ಆರ್ಥಿಕ ಸಂಕಷ್ಟದಿಂದ ಬೇಸತ್ತು ತನ್ನ ಪತ್ನಿಯನ್ನು ಕೊಂದು ಬಳಿಕ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಪಾನಿಪೂರಿ ವ್ಯಾಪಾರಿಯೊಬ್ಬ, ಕೊನೆಗೆ ಧೈರ್ಯ ಸಾಲದೆ ಆತ್ಮಹತ್ಯೆ ನಿರ್ಧಾರ ಕೈಬಿಟ್ಟು ವೈಟ್‌ಫೀಲ್ಡ್‌ ಪೊಲೀಸ್‌ ಠಾಣೆಗೆ ತೆರಳಿ ಶರಣಾಗಿರುವ ಘಟನೆ ನಡೆದಿದೆ. 

ಬೆಂಗಳೂರು (ಆ.09): ಆರ್ಥಿಕ ಸಂಕಷ್ಟದಿಂದ ಬೇಸತ್ತು ತನ್ನ ಪತ್ನಿಯನ್ನು ಕೊಂದು ಬಳಿಕ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಪಾನಿಪೂರಿ ವ್ಯಾಪಾರಿಯೊಬ್ಬ, ಕೊನೆಗೆ ಧೈರ್ಯ ಸಾಲದೆ ಆತ್ಮಹತ್ಯೆ ನಿರ್ಧಾರ ಕೈಬಿಟ್ಟು ವೈಟ್‌ಫೀಲ್ಡ್‌ ಪೊಲೀಸ್‌ ಠಾಣೆಗೆ ತೆರಳಿ ಶರಣಾಗಿರುವ ಘಟನೆ ನಡೆದಿದೆ. ಕುಂದಲಹಳ್ಳಿ ನಿವಾಸಿ ಸರಿತಾ (35) ಕೊಲೆಯಾದ ಗೃಹಿಣಿ. ಈ ಹತ್ಯೆ ಬಳಿಕ ಪೊಲೀಸರಿಗೆ ಮೃತಳ ಪತಿ ತಾರಾನಾಥ್‌ ಶರಣಾಗಿದ್ದಾನೆ. ಆರ್ಥಿಕ ಸಂಕಷ್ಟದಿಂದ ಜಿಗುಪ್ಸೆಗೊಂಡು ತಾರಾನಾಥ್‌, ತನ್ನ ಪತ್ನಿಯನ್ನು ಉಸಿರುಗಟ್ಟಿಸಿ ಹತ್ಯೆಗೈದು ಬಳಿ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ. ಆದರೆ ಕೊನೆ ಕ್ಷಣದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಬಿಟ್ಟು ಬಂದು ಪೊಲೀಸರಿಗೆ ಆರೋಪಿ ಶರಣಾಗಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಾಲಗಾರರ ಕಾಟ: 11 ವರ್ಷಗಳ ಹಿಂದೆ ಮಂಗಳೂರಿನ ತಾರಾನಾಥ್‌ ಹಾಗೂ ಸರಿತಾ ವಿವಾಹವಾಗಿದ್ದು, ದಂಪತಿ ಬೆಂಗಳೂರಿನ ಕುಂದಲಹಳ್ಳಿಯಲ್ಲಿ ನೆಲೆಸಿದ್ದರು. ಆದರೆ ಇವರಿಗೆ ಸಂತಾನವಿರಲಿಲ್ಲ. ಪಾನಿಪೂರಿ ಅಂಗಡಿ ಇಟ್ಟಿದ್ದ ತಾರಾನಾಥ್‌, ತನ್ನ ಸ್ನೇಹಿತರು ಹಾಗೂ ಪರಿಚಯಸ್ಥರಿಂದ ಆತ ಕೈ ಸಾಲ ಮಾಡಿದ್ದ. 11 ಲಕ್ಷ ಸಾಲ ಮಾಡಿದ್ದ. ಆದರೆ ಯಾವುದಕ್ಕಾಗಿ ಈ ಸಾಲ ಮಾಡಲಾಗಿತ್ತು ಎಂಬುದು ತಿಳಿದುಬಂದಿಲ್ಲ. ಸಾಲ ಸಕಾಲಕ್ಕೆ ಮರಳಿಸದ ಕಾರಣ ಸಾಲಗಾರರ ಕಾಟ ಶುರುವಾಗಿತ್ತು. ಇದೇ ವಿಚಾರಕ್ಕೆ ದಂಪತಿ ನಡುವೆ ನಿರಂತರವಾಗಿ ಜಗಳ ಆಗುತ್ತಿತ್ತು. ಹಣಕಾಸು ಸಮಸ್ಯೆ, ಪತ್ನಿಯ ಜಗಳದಿಂದ ಜಿಗುಪ್ಸೆಗೊಂಡ ತಾರಾನಾಥ್‌, ತಾನು ಸತ್ತರೆ ತನ್ನ ಪತ್ನಿ ಅನಾಥವಾಗುತ್ತಾಳೆ. ಆಕೆಯನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾನೆ.

ಅಂತೆಯೇ ಶನಿವಾರ ರಾತ್ರಿ ಪತ್ನಿಯನ್ನು ಉಸಿರುಗಟ್ಟಿಸಿ ಹತ್ಯೆಗೈದ ಬಳಿಕ ಮಂಗಳೂರಿಗೆ ತೆರಳಿ ಆತ್ಮಹತ್ಯೆ ಮಾಡಿಕೊಳ್ಳಲು ತಾರಾನಾಥ್‌ ಮುಂದಾಗಿದ್ದಾನೆ. ಆದರೆ ಕೊನೆ ಕ್ಷಣದಲ್ಲಿ ಆತ್ಮಹತ್ಯೆ ನಿರ್ಧಾರದಿಂದ ಹಿಂದೆ ಸರಿದ ಆತ, ತನ್ನ ಮನೆ ಮಾಲಿಕರಿಗೆ ಭಾನುವಾರ ಮಧ್ಯಾಹ್ನ ಕರೆ ಮಾಡಿ ಕೊಲೆ ವಿಚಾರ ತಿಳಿಸಿದ್ದಾನೆ. ಬಳಿಕ ವೈಟ್‌ಫೀಲ್ಡ್‌ ಠಾಣೆ ಪೊಲೀಸರಿಗೆ ಕೊಲೆ ಬಗ್ಗೆ ಮನೆ ಮಾಲಿಕರು ಮಾಹಿತಿ ನೀಡಿದ್ದಾರೆ. ಮರು ದಿನ ತನ್ನ ಮನೆ ಮಾಲಿಕರ ಜತೆ ತೆರಳಿ ಪೊಲೀಸರಿಗೆ ತಾರಾನಾಥ ಶರಣಾಗಿದ್ದಾನೆ ಎಂದು ಮೂಲಗಳು ಹೇಳಿವೆ.

ಬಿಜೆಪಿ ಅವಧಿಯ ಬಿಬಿಎಂಪಿ ಕಾಮಗಾರಿ ತನಿಖೆಗೆ ರಾಜ್ಯ ಸರ್ಕಾರ ಆದೇಶ

‘ಕಳ್ಳಿ’ ಎಂದು ನಿಂದನೆ: ಸರಿತಾ ಅವರನ್ನು ಸಂಬಂಧಿಕರು ಕಳ್ಳಿ ಎಂದು ನಿಂದಿಸುತ್ತಿದ್ದರು. ಇದರಿಂದಲೂ ತಾರಾನಾಥ್‌ ತೀವ್ರ ಮುಜುಗರವಾಗುತಿತ್ತು ಎಂದು ಮೂಲಗಳು ತಿಳಿಸಿವೆ. ಯಾವ ಕಾರಣಕ್ಕೆ ಸರಿತಾ ಅವರನ್ನು ಸಂಬಂಧಿಕರು ನಿಂದಿಸುತ್ತಿದ್ದರು ಎಂದು ತಿಳಿದುಬಂದಿಲ್ಲ. ಈ ಬಗ್ಗೆ ಪೊಲೀಸರು ದಾಖಲಿಸಿರುವ ಪ್ರಾಥಮಿಕ ವರದಿಯಲ್ಲಿ ದಾಖಲಿಸಿದ್ದಾರೆ.