಾನ್‌ ಸಮಾಜ ಸುಧಾರಕದಲ್ಲಿ ಒಬ್ಬರಾದ ಇವರು ಜಾರ್ಖಂಡ್‌ನ ಬುಡಕಟ್ಟು ಜಿಲ್ಲೆ ಜಮ್ತಾರಾದಲ್ಲಿ ಬುಡಕಟ್ಟು ಹುಡುಗಿಯರಿಗೆ ಶಿಕ್ಷಣ ನೀಡುವ ಕೆಲಸಕ್ಕಾಗಿ ಸತತವಾಗಿ 18 ವರ್ಷಗಳ ಕಾಲ ಕೆಲಸ ಮಾಡಿದ್ದರು. ಆದರೆ, ಜಾರ್ಖಂಡ್‌ನ ಇದೇ ಜಿಲ್ಲೆ ಈಗ ಕೆಟ್ಟ ಕಾರಣಕ್ಕಾಗಿ ಸುದ್ದಿಯಲ್ಲಿದೆ. ಪ್ರಸ್ತುತ ಇದೇ ಜಮ್ತಾರಾ ಜಿಲ್ಲೆ ಸೈಬರ್‌ಕ್ರೈಮ್‌ನ ಪ್ರಧಾನ ಕೇಂದ್ರವಾಗಿ ದೇಶದಲ್ಲಿ ಕುಖ್ಯಾತಿ ಗಳಿಸಿದೆ. ಈ ಬಾರಿ ಭದ್ರತಾ ಸೇವಾ ಸಂಸ್ಥೆಯೊಂದರ ನಿರ್ದೇಶಕರ ಬ್ಯಾಂಕ್ ಖಾತೆಯಿಂದ 50 ಲಕ್ಷ ರೂ.ಗಳನ್ನು ವಂಚನೆ ಮಾಡುವಲ್ಲಿ ಇಲ್ಲಿನ ಗುಂಪೊಂದು ಯಶಸ್ವಿಯಾಗಿದೆ. ಸದ್ಯ ಸಿಕ್ಕಿರುವ ಮಾಹಿತಿಗಳ ಆಧಾರದಲ್ಲಿ ಹೇಳುವುದಾದರೆ, ಒಂದೇ ಬಾರಿ ಬರುವ ಪಾಸ್‌ವರ್ಡ್‌ (ಒಟಿಪಿ) ಇಲ್ಲದೆಯೇ, ಈ ಸೈಬರ್‌ ಅಪರಾಧಿಗಳು ವಹಿವಾಟು ನಡೆಸಿದ್ದಾರೆ. ಪದೇ ಪದೇ ವ್ಯಕ್ತಿಯ ಮೊಬೈಲ್‌ಗೆ ಮಿಸ್ಡ್ ಕಾಲ್ ಕೊಟ್ಟು 50 ಲಕ್ಷ ರೂ.ಗಳನ್ನು ವಂಚನೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಈ ವಂಚನೆಯ ಮಾಸ್ಟರ್‌ಮೈಂಡ್‌ಗಳು ಜಾರ್ಖಂಡ್‌ನ ಜಮ್ತಾರಾ ಪ್ರದೇಶದಲ್ಲಿ ನೆಲೆಸಿರಬಹುದು ಎಂದು ಪ್ರಾಥಮಿಕ ತನಿಖೆಗಳು ಸೂಚಿಸಿವೆ. ಹಣ ಸ್ವೀಕರಿಸಿದವರು ತಮ್ಮ ಖಾತೆಗಳನ್ನು ವಂಚಕರಿಗೆ ಬಾಡಿಗೆಗೆ ನೀಡಿರುವ ಖಾತೆದಾರರು ಆಗಿರಬಹುದು ಎಂದೂ ವರದಿಗಳು ತಿಳಿಸಿವೆ.

ಆಗಿದ್ದೇನು: ಈ ಘಟನೆ ನಡೆದಿದ್ದು ಅಕ್ಟೋಬರ್‌ 10 ರಂದು. ಭದ್ರತಾ ಸೇವೆಗಳ ಸಂಸ್ಥೆಯ ನಿರ್ದೇಶಕರು ರಾತ್ರಿ 7 ರಿಂದ 8:44 ರ ನಡುವೆ ಮಿಸ್ಡ್ ಕಾಲ್‌ಗಳನ್ನು ಸ್ವೀಕರಿಸಿದ್ದಾರೆ. ಕೆಲವೊಂದು ಕರೆಗಳನ್ನು ಅವರು ಸ್ವೀಕರಿಸಿದ್ದರೆ, ಇನ್ನೂ ಕೆಲವು ಕರೆಗಳನ್ನು ನಿರ್ಲಕ್ಷ್ಯ ಮಾಡಿದ್ದರು. ಕೆಲ ಹೊತ್ತಿನ ಬಳಿಕ ತಮ್ಮ ಮೊಬೈಲ್‌ಗೆ ಬಂದ ಸಂದೇಶಗಳನ್ನು ಅವರು ನೋಡಿದ್ದಾರೆ. ಈ ವೇಳೆ ಅವರ ಅಕೌಂಟ್‌ನಿಂದ 50 ಲಕ್ಷ ರೂಪಾಯಿ ಮೌಲ್ಯದ ಆರ್‌ಟಿಜಿಎಸ್‌ ವಹಿವಾಟು ನಡೆದಿರುವುದು ತಿಳಿದುಬಂದಿದೆ. ಹಣ ಕಳೆದುಕೊಂಡ ವ್ಯಕ್ತಿಗೆ ತಮ್ಮ ಬ್ಯಾಂಕ್‌ ಅಕೌಂಟ್‌ನಿಂದ ಸಾಕಷ್ಟು ವಹಿವಾಟು ನಡೆದಿರುವ ಬಗ್ಗೆ ಬ್ಯಾಂಕ್‌ನಿಂದಲೇ ಸಾಕಷ್ಟು ಮೆಸೇಜ್‌ಗಳು ಈ ವೇಳೆ ಬಂದಿದ್ದವು. 50 ಲಕ್ಷಕ್ಕೂ ಹೆಚ್ಚು ಮೌಲ್ಯದ ಹಲವಾರು ಆರ್‌ಟಿಜಿಎಸ್‌ ವಹಿವಾಟುಗಳನ್ನು ವಂಚಕರು ವ್ಯಕ್ತಿಯ ಕಂಪನಿಯ ಚಾಲ್ತಿ ಖಾತೆಯಿಂದ ನಡೆಸಿದ್ದಾರೆ.

ಬಿರುಸಿನ ತನಿಖೆ, ಪೊಲೀಸರ ಶಂಕೆ ಏನು?: ಈ ನಡುವೆ, ವಂಚಕರು ‘ಸಿಮ್ ಸ್ವಾಪ್’ ನಡೆಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅವರು ಆರ್‌ಟಿಜಿಎಸ್‌ ವರ್ಗಾವಣೆ ಮಾಡಿ, ಒಟಿಪಿಗೆ ಎನೇಬಲ್‌ ಮಾಡಿರುವ ಸಾಧ್ಯತೆ ಇದೆ. ಐವಿಆರ್‌ ಮೂಲಕ ಒಟಿಪಿ ಹೇಳುತ್ತಿರುವುದನ್ನು ವಂಚಕರು ಪ್ಯಾರಲಲ್‌ ಕರೆಯ ಮೂಲಕ ಕೇಳಿಸಿಕೊಂಡಿರಬಹುದು. ಅದಕ್ಕಾಗಿಯೇ ಅವರು ಮಿಸ್‌ ಕಾಲ್‌ ನೀಡಿರಬಹುದು ಎಂದಿದ್ದಾರೆ.

ಆನ್ ಲೈನ್ ವಂಚಕರು ಇಪಿಎಫ್ ಖಾತೆನೂ ಬಿಡ್ತಿಲ್ಲ; ಒಟಿಪಿ ಶೇರ್ ಮಾಡ್ಬೇಡಿ, ಖಾತೆದಾರರಿಗೆ ಇಪಿಎಫ್ಒ ಮನವಿ

ಏನಿದು ಸಿಮ್‌ ಸ್ವಾಪ್: ವಂಚಕರು ಗ್ರಾಹಕರ ಸಬ್‌ಸ್ಕ್ರೈಬರ್ ಐಡೆಂಟಿಟಿ ಮಾಡ್ಯೂಲ್ (ಸಿಮ್) ಕಾರ್ಡ್‌ಗೆ ಪ್ರವೇಶವನ್ನು ಪಡೆಯುತ್ತಾರೆ ಅಥವಾ ಗ್ರಾಹಕರ ಬ್ಯಾಂಕ್ ಖಾತೆಗೆ ಸಂಪರ್ಕಗೊಂಡಿರುವ ನೋಂದಾಯಿತ ಮೊಬೈಲ್ ಸಂಖ್ಯೆಗೆ ನಕಲಿ ಸಿಮ್ ಕಾರ್ಡ್ (ಎಲೆಕ್ಟ್ರಾನಿಕ್-ಸಿಮ್ ಸೇರಿದಂತೆ) ಪಡೆದುಕೊಳ್ಳುತ್ತಾರೆ. ವಂಚಕರು ಅನಧಿಕೃತ ವಹಿವಾಟು ನಡೆಸಲು ಇಂತಹ ನಕಲಿ ಸಿಮ್‌ನಲ್ಲಿ ಪಡೆದ ಒಟಿಪಿಯನ್ನು ಬಳಸುತ್ತಾರೆ. ವಂಚಕರು ಸಾಮಾನ್ಯವಾಗಿ ಟೆಲಿಫೋನ್/ಮೊಬೈಲ್ ನೆಟ್‌ವರ್ಕ್ ಸಿಬ್ಬಂದಿಯ ಹೆಸರಿನಲ್ಲಿ ಗ್ರಾಹಕರಿಂದ ವೈಯಕ್ತಿಕ/ಗುರುತಿನ ವಿವರಗಳನ್ನು ಸಂಗ್ರಹಿಸುತ್ತಾರೆ ಮತ್ತು ಆಫರ್‌ಗಳ ಹೆಸರಿನಲ್ಲಿ ಗ್ರಾಹಕರಿಗೆ ಕರೆ ಮಾಡುತ್ತಾರೆ. 3G ಯಿಂದ 4G ಗೆ ಸಿಮ್ ಕಾರ್ಡ್ ಅನ್ನು ಉಚಿತವಾಗಿ ಅಪ್‌ಗ್ರೇಡ್ ಮಾಡಲು ಅಥವಾ ಹೆಚ್ಚುವರಿ ಪ್ರಯೋಜನಗಳನ್ನು ಒದಗಿಸಲು SIM ಕಾರ್ಡ ಕೊಡುತ್ತೇವೆ ಎನ್ನುವ ಹೆಸರಿನಲ್ಲಿ ಅವರು ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ.

ತಲೆ ಎತ್ತಿದೆ ದಂಧೆ, ಹುಷಾರ್‌! 5ಜಿ ಅಪ್‌ಡೇಟ್‌ ಹೆಸರಲ್ಲಿ ವಂಚನೆ

ಮುನ್ನೆಚ್ಚರಿಕೆಗಳು: ನಿಮ್ಮ ಸಿಮ್ ಕಾರ್ಡ್‌ಗೆ ಸಂಬಂಧಿಸಿದ ಮಾಹಿತಿಗಳನ್ನು ಎಂದಿಗೂ ಹಂಚಿಕೊಳ್ಳಬೇಡಿ. ನಿಮ್ಮ ಫೋನ್‌ನಲ್ಲಿ ಮೊಬೈಲ್ ನೆಟ್‌ವರ್ಕ್ ಬಗ್ಗೆ ಜಾಗರೂಕರಾಗಿರಿ. ನಿಯಮಿತ ಪರಿಸರದಲ್ಲಿ ಸಾಕಷ್ಟು ಸಮಯದವರೆಗೆ ನಿಮ್ಮ ಫೋನ್‌ನಲ್ಲಿ ಯಾವುದೇ ಮೊಬೈಲ್ ನೆಟ್‌ವರ್ಕ್ ಇಲ್ಲದಿದ್ದರೆ, ನಿಮ್ಮ ಮೊಬೈಲ್ ಸಂಖ್ಯೆಗೆ ಯಾವುದೇ ನಕಲಿ ಸಿಮ್ ನೀಡಲಾಗಿಲ್ಲ ಎಂದು ಖಚಿತಪಡಿಸಿಕೊಳ್ಳಲು ತಕ್ಷಣವೇ ಮೊಬೈಲ್ ಆಪರೇಟರ್ ಅನ್ನು ಸಂಪರ್ಕಿಸಿ.