ಕಲಬುರಗಿ: ಹೆಂಡತಿಯನ್ನೇ ಕತ್ತು ಹಿಸುಕಿ ಕೊಂದ ಪಾಪಿ ಗಂಡ, ಹೆತ್ತವ್ವಳ ರೋದನ

ಮಸಲತ್ತಿನಿಂದ ನನ್ನ ಮಗಳನ್ನ ಮರ್ಡರ್‌ ಮಾಡಿದ್ರು| ಮಗಳನ್ನು ಕಳೆದುಕೊಂಡ ನೋವಿನಲ್ಲಿ ಹೆತ್ತೊಡಲಿನ ರೋದನ, ಬಂಧು- ಬಳಗದಿಂದಲೂ ಘಟನೆ ಖಂಡನೆ| ಹೆಂಡತಿ ಬ್ಯಾಡಾದ್ರ ಡೈವರ್ಸ್‌ ಕೊಡ್ಬೇಕಿತ್ತು, ಕೊಲೆ ಯಾಕ ಮಾಡಬೇಕ್ರಿ? ಮಗಳ ಸಾವಿಗೆ ತಾಯಿ ಆಕ್ರೋಶ| 

Husband Killed His Wife in Kalaburagi grg

ಶೇಷಮೂರ್ತಿ ಅವಧಾನಿ

ಕಲಬುರಗಿ(ಫೆ.01):  ಅಳಿಯ ಪ್ರೇಮ್‌ಸಿಂಗ್‌ ಹಾಗೂ ಮಗಳು ಶೀತಲ್‌ ಇಬ್ರೂ ಬೆಂಗಳೂರಾಗ ಇದ್ದವ್ರು, ಕೊರೋನಾ ಲಾಕ್ಡೌನ್‌ ಆದ್ಮ್ಯಾಗ ಕಲಬುರಗಿಗೆ ಬಂದಿದ್ರು, ನಾನೇ ಮಗಳ ಹೆಸರಿಗೆ ಮನಿ ಗಿಫ್ಟ್‌ ಕೊಟ್ಟಿದ್ದೆ. ಮೂರು ಮಕ್ಕಳ ಚೆಂದದ ಸಂಸಾರದ ಮ್ಯಾಗೆ ಯಾರ ಕಣ್ಣ ಬಿತ್ತು ಯಾನೋ, ಅಳ್ಯಾನೇ ಮಗಳನ್ನ ಬಲಿ ಪಡ್ದ, ಇದು ಮಸಲತ್ತಿನ ಮರ್ಡರ್‌, ಹೀಂಗ ಮಾಡಿದವ್ನಿಗೆ, ಮಾಡಲಿಕ್ಕಿ ಆತನ ತಲಿ ತುಂಬದವ್ರಿಗೇ ಫಾಸಿ ಶಿಕ್ಷಾ ಆಗಬೇಕ್ರಿ.

ಹೀಗೆಂದು ಭಾನುವಾರ ಇಡೀ ದಿನ ಇಲ್ಲಿನ ಜಿಮ್ಸ್‌ ಆಸ್ಪತ್ರೆಯ ಶವಾಗಾರದ ಮುಂದೆ ಕೊಲೆಯಾದ ಶೀತಲ್‌ನ ಪಾರ್ಥೀವ ಶರೀರಕ್ಕಾಗಿ ಹಂಬಲಿಸುತ್ತ ತಾಯಿ ಕಮಲಾಬಾಯಿ ಒಂದೇ ಸವನೆ ಕಣ್ಣೀರು ಹಾಕಿದ ನೋಟಗಲು ಕಂಡವು. ಕನ್ನಡಪ್ರಭ ಇಲ್ಲಿಗೆ ಭೇಟಿ ನೀಡಿದ್ದಾಗ ಬಂಧುಗಳೊಂದಿಗೆ ಕಮಲಾಬಾಯಿ ಕಣ್ಣೀರಿಡುತ್ತ ಮಗಳ ಕೊಲೆ ಘಟನೆಗೆ ಮಮ್ಮಲ ಮರುಗಿದರು. ಮಗಳು- ಅಳಿಯನ ನಡುವೆ ಜಗಳದ ವಿಚಾರ ಇವರಿಗೆ ಗೊತ್ತಿತ್ತು. ಹಾಗಂತಲೇ ಇವರು ಮಗಳಿಗೆ ತಮ್ಮ ಮನೆಯ ಪಕ್ಕದಲ್ಲೇ ಮನೆ ಮಾಡಿಕೊಟ್ಟು ಜತನದಿಂದ ಆಕೆಯ ಸಂಸಾರಕ್ಕೆ ಆಸರೆಯಾಗಿದ್ದರು.

’ಇಷ್ಟೆಲ್ಲ ಜೋಪಾನವಾಗಿ ಕರುಳ ಕುಡಿಯನ್ನ ನೋಡಿಕೊಂಡಿದ್ದ ನನಗೇ ಅಳಿಯ ಯಾಮಾರಿಸಿ ಬಿಟ್ಟ, ಮರ್ಡರ್‌ ನಡದದ್ದು ಶನಿವಾರ, ಅದಕ್ಕೂ 2 ದಿನ ಮೊದಲೇ ಅಂದ್ರ ಗುರುವಾರ ನಮ್ಮ ಮನಿಗೆ ಬಂದು ಶೀತಲ್‌ಗೆ ಮನೆಗೆ ಕಳುಹಿಸುವಂತೆ ಕೋರಿದ್ದಾನೆ. ನಾವು ಕಳಿಸೋದಿಲ್ಲವೆಂದು ಹಠ ಮಾಡಿದಾಗ ನನ್ನ ಕಾಲು ಹಿಡಿದ್ದಾನೆ, ಹೆಂಡತಿ ಕಾಲೂ ಹಿಡಿದಿದ್ದಾನೆ. ಕೈ- ಕಾಲು ಬಿದ್ದಾಗ ನಾವೂ ಕರಗಿ ಗೆಂಡ- ಹೆಂಡಿರ ಜಗಳ, ಇನ್ನೇನು ಮುಗಿತಲ್ಲ ಎಂದು ಮಗಳನ್ನ ಕಳುಹಿಸಿದ್ದೇವೆ. ಈಗ ನೋಡಿದ್ರ ಆತನ ಮನಿಗೆ ಹೋದ ಎರಡನೇ ದಿನಕ್ಕೆ ಮಗಳು ಹೆಣವಾದಳು’ ಎಂದು ಕಮಲಾಬಾಯಿಗೆ ಮಗಳ ಕೊಲೆ ಘಟನೆ ದಿಗ್ಭ್ರಾಂತರನ್ನಾಗಿಸಿದೆ.

ಉಸಿರುಗಟ್ಟಿ ಸತ್ತಳು ಪತ್ನಿ : ಪತಿಯೇ ಮಾಡಿ ಬೇರೆ ಕಥೆ ಹೇಳಿದ

ತಾಯಿ ಕಳೆದುಕೊಂಡು ತಬ್ಬಲಿಯಾದ ಮಕ್ಕಳು:

ಗಂಡ- ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತಾಗಿದೆ, ಪ್ರೇಮ್‌ಸಿಂಗ್‌- ಶೀತಲ್‌ ದಂಪತಿಯದ್ದು 20 ವರ್ಷದ ದಾಂಪತ್ಯ ಜೀವನ. ಈ ಹಂತದಲ್ಲಿ ಮೂವರು ಮಕ್ಕಳನ್ನು ಪಡೆದವರಿವರು. ದೊಡ್ಡವ ಎಸ್ಸೆಸ್ಸೆಲ್ಸಿ ಓದುತ್ತಿದ್ದಾನೆ. 2 ನೇ ಹಾಗೂ 3 ನೇ ಮಕ್ಕಳು ಪ್ರೈಮರಿ ಶಾಲೆಯಲ್ಲಿದ್ದಾರೆ. ಪ್ರೇಮ್‌ಸಿಂಗ್‌ ಕೈಯ್ಯಾರೆ ಹೆಂಡತಿಯನ್ನು ಕೊಂದಿದ್ದರಿಂದ ಈ ಮೂವರು ಮಕ್ಕಳು ತಾಯಿ ಕಳೆದುಕೊಂಡು ತಬ್ಬಲಿಯಾಗಿವೆ.

ಹೆತ್ತವ್ವನ ಕೊಲೆಗೆ ಮಗು ಸಾಕ್ಷಿಯಾಯ್ತೆ:

ತನ್ನವ್ವ (ಶೀಲ್‌) ನನ್ನ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡುತ್ತಿರೋದನ್ನ 6 ವರ್ಷದ ಪುಟ್ಟಮಗು ನೋಡಿತೆ? ಹೌದು ಎನ್ನುತ್ತಾರೆ ಆ ಮಗುವಿನ ಅಜ್ಜಿ ಕಮಲಾಬಾಯಿ. ಮಕ್ಕಳಂದ್ರ ಸೀತಲ್‌ಗೆ ಪಂಚಪ್ರಾಣ. ಹೀಂಗಾಗಿ ಮಕ್ಕಳಿಲ್ಲದೆ ಇರ್ತಿರಲಿಲ್ಲ, ಎಸ್ಸೆಸ್ಸೆಲ್ಸಿ ಮಗನಿಗೆ ಬೆಂಗಳೂರಿಗೆ ಬಿಟ್ಟು ಬಂದಾಕಿ ಜೊತೆಗೇ ಇನ್ನಿಬ್ಬರು ಮಕ್ಕಳಿದ್ದರು. ಕೊಲೆಯಾದ ಶನಿವಾರವೂ ಈ ಮಕ್ಕಳಿದ್ದಾರೆ. ಮನೆಯಲ್ಲೇ ಎಲ್ಲರು ಸೇರಿ ಊಟ ಮಾಡಿದ್ದಾರೆ. ರಾತ್ರಿ ನಮ್ಮ ಅಳಿಯನ ತಮ್ಮ ಸಹ ಬಂದಿದ್ದಾನೆ. ಇವರೆಲ್ಲರೂ ಸೇರಿ ಅಮ್ಮನಿಗೆ ಹಿಂಸೆ ಕೊಟ್ಟರು, ಕೈ ಹಿಡಿದು ಹೊಡೆದರು, ಬಡಿದರು ಎಂದು ಮಗು ಎಲ್ಲವನ್ನ ಹೇಳಿದ್ದಾನೆ, ಪೊಲೀಸರ ಮುಂದೆಯೂ ಹೇಳಿಕೆ ನೀಡಿದ್ದಾನೆಂದು ಕಮಲಾಬಾಯಿ ಹೇಳುತ್ತ ಬಿಕ್ಕಳಿಸುತ್ತಿದ್ದಾರೆ. ತಾಯಿ ಸಾವನ್ನಪ್ಪಿದ್ದಾಳೆ, ಬಾರದ ಲೋಕಕ್ಕೆ ಹೋಗಿದ್ದಾಳೆಂಬ ಮಾಹಿತಿ ಮಗುವಿಗೆ ಗೊತ್ತಿಲ್ಲ, ಏಕೆಂದರೆ ಮಗುವಿಗೆ ಸಾವು ಅಂದರೆ ಗೊತ್ತಿಲ್ಲ. ನಾವೂ ಯಾರೂ ಮಾಹಿತಿ ನೀಡಿಲ್ಲ ಎನ್ನುವ ಕಮಲಾಬಾಯಿ ಮಕ್ಕಳಿಗೆ ಬಂದ ಗತಿಗೆ ಮರಗುತ್ತಿದ್ದಾರೆ.

ಪಂಚಾಯ್ತಿ ಇಲೆಕ್ಷನ್‌ನಲ್ಲಿ ಸೋತು ಹಣ ಕಳೆದುಕೊಂಡಿದ್ದ:

ಪ್ರೇಮ್‌ಸಿಂಗ್‌ ಪಂಚಾಯ್ತಿ ಇಲೆಕ್ಷನ್‌ ನಿಂತು ಸೋತಿದ್ದ. 6 ರಿಂದ 8 ಲಕ್ಷ ರು ಹಣ ಅಲ್ಲಿ ಕಳೆದುಕೊಂಡಿದ್ದ, ಹೆಂಡತಿಯ ಬಳಿ ಇದ್ದ ಚಿನ್ನದ ತಾಳಿ, ಉಂಗುರ, ಕೈ ಕಾಲುಂಗರ ಸೇರಿದಂತೆ ಬೆಲೆಬಾಳುವ ಒಡವೆಗಳನ್ನೆಲ್ಲ ಪಡೆದುಕೊಂಡಿದ್ದ. ಮಗಳ ಹೆಸರಲ್ಲಿನ ಆಸ್ತಿಪಾಸ್ತಿ ಸಹ ತನ್ನ ಹೆಸರಿಗೆ ಮಾಡಿಕೊಂಡಿದ್ದ. ಇವನ್ನೆಲ್ಲ ಮಾಡಿದ ನಂತರವೇ ಆಕೆಯ ಬಲಿ ಪಡೆದಿದ್ದಾನೆಂದು ದೂರಿರುವ ಕಮಲಾಬಾಯಿ ತನ್ನ ಮೊಮ್ಮಕ್ಕಳಿಗೆ ತಾನು ಸಾಕುವೆ ಎಂದು ಹೇಳುತ್ತ ಮಗಳ ಕೊಂದ ಅಳಿಯನಿಗೆ ಫಾಸಿ ಶಿಕ್ಷೆಯೇ ಆಗಬೇಕು ಎಂದು ಆಗ್ರಹಿಸಿದರು.

ತಮ್ಮ ಪ್ರೇಮ್‌ಸಿಂಗ್‌ ಹಾಗೂ ಶೀತಲ್‌ ಇಬ್ಬರು ಬೆಂಗಳೂರಲ್ಲೇ ಇದ್ದರು. ದೇವರು ಮಾಡಲಿಕ್ಕೆ ನಮ್ಮ ಬನ್ಸಿ ತಾಂಡಾ (ಕಮಲಾಪುರ ತಾಲೂಕು)ಕ್ಕೆ ಬಂದು ಹೋಗುತ್ತಿದ್ದರು. ಚೆಂದಾಗಿಯೇ ಇದ್ದವರು. ಈಚೆಗೆ ಹೆಂಡತಿ ಬಗ್ಗೆ ಆತನಿಗೆ ಅಸಮಾಧಾನವಿತ್ತು. ಏನೆಂದು ಕೇಳಿದರೆ ಹೇಳುತ್ತಿರಲಿಲ್ಲ. ಎಲ್ಲವೂ ಮೊಬೈಲ್‌ನಲ್ಲಿದೆ ಎಂದು ಹೇಳಿ ಸುಮ್ಮನಾಗುತ್ತಿದ್ದ. ಶೀತಲ್‌ ತಮ್ಮ ತಾಯಿಯ ಮನೆಯ ಪಕ್ಕವೇ ಮನೆ ಮಾಡಿಕೊಂಡು ಇದ್ದವಳು. ಇತ್ತೀಚೆಗೆ ಆತ ಕಲಬುರಗಿಗೆ ಬಂದಿದ್ದ. ಆಗ ಏನಾಯ್ತೋ ಗೊತ್ತಿಲ್ಲ. ಅವರ ಸಂಸಾರದ ಬಗ್ಗೆ ನನಗೆ ಗೊತ್ತಿರುವ ಮಾಹಿತಿ ಇದಿಷ್ಟೆ ಆಗಿದೆ ಎಂದು (ಪ್ರೇಮಸಿಂಗ್‌ ಸಹೋದರ) ವೈಜನಾಥ ರಾಠೋಡ ತಿಳಿಸಿದ್ದಾರೆ.

ಸಂಸಾರದಲ್ಲಿ ಜಗಳ ಇದ್ದದ್ದೆ. ಯಾರ ಮನೆಯಲ್ಲಿ ಜಗಳವಿಲ್ಲ ಹೇಳಿ? ಗಂಡ ಪಂಚಾಯ್ತಿ ಎಲೆಕ್ಷನ್‌ ಸೋತು ಹಣ ಕಳಕೊಂಡಾಗ ಶೀತಲ್‌ ಹೋಗಿ ಆತನನ್ನ ಕರೆದುಕೊಂಡು ಬಂದವಳು. ಹೀಗಿದ್ದರೂ ಪ್ರೇಮ್‌ಸಿಂಗ್‌ ಅತಿರೇಕದಿಂದ ವರ್ತಿಸಿ ಹೆಂಡತಿ ಕೊಲೆ ಮಾಡಿದ್ದಾನೆ. ಇದು ಮಹಿಳೆಯ ಮೇಲಿನ ದೌರ್ಜನ್ಯದ ಕರಾಳ ಮುಖ. ಹೀನ ಕೃತ್ಯ ಮಾಡಿರುವ, ಅದಕ್ಕೆ ಪ್ರೇರಣೆ ನೀಡಿರುವ ಎಲ್ಲರಿಗೂ ಶಿಕ್ಷೆಯಾಗಬೇಕು. ಪೊಲೀಸರು ಆ ಕೆಲಸ ಪ್ರಾಮಾಣಿಕವಾಗಿ ಮಾಡಬೇಕು ಎಂದು ಸಮಾಜ ಸೇವಕಿ ಕಸ್ತೂರಿ ಶಿವಯೋಗಿಮಠ ಹೇಳಿದ್ದಾರೆ.
 

Latest Videos
Follow Us:
Download App:
  • android
  • ios