ಮಂಡ್ಯ: ತೂಬಿನಕೆರೆ ಬೆಲ್ಟ್ ತಯಾರಿಕಾ ಕಾರ್ಖಾನೆಯಲ್ಲಿ ಭಾರೀ ಅಗ್ನಿ ದುರಂತ!
ಮಧ್ಯರಾತ್ರಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್‌ನಿಂದ ಬೆಲ್ಟ್ ತಯಾರಿಕಾ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿ ಕೋಟ್ಯಂತರ ರು. ಮೌಲ್ಯದ ಕಚ್ಚಾವಸ್ತುಗಳು ನಾಶವಾಗಿರುವ ಘಟನೆ ತಾಲೂಕಿನ ತೂಬಿನಕೆರೆ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
ಮಂಡ್ಯ (ಮಾ.4) ಮಧ್ಯರಾತ್ರಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್‌ನಿಂದ ಬೆಲ್ಟ್ ತಯಾರಿಕಾ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿ ಕೋಟ್ಯಂತರ ರು. ಮೌಲ್ಯದ ಕಚ್ಚಾವಸ್ತುಗಳು ನಾಶವಾಗಿರುವ ಘಟನೆ ತಾಲೂಕಿನ ತೂಬಿನಕೆರೆ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
ಹರಿ ಬೆಲ್ಟ್ ಅಂಡ್ ಕನ್ವೇಯರ್ಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಮಧ್ಯರಾತ್ರಿ ಸುಮಾರು ೧ ಗಂಟೆ ವೇಳೆಗೆ ಶಾರ್ಟ್‌ಸರ್ಕ್ಯೂಟ್ ಸಂಭವಿಸಿರುವುದಾಗಿ ತಿಳಿದುಬಂದಿದ್ದು, ಬೆಂಕಿ ದುರಂತದಲ್ಲಿ ಕಾರ್ಖಾನೆಯ ಒಂದು ಯೂನಿಟ್‌ನ ಶೆಲ್ಟರ್ ಸಂಪೂರ್ಣವಾಗಿ ಕುಸಿದುಬಿದ್ದಿದೆ. ೧೦ ಅಗ್ನಿಶಾಮಕ ವಾಹನಗಳು ಹಾಗೂ ೭೦ ಅಗ್ನಿಶಾಮಕ ಸಿಬ್ಬಂದಿ ನಿರಂತರವಾಗಿ ಎಂಟು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜಧಾನಿಯಲ್ಲಿ ಮತ್ತೊಂದು ಅಗ್ನಿ ಅವಘಡ; ಪ್ಲಾಸ್ಟಿಕ್ ಗೋಡೌನ್ ಹೊತ್ತಿಕೊಂಡ ಬೆಂಕಿ!
ಶಾರ್ಟ್‌ಸರ್ಕ್ಯೂಟ್ ಸಂಭವಿಸಿದ ಸಮಯದಲ್ಲಿ ಕಾರ್ಖಾನೆಯೊಳಗೆ ಯಾರೊಬ್ಬರೂ ಇರಲಿಲ್ಲವಾದ್ದರಿಂದ ಜೀವಹಾನಿ ಸಂಭವಿಸುವುದು ತಪ್ಪಿದಂತಾಗಿದೆ. ಬೆಂಕಿ ಅವಘಡದಲ್ಲಿ ಯೂನಿಟ್‌ವೊಂದರ ಬಲಭಾಗದ ಯಂತ್ರೋಪಕರಣಗಳಿಗೆ ಸಾಕಷ್ಟು ಹಾನಿ ಸಂಭವಿಸಿರುವುದು ಕಂಡುಬಂದಿದೆ. ದುರಂತದ ನಡುವೆಯೂ ಬೆಲೆಬಾಳುವ ಲಕ್ಷಾಂತರ ರೂ. ಮೌಲ್ಯದ ಸಿದ್ಧಪಡಿಸಿದ ಬೆಲ್ಟ್‌ಗಳನ್ನು ರಕ್ಷಿಸುವಲ್ಲಿ ಅಗ್ನಿಶಾಮಕ ದಳದವರು ಸಫಲರಾಗಿದ್ದಾರೆ.
ಏನಾಯ್ತು?
ತೂಬಿನಕೆರೆ ಕೈಗಾರಿಕಾ ಪ್ರದೇಶದಲ್ಲಿರುವ ಹರಿ ಬೆಲ್ಟ್ ಅಂಡ್ ಕನ್ವೇಯರ್ಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ೪೩ ಮಂದಿ ಕೆಲಸಗಾರರು ಕಾರ್ಯನಿರ್ವಹಿಸುತ್ತಿದ್ದು, ಶನಿವಾರ ರಾತ್ರಿ ಕೆಲಸ ಮುಗಿದ ನಂತರ ಎಲ್ಲರೂ ಕಾರ್ಖಾನೆಯಿಂದ ಹಿಂತಿರುಗಿದ್ದಾರೆ. ಮಧ್ಯರಾತ್ರಿ ೧ ಗಂಟೆ ವೇಳೆಗೆ ಶಾರ್ಟ್‌ಸಕ್ಯೂಟ್ ಸಂಭವಿಸಿ ಬೆಲ್ಟ್ ತಯಾರಿಸಲು ಇರಿಸಲಾಗಿದ್ದ ಪುಡಿಗೆ ಬೆಂಕಿ ಹೊತ್ತಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿಯ ಜ್ವಾಲೆ ಕಾರ್ಖಾನೆಯ ಒಂದು ಯೂನಿಟ್‌ನ್ನು ಆವರಿಸಿಕೊಂಡಿದೆ. ಅಲ್ಲಿದ್ದ ಬೆಲ್ಟ್ ತಯಾರಿಕಾ ಕಚ್ಚಾ ವಸ್ತುಗಳು, ಯಂತ್ರೋಪಕರಣಗಳೆಲ್ಲವೂ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಹೊತ್ತಿ ಉರಿಯಲಾರಂಭಿಸಿದವು.
ಸತತ ಕಾರ್ಯಾಚರಣೆ:
ಕಾರ್ಖಾನೆಯೊಳಗೆ ಬೆಂಕಿ ಧಗ ಧಗಿಸುತ್ತಿರುವುದು, ದಟ್ಟವಾದ ಹೊಗೆ ಬರುತ್ತಿರುವ ದೃಶ್ಯ ಕಂಡ ಭದ್ರತಾ ಸಿಬ್ಬಂದಿ ಕೂಡಲೇ ಮಾಲೀಕರಿಗೆ ವಿಷಯ ಮುಟ್ಟಿಸಿದರು. ನಂತರ ಅಗ್ನಿಶಾಮಕ ದಳ ಇಲಾಖೆಗೆ ಕರೆ ಮಾಡಿ ವಿಷಯ ಮುಟ್ಟಿಸಿದರು. ಆರಂಭದಲ್ಲಿ ಎರಡು ಅಗ್ನಿಶಾಮಕ ವಾಹನಗಳು ಬಂದವು. ಬಾಗಿಲು ತೆರೆದು ನೋಡಿದಾಗ ಬೆಂಕಿ ದುರಂತದ ಅಗಾಧತೆ ಕಂಡು ಅಗ್ನಿಶಾಮಕ ಇಲಾಖೆ ಪ್ರಾದೇಶಿಕ ಅಧಿಕಾರಿ ಗುರುರಾಜ್ ಅವರು ಶ್ರೀರಂಗಪಟ್ಟಣ, ಪಾಂಡವಪುರ, ಮಂಡ್ಯ, ಮೈಸೂರಿನಿಂದ ತಲಾ ಎರಡು ಅಗ್ನಿಶಾಮಕ ವಾಹನಗಳು ಮತ್ತು ೨ ಕೈಗಾರಿಕಾ ಪಡೆಯ ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕರೆಸಲಾಯಿತು. ೭೦ ಅಗ್ನಿಶಾಮಕ ಸಿಬ್ಬಂದಿ ಸತತವಾಗಿ ಕಾರ್ಯಾಚರಣೆ ನಡೆಸಿ ಮಧ್ಯರಾತ್ರಿ ೪ ಗಂಟೆಯಿಂದ ಬೆಳಗ್ಗೆ ೧೨ ಗಂಟೆಯವರೆಗೆ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ.
ಕಚ್ಚಾ ವಸ್ತುಗಳು ಬೆಂಕಿಗಾಹುತಿ:
ಬೆಂಕಿ ಅವಘಡದಿಂದ ರಬ್ಬರ್ ಬೆಲ್ಟ್‌ನ ಕಚ್ಚಾ ವಸ್ತುಗಳು ಸುಟ್ಟು ಕರಕಲಾಗಿವೆ. ಒಂದು ಯೂನಿಟ್‌ನ ಮೇಲ್ಛಾವಣಿ ಕುಸಿದುಬಿದ್ದಿದೆ. ಒಳಗೆ ಸುಟ್ಟ ಕರಕಲಾಗಿದ್ದ ವಸ್ತುಗಳನ್ನು ಬೆಳಗ್ಗೆ ಜೆಸಿಬಿ ಯಂತ್ರದ ಮೂಲಕ ಹೊರಹಾಕಲಾಗುತ್ತಿತ್ತು. ಮತ್ತೊಂದು ಯೂನಿಟ್‌ನ ಬಲಭಾಗದಲ್ಲಿದ್ದ ಸುಮಾರು ೧೬ಕ್ಕೂ ಹೆಚ್ಚು ಯಂತ್ರೋಪಕರಣಗಳಿಗೆ ಸಾಕಷ್ಟು ಹಾನಿ ಉಂಟಾಗಿದ್ದರೆ, ಮತ್ತೊಂದು ಭಾಗದಲ್ಲಿದ್ದ ಯಂತ್ರೋಪಕರಣಗಳಿಗೆ ಹಾನಿ ಸಂಭವಿಸಿಲ್ಲ. ಬೆಂಕಿ ಅವಘಡದ ನಡುವೆಯೂ ಲಕ್ಷಾಂತರ ರು. ಮೌಲ್ಯದ ಸಿದ್ಧಪಡಿಸಿದ್ದ ಬೆಲ್ಟ್‌ಗಳನ್ನು ಸುರಕ್ಷಿತವಾಗಿ ಹೊರತರಲಾಗಿದೆ. ಅವುಗಳಿಗೆ ಹಾನಿಯಾಗದಂತೆ ಸಂರಕ್ಷಣೆ ಮಾಡಲಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಮತ್ತೆ ಅಗ್ನಿ ಅವಘಡ; ಬಟ್ಟೆ, ಶೂ ಮಳಿಗೆಗೆ ಹೊತ್ತಿಕೊಂಡ ಬೆಂಕಿ!
ಅಗ್ನಿ ನಿರೋಧಕ ವ್ಯವಸ್ಥೆ ಇಲ್ಲ:
ಹರಿ ಬೆಲ್ಟ್ ಅಂಡ್ ಕನ್ವೇಯರ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯಲ್ಲಿ ಅಗ್ನಿ ನಿರೋಧಕ ವ್ಯವಸ್ಥೆಯನ್ನು ಅಳವಡಿಸಿಕೊಂಡಿಲ್ಲದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ೪೩ ಜನರು ಕೆಲಸ ಮಾಡುವ ಬೆಲ್ಟ್ ತಯಾರಿಸುವ ದೊಡ್ಡ ಕಾರ್ಖಾನೆಯಲ್ಲಿ ಸುರಕ್ಷತಾ ದೃಷ್ಟಿಯಿಂದ ಅಗ್ನಿ ನಿರೋಧಕ ವ್ಯವಸ್ಥೆಯನ್ನು ಅಳವಡಿಸಿಕೊಂಡಿಲ್ಲದಿರುವ ಬಗ್ಗೆಯೂ ಅಗ್ನಿಶಾಮಕ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಶಾರ್ಟ್‌ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿರುವ ಸಾಧ್ಯತೆಗಳಿವೆ. ಬೆಂಕಿಯ ತೀವ್ರತೆ ಹೆಚ್ಚಾಗಿದ್ದ ಕಾರಣ ಸತತ ೮ ಗಂಟೆಗಳ ಕಾಲ ೧೦ ಅಗ್ನಿಶಾಮಕ ವಾಹನಗಳು, ೭೦ ಸಿಬ್ಬಂದಿಯೊಂದಿಗೆ ಬೆಂಕಿ ನಂದಿಸಿದ್ದೇವೆ. ಅಗ್ನಿನಿರೋಧಕ ವ್ಯವಸ್ಥೆ ಅಳವಡಿಸಿಕೊಂಡಿಲ್ಲದಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಮುಂದೆ ತನಿಖೆ ನಡೆಸಬೇಕಿದೆ.
- ಗುರುರಾಜ್, ಪ್ರಾದೇಶಿಕ ಅಧಿಕಾರಿ, ಅಗ್ನಿಶಾಮಕ ಇಲಾಖೆ