ಮೈದುನನ ಜತೆ ಸಂಬಂಧ: ಕೊಲೆ ಯತ್ನ ಕೇಸಲ್ಲಿ ತಲೆಮರಿಸಿಕೊಂಡಿದ್ದ ಪತ್ನಿಯನ್ನು ಕೊಂದ ಪತಿ
Crime News: 21 ವರ್ಷದ ಮಹಿಳೆಯನ್ನು ಆಕೆಯ ಪತಿಯೇ ಕೊಲೆ ಮಾಡಿರುವ ಘಟನೆ ಹೈದರಾಬಾದಿನ ಲಾಡ್ಜ್‌ವೊಂದರಲ್ಲಿ ನಡೆದಿದೆ
ಹೈದರಾಬಾದ್ (ಅ. 05): 21 ವರ್ಷದ ಮಹಿಳೆಯನ್ನು ಆಕೆಯ ಪತಿಯೇ ಕೊಲೆ ಮಾಡಿರುವ ಘಟನೆ ಹೈದರಾಬಾದಿನ ಗೌಳಿಗುಡದ ಲಾಡ್ಜ್‌ನಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಮಹಿಳೆಯು ತನ್ನ ಗಂಡನ ಸಹೋದರ ಅಂದರೆ ತನ್ನ ಮೈದುನ ಜೊತೆ ಹೊಂದಿದ್ದ ಸಂಬಂಧವೇ ಕೊಲೆಗೆ ಕಾರಣ ಎಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಳನ್ನು ಪಿ. ಅರುಣಾ (21) ಎಂದು ಗುರುತಿಸಲಾಗಿದೆ. ಸೆಕ್ಯೂರಿಟಿ ಗಾರ್ಡಾಗಿ ಕೆಲಸ ಮಾಡುತ್ತಿದ್ದ ಆರೋಪಿ ಪಿ ರಾಮ ಕೃಷ್ಣ ಪೊಲೀಸರನ್ನು ಸಂಪರ್ಕಿಸಿ ತನ್ನ ಪತ್ನಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಇನ್ನು ಇತ್ತ ಮೃತ ಮಹಿಳೆ ಕೂಡ ಕೊಲೆ ಯತ್ನ ಪ್ರಕರಣದಲ್ಲಿ ಆರೋಪಿಯಾಗಿದ್ದು ಸ್ವತಃ ತಲೆಮರೆಸಿಕೊಂಡು ಓಡಾಡುತ್ತಿದ್ದಳು ಎನ್ನಲಾಗಿದೆ. ಕಳೆದ ಕೆಲವು ವಾರಗಳಿಂದ ಪೊಲೀಸರು ಆರೋಪಿ ಮಹಿಳೆಗಾಗಿ ಬಲೆ ಬೀಸಿದ್ದರು. ಪತ್ನಿಯನ್ನು ಕೊಂದ ನಂತರ ರಾಮಕೃಷ್ಣ ತನ್ನ ಒಂದು ವರ್ಷದ ಮಗನ ಜತೆಗೆ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ತನ್ನ ಮತ್ತು ಪತ್ನಿಯ ನಡುವಿನ ಸಂಬಂಧ ಸರಿಯಾಗಿರಲಿಲ್ಲ, ಅಲ್ಲದೇ ಪತ್ನಿ ತನ್ನ ಸಹೋದರನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎಂದು ಪತಿ ಆರೋಪಿಸಿದ್ದಾನೆ.
ಪೊಲೀಸರನ್ನು ಸಂಪರ್ಕಸಿದ್ದ ಪತಿ ಘಟನಾ ಸ್ಥಳಕ್ಕೆ ಪೊಲೀಸರನ್ನು ಕರೆದೊಯ್ದಿದ್ದಾನೆ. ಮಹಿಳೆ ಮಂಚದ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ಈ ವೇಳೆ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ರಾಮಕೃಷ್ಣ ಪೊಲೀಸರಿಗೆ ತಿಳಿಸಿದ್ದಾನೆ. ಸಂಜೆ ವೇಳೆ ತಮ್ಮ ಹಾಗೂ ಪತ್ನಿ ಇಬ್ಬರೂ ಮಾತನಾಡುತ್ತಿದ್ದಾಗ ಸ್ಕಾರ್ಫ್ ಮತ್ತು ಸೀರೆಯಿಂದ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಪತಿ ತಿಳಿಸಿದ್ದಾನೆ.
ಹೆತ್ತವಳಿಗೆ ಮಗನ ಭವಿಷ್ಯ ಮುಖ್ಯ; ಆದರೆ ಮಗನಿಗೆ ತಾಯಿ ಸಾವೇ ಮುಖ್ಯ!
ಮೃತ ಮಹಿಳೆ ಕೊಲೆ ಯತ್ನ ಕೇಸಲ್ಲಿ ಆರೋಪಿ: ಅರುಣಾ ಒಂದು ತಿಂಗಳ ಹಿಂದೆ ರಾಜೇಂದ್ರನಗರದ ಲಾಡ್ಜ್‌ನಲ್ಲಿ ರಾಮಕೃಷ್ಣನ ಸಹೋದರನನ್ನು ಕೊಲ್ಲಲು ಪ್ರಯತ್ನಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಪರಾರಿಯಾಗಿದ್ದ ಅರುಣಾ ವಿರುದ್ಧ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ 20 ದಿನಗಳ ಕಾಲ ಅರುಣಾ ತಲೆಮರೆಸಿಕೊಂಡಿದ್ದಳು.
ಪೊಲೀಸರಿಂದ ತಪ್ಪಿಸಿಕೊಳ್ಳಲು ಪತಿ ರಾಮಕೃಷ್ಣನ ಸಹಾಯದಿಂದ ಅರುಣಾ ಲಾಡ್ಜ್‌ಗಳನ್ನು ಬದಲಾಯಿಸುತ್ತಿದ್ದಳು ಎನ್ನಲಾಗಿದೆ. ಆದರೆ ರಾಜೇಂದರ್‌ನಗರ ಪ್ರಕರಣದ ನಂತರ ರಾಮಕೃಷ್ಣನ ಸಹೋದರನೊಂದಿಗಿನ ಅರುಣಾ ಸಂಬಂಧ ಬೆಳಕಿಗೆ ಬಂದಿತ್ತು. ಇದರಿಂದ ಕೋಪಗೊಂಡಿದ್ದ ಪತಿ ರಾಮಕೃಷ್ಣ ಆಕೆಯನ್ನು ಕೊಂದಿದ್ದಾನೆ . ಪೊಲೀಸರು ಆರೋಪಿ ರಾಮಕೃಷ್ಣ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.