Asianet Suvarna News Asianet Suvarna News

ತಲೆ ಎತ್ತಿದೆ ದಂಧೆ, ಹುಷಾರ್‌! 5ಜಿ ಅಪ್‌ಡೇಟ್‌ ಹೆಸರಲ್ಲಿ ವಂಚನೆ

* ಕರೆ ಮಾಡಿ ಬ್ಯಾಂಕ್‌ನಿಂದ ಹಣ ಎಗರಿಸ್ತಾರೆ
* ಒಟಿಪಿ, ಲಿಂಕ್‌ ಕ್ಲಿಕ್‌ ಹೆಸರಲ್ಲಿ ಭಾರಿ ಮೋಸ
* ಸಾರ್ವಜನಿಕರಿಗೆ ಪೊಲೀಸರ ಎಚ್ಚರಿಕೆ ಸಂದೇಶ

5g internet avoid the fake call to update 4g sim to 5g network gvd
Author
First Published Oct 11, 2022, 3:00 AM IST

ಬೆಂಗಳೂರು (ಅ.11): ದೇಶದಲ್ಲಿ 5ಜಿ ಮೊಬೈಲ್‌ ಸೇವೆ ಆರಂಭವಾಗಿರುವ ಈ ಹೊತ್ತಿನಲ್ಲಿ ಸೈಬರ್‌ ಕಿಡಿಗೇಡಿಗಳು ‘ನೆಟ್‌ವರ್ಕ್ ಅಪ್‌ಡೇಟ್‌’ ಹೆಸರಿನಲ್ಲಿ ಸಾರ್ವಜನಿಕರನ್ನು ವಂಚಿಸುವ ಸಾಧ್ಯತೆಯಿದೆ. ಈ ಬಗ್ಗೆ ಎಚ್ಚರ ವಹಿಸುವಂತೆ ರಾಜ್ಯ ಪೊಲೀಸರು ಮನವಿ ಮಾಡಿದ್ದಾರೆ.

ಈಗಾಗಲೇ ಬೆಂಗಳೂರು ಸೇರಿದಂತೆ ದೇಶದ ಆಯ್ದ ನಗರಗಳಲ್ಲಿ ಪ್ರಾಯೋಗಿಕವಾಗಿ 5ಜಿ ನೆಟ್‌ವರ್ಕ್ ಸೇವೆ ಆರಂಭಿಸಲಾಗಿದೆ. ಹೀಗಾಗಿ ಜನರು 4ಜಿಯಿಂದ 5ಜಿಗೆ ಅಪ್‌ಡೇಟ್‌ ಆಗಲು ಕಾತುರರಾಗಿದ್ದಾರೆ. ಈ ಸಂದರ್ಭದ ಲಾಭ ಪಡೆದು ಸಾರ್ವಜನಿಕರನ್ನು ವಂಚಿಸಲು ಸೈಬರ್‌ ವಂಚಕರು ಹೊಂಚು ಹಾಕಿದ್ದಾರೆ. ಹೀಗಾಗಿ ರಾಜ್ಯ ಪೊಲೀಸರು ಎಲ್ಲಾ ಜಿಲ್ಲೆಗಳಲ್ಲಿ ಸೈಬರ್‌ ವಂಚನೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಆಯಾ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದಾರೆ. ಜಿಲ್ಲಾ ಕೇಂದ್ರಗಳಲ್ಲಿ ಕರಪತ್ರ ಮುದ್ರಿಸಿ ಸಾರ್ವಜನಿಕ ಸ್ಥಳಗಳಲ್ಲಿ ಹಂಚಲು ಮುಂದಾಗಿದ್ದಾರೆ.

ಫೇಸ್‌ಬುಕ್ ಜ್ಯೋತಿಷಿಯಿಂದ ಮಹಿಳೆಗೆ ಲಕ್ಷಾಂತರ ರೂಪಾಯಿ ವಂಚನೆ: ಆರೋಪಿ ಬಂಧನ

ಸೈಬರ್‌ ವಂಚಕರು ಏರ್‌ಟೆಲ್‌, ಜಿಯೋ ಸೇರಿದಂತೆ ಇತರೆ ಮೊಬೈಲ್‌ ನೆಟ್‌ವರ್ಕ್ ಕಂಪನಿಗಳ ಕಾಲ್‌ಸೆಂಟರ್‌ಗಳ ಹೆಸರಿನಲ್ಲಿ ಕರೆ ಮಾಡುತ್ತಾರೆ. ಬಳಿಕ ಸಿಮ್‌ ಕಾರ್ಡನ್ನು 5ಜಿಗೆ ಅಪ್‌ಡೇಟ್‌ ಮಾಡುವುದಾಗಿ ಹೇಳಿದ ಬಳಿಕ ಒಟಿಪಿ ಪಡೆದು ಕ್ಷಣ ಮಾತ್ರದಲ್ಲಿ ಖಾತೆಯಲ್ಲಿರುವ ಹಣ ಎಗರಿಸುತ್ತಾರೆ. ಹೀಗಾಗಿ ಯಾವುದೇ ಕಾರಣಕ್ಕೂ ನೆಟ್‌ವರ್ಕ್ ಅಪ್‌ಡೇಟ್‌ ಹೆಸರಿನಲ್ಲಿ ಕರೆ ಮಾಡಿ ಮಾಹಿತಿ ಕೇಳಿದರೆ, ಯಾರೂ ಮಾಹಿತಿ ನೀಡಬಾರದು ಎಂದು ಪೊಲೀಸರು ಮನವಿ ಮಾಡಿದ್ದಾರೆ.

4ಜಿ ಮೊಬೈಲ್‌ 5ಜಿಗೆ ಅಪ್‌ಡೇಟ್‌ ಆಗಲ್ಲ: ಇತ್ತೀಚೆಗೆ ಬರುತ್ತಿರುವ ಮೊಬೈಲ್‌ ಫೋನ್‌ಗಳು 5ಜಿ ನೆಟ್‌ವರ್ಕ್ಗೆ ಸಪೋರ್ಚ್‌ ಮಾಡುತ್ತವೆ. ಆದರೆ, ಹಳೆಯ ಮೊಬೈಲ್‌ಗಳು 4ಜಿ ನೆಟ್‌ವರ್ಕ್ ಅನ್ನು ಮಾತ್ರವೇ ಬೆಂಬಲಿಸುತ್ತವೆ. ಹೀಗಾಗಿ ಸೈಬರ್‌ ವಂಚಕರು, 4ಜಿ ಮೊಬೈಲ್‌ಗಳನ್ನು 5ಜಿಗೆ ಅಪ್‌ಡೇಟ್‌ ಮಾಡುವ ಸೋಗಿನಲ್ಲಿ ಕರೆ ಮಾಡುವ ಸಾಧ್ಯತೆಯಿದೆ. ವಾಸ್ತವದಲ್ಲಿ 4ಜಿ ಮೊಬೈಲ್‌ಗಳನ್ನು 5ಜಿಗೆ ಅಪ್‌ಡೇಟ್‌ ಮಾಡಲು ಸಾಧ್ಯವಿಲ್ಲ. ಹೀಗಾಗಿ ಈ ರೀತಿ ಯಾವುದೇ ಕರೆ, ವಾಟ್ಸಾಪ್‌ ಸಂದೇಶ, ಲಿಂಕ್‌ಗಳು ಬಂದಲ್ಲಿ ಪ್ರತಿಕ್ರಿಯಿಸಬಾರದು. ಒಂದು ವೇಳೆ ಈ ರೀತಿಯ ವಂಚನೆಯಾದರೆ, ಕೂಡಲೇ ಸಮೀಪದ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ದೂರು ನೀಡುವಂತೆ ಕೋರಿದ್ದಾರೆ.

ಲಿಂಕ್‌ ತೆರೆಯಬೇಡಿ: ಮೊಬೈಲ್‌ 5ಜಿ ನೆಟ್‌ವರ್ಕ್ಗೂ ಬ್ಯಾಂಕ್‌ ಖಾತೆಗಳಿಗೂ ಯಾವುದೇ ಸಂಬಂಧವಿಲ್ಲ. ಸೈಬರ್‌ ವಂಚಕರು ಬ್ಯಾಂಕ್‌ ಪ್ರತಿನಿಧಿಗಳ ಸೋಗಿನಲ್ಲಿಯೂ ಕರೆ ಮಾಡಿ, ನಿಮ್ಮ ಬ್ಯಾಂಕ್‌ ಖಾತೆಗೆ ಲಿಂಕ್‌ ಆಗಿರುವ ಮೊಬೈಲ್‌ ಸಂಖ್ಯೆಯನ್ನು 5ಜಿ ನೆಟ್‌ವರ್ಕ್ಗೆ ಅಪ್‌ಡೇಟ್‌ ಮಾಡುವುದಾಗಿ ಹೇಳುವ ಸಾಧ್ಯತೆಯಿದೆ. ಹೀಗಾಗಿ ಸಾರ್ವಜನಿಕರು ಇಂತಹ ಕರೆಗಳು ಬಂದರೆ, ಕೂಡಲೇ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ದೂರು ನೀಡಬೇಕು. ವಾಟ್ಸಾಪ್‌ಗಳಲ್ಲಿ 5ಜಿ ನೆಟ್‌ವರ್ಕ್ಗೆ ಅಪ್‌ಡೇಟ್‌ ಆಗಲು ಲಿಂಕ್‌ ಕ್ಲಿಕ್‌ ಮಾಡಿ ಎಂಬ ಸಂದೇಶಗಳು ಬಂದಲ್ಲಿ ಯಾವುದೇ ಕಾರಣಕ್ಕೂ ಆ ಲಿಂಕ್‌ ತೆರೆಯಬಾರದು ಎಂದು ಮನವಿ ಮಾಡಿದ್ದಾರೆ.

ಈಗಾಗಲೇ ಸೈಬರ್‌ ವಂಚಕರು ಬ್ಯಾಂಕ್‌ ಪ್ರತಿನಿಧಿಗಳ ಸೋಗಿನಲ್ಲಿ ಬ್ಯಾಂಕ್‌ ಖಾತೆಗೆ ಲಿಂಕ್‌ ಆಗಿರುವ ಪಾನ್‌ಕಾರ್ಡ್‌ ಅಪ್‌ಡೇಟ್‌, ಆಧಾರ್‌ ಕಾರ್ಡ್‌ ಅಪ್‌ಡೇಟ್‌, ಬೆಸ್ಕಾಂ ಪ್ರತಿನಿಧಿಗಳ ಸೋಗಿನಲ್ಲಿ ಆನ್‌ಲೈನ್‌ನಲ್ಲಿ ಬಿಲ್‌ ಪಾವತಿ, ಆನ್‌ಲೈನ್‌ ಟ್ರೇಡಿಂಗ್‌, ಲಾಟರಿಯಲ್ಲಿ ಬಹುಮಾನ ಗೆದ್ದಿರುವುದಾಗಿ ಹೇಳಿಕೊಂಡು ಕರೆ ಮಾಡಿ ವಂಚಿಸುತ್ತಿದ್ದಾರೆ. ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗಳಲ್ಲಿ ಪ್ರತಿ ದಿನ ಇಂತಹ ವಂಚನೆಗೆ ಸಂಬಂಧಿಸಿದ ದೂರುಗಳು ದಾಖಲಾಗುತ್ತಿವೆ. ಇದೀಗ 5ಜಿ ಹೆಸರಿನಲ್ಲಿಯೂ ಸೈಬರ್‌ ಕಿಡಿಗೇಡಿಗಳು ವಂಚಿಸುವ ಸಾಧ್ಯತೆಯಿರುವುದರಿಂದ ಬಹಳ ಎಚ್ಚರಿಕೆ ವಹಿಸುವಂತೆ ಪೊಲೀಸರು ತಿಳಿಸಿದ್ದಾರೆ.

Raichur: ತಾಯಿ ಅನೈತಿಕ ಸಂಬಂಧಕ್ಕೆ ಬೇಸತ್ತು ಪಿಡಿಒನ ಹತ್ಯೆಗೈದ ಮಗ: ಆರೋಪಿಗಳ ಬಂಧನ

ವಂಚನೆ ಹೇಗೆ?
1. ನಿಮ್ಮ ಸಿಮ್‌ 4ಜಿಯಲ್ಲಿದ್ದು ಅದನ್ನು 5ಜಿ ನೆಟ್‌ವರ್ಕ್ಗೆ ಅಪ್‌ಡೇಟ್‌ ಮಾಡಬೇಕು. ಈ ಲಿಂಕ್‌ ಕ್ಲಿಕ್‌ ಮಾಡಿ ಎಂದು ಸಂದೇಶ ಬರಬಹುದು

2. ನಿಮ್ಮ ಮೊಬೈಲ್‌ಗೆ ದೂರವಾಣಿ ಕರೆ ಮಾಡಿ, ದೂರಸಂಪರ್ಕ ಸೇವೆಯನ್ನು 5ಜಿಗೆ ವರ್ಗಾಯಿಸಲಾಗುತ್ತಿದೆ. ಒಟಿಪಿ ಹೇಳಿ ಅಂತ ಕೇಳಬಹುದು

3. 5ಜಿ ಸೇವೆ ಪಡೆಯಲು ಹೊಸ ಮೊಬೈಲ್‌ ಖರೀದಿಸಬೇಕಿಲ್ಲ. 4ಜಿ ಮೊಬೈಲ್‌ನಲ್ಲೇ 5ಜಿ ಸೇವೆ ಪಡೆಯಬಹುದು. ಹೇಳಿದಂತೆ ಮಾಡಿ ಎನ್ನಬಹುದು

4. ಬ್ಯಾಂಕ್‌ ಪ್ರತಿನಿಧಿಗಳ ಹೆಸರಿನಲ್ಲಿ ಕರೆ ಮಾಡಿ, 5ಜಿ ಸಂಪರ್ಕಕ್ಕೆ ಅಪ್‌ಡೇಟ್‌ ಮಾಡಿ ಬ್ಯಾಂಕ್‌ ಖಾತೆಗೆ ಲಿಂಕ್‌ ಮಾಡಿಸಿ ಎಂದು ಪುಸಲಾಯಿಸಬಹುದು

5. ಏರ್‌ಟೆಲ್‌, ಜಿಯೋ ಮೊಬೈಲ್‌ ಕಂಪನಿಗಳ ಪ್ರತಿನಿಧಿಗಳು ಎಂದು ಹೇಳಿಕೊಂಡು ಕೂಡ ವಂಚಕರು ಕರೆ ಮಾಡಬಹುದು. ಈ ಬಗ್ಗೆ ಜಾಗ್ರತೆ ವಹಿಸಿ

ಏನು ಮಾಡಬೇಕು?
- ಇಂತಹ ಕರೆಗಳನ್ನು ಯಾವುದೇ ಕಾರಣಕ್ಕೂ ನಂಬಬೇಡಿ. ಯಾವುದೇ ಮಾಹಿತಿಯನ್ನು ದೂರವಾಣಿಯಲ್ಲಿ ಹಂಚಿಕೊಳ್ಳಬೇಡಿ

- ಯಾವುದೇ ಕರೆ ಬಂದರೂ ಪ್ರತಿಕ್ರಿಯಿಸದೇ ಕರೆ ಸ್ಥಗಿತಗೊಳಿಸಿ. ವಾಟ್ಸಾಪ್‌, ಎಸ್ಸೆಮ್ಮೆಸ್‌ ಲಿಂಕ್‌ಗಳನ್ನು ಕ್ಲಿಕ್‌ ಮಾಡಬೇಡಿ

- ಒಂದು ವೇಳೆ ವಂಚನೆಯಾದರೆ ತಡ ಮಾಡದೆ ಕೂಡಲೇ ಸೈಬರ್‌ ಕ್ರೈಮ್‌ ಪೊಲೀಸ್‌ ಠಾಣೆಗೆ ದೂರು ಸಲ್ಲಿಕೆ ಮಾಡಿ

Follow Us:
Download App:
  • android
  • ios