ಬೆಂಗಳೂರು(ಆ.19): ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್ಸಿ) ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ನಡೆದಿದೆ. ಛತ್ತೀಸಗಢ ರಾಯ್‌ಪುರ ಮೂಲದ ಸಂದೀಪ್‌ಕುಮಾರ್‌ (24) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.

ಸಂದೀಪ್‌ಕುಮಾರ್‌ ಐಐಎಸ್ಸಿಯಲ್ಲಿ ಎಂ.ಟೆಕ್‌ ವಿದ್ಯಾರ್ಥಿಯಾಗಿದ್ದ. ಸೋಮವಾರ ತಡರಾತ್ರಿ ತಾನು ನೆಲೆಸಿದ್ದ ಹಾಸ್ಟೆಲ್‌ನ ಕೊಠಡಿಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಆನ್ಲೈನ್ ಕ್ಲಾಸ್ : ಮೊಬೈಲ್‌ ಕೊಳ್ಳಲಾಗದ್ದಕ್ಕೆ ಬಾಲಕಿ ಆತ್ಮಹತ್ಯೆ

ಆತ್ಮಹತ್ಯೆಗೂ ಮುನ್ನ ಸಂದೀಪ್‌, ತನ್ನ ತಂದೆಗೆ ಇ-ಮೇಲ್‌ ಕಳುಹಿಸಿದ್ದು, ನನಗೆ ಕೊರೋನಾ ಪಾಸಿಟಿವ್‌ ಇರುವಂತೆ ಕಾಣುತ್ತಿದೆ. ಇದರಿಂದ ಭಯವಾಗುತ್ತಿದೆ ಎಂದಿದ್ದಾನೆ. ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ಈ ಸಂಬಂಧ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿದ್ದು, ಪೋಷಕರಿಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.