ಹುಬ್ಬಳ್ಳಿಯಲ್ಲಿ ಪಲ್ಲವಿ ಕಗ್ಗಲ್ ಆತ್ಮ೧ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನೇಮಕಾತಿ ವಿಳಂಬ ಕಾರಣ ಎಂಬ ವದಂತಿ ಪೊಲೀಸ್ ಕಮಿಷನರ್ ತಳ್ಳಿಹಾಕಿದ್ದಾರೆ. ಸ್ಥಳದಲ್ಲಿ ಸಿಕ್ಕ ಡೆತ್ ನೋಟ್‌ನಲ್ಲಿ ಅನಾರೋಗ್ಯ, ವೈಯಕ್ತಿಕ ಕಾರಣಗಳ ಬಗ್ಗೆ ಪಲ್ಲವಿ ಉಲ್ಲೇಖಿಸಿದ್ದಾರೆ. ಸುಳ್ಳು ಸುದ್ದಿ ಹರಡದಂತೆ ಮನವಿ.
ಹುಬ್ಬಳ್ಳಿ (ಡಿ.17): ಪಲ್ಲವಿ ಕಗ್ಗಲ್ ಆತ್ಮ೧ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು 'ಏಷ್ಯಾನೆಟ್ ಸುವರ್ಣ ನ್ಯೂಸ್'ಗೆ ವಿಶೇಷ ಹೇಳಿಕೆ ನೀಡಿದ್ದಾರೆ. 'ನೇಮಕಾತಿ ವಿಳಂಬದ ಹಿನ್ನೆಲೆಯಲ್ಲಿ ಪಲ್ಲವಿ ಆತ್ಮ೧ಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಸಂಪೂರ್ಣ ಸುಳ್ಳು. ಸಾರ್ವಜನಿಕರು ಹಾಗೂ ಸಾಮಾಜಿಕ ಜಾಲತಾಣ ಬಳಕೆದಾರರು ಯಾವುದೇ ಕಾರಣಕ್ಕೂ ಈ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡಬಾರದು' ಎಂದು ಅವರು ಮನವಿ ಮಾಡಿದ್ದಾರೆ.
ಪಲ್ಲವಿ ಕಗ್ಗಲ್ ಸಾವಿಗೆ ಕಾರಣವೇನು?
ಪಲ್ಲವಿ ಅವರ ಆತ್ಮ೧ಹತ್ಯೆಗೆ ಕಾರಣವೇನು ಎಂಬ ಬಗ್ಗೆ ಸ್ಪಷ್ಟನೆ ನೀಡಿದ ಕಮಿಷನರ್, 'ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ ಅನಾರೋಗ್ಯ ಹಾಗೂ ವೈಯಕ್ತಿಕ ಕಾರಣಗಳಿಂದಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮ೧ಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆಯಲಾಗಿದೆ. ನನ್ನ ಸಾವಿಗೆ ನಾನೇ ಕಾರಣ ಎಂದು ಪಲ್ಲವಿ ಉಲ್ಲೇಖಿಸಿದ್ದಾರೆ. ಹೀಗಾಗಿ ಅಭ್ಯರ್ಥಿಗಳ ಮನೋಸ್ಥೈರ್ಯ ಕುಗ್ಗಿಸುವಂತಹ ತಪ್ಪು ಮಾಹಿತಿಯನ್ನು ಯಾರೂ ಹಂಚಿಕೊಳ್ಳಬಾರದು' ಎಂದು ತಿಳಿಸಿದರು.
ಸಾಮಾಜಿಕ ಜಾಲತಾಣಗಳ ಮೇಲೆ ಪೊಲೀಸರ ತೀವ್ರ ನಿಗಾ
ಈ ಪ್ರಕರಣವನ್ನು ಇಟ್ಟುಕೊಂಡು ಸೋಶಿಯಲ್ ಮೀಡಿಯಾದಲ್ಲಿ ವದಂತಿ ಹರಡುವವರ ವಿರುದ್ಧ ಕಮಿಷನರ್ ಎಚ್ಚರಿಕೆ ನೀಡಿದ್ದಾರೆ. 'ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ವಹಿಸಲಾಗಿದೆ. ಪ್ರೀತಿ-ಪ್ರೇಮದ ವಿಚಾರಗಳ ಬಗ್ಗೆ ನಮಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ, ಈ ಬಗ್ಗೆ ಕುಟುಂಬ ಸದಸ್ಯರಿಂದ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು' ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಧಾರವಾಡದಲ್ಲಿ ಕೋಚಿಂಗ್ ಪಡೆಯುತ್ತಿದ್ದ ಮೃತ ಯುವತಿ
ಪಲ್ಲವಿ ಅವರ ಹಿನ್ನೆಲೆಯ ಬಗ್ಗೆ ಮಾಹಿತಿ ನೀಡಿದ ಪೊಲೀಸರು, 'ಮೃತ ಯುವತಿ ಈ ಹಿಂದೆಯೇ ಧಾರವಾಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್ ಪಡೆದುಕೊಂಡಿದ್ದರು. ಪುನಃ ಸೆಪ್ಟೆಂಬರ್ ತಿಂಗಳಿನಲ್ಲಿ ಹೆಚ್ಚಿನ ವ್ಯಾಸಂಗಕ್ಕಾಗಿ ಧಾರವಾಡಕ್ಕೆ ಬಂದಿದ್ದರು. ಆದರೆ ವೈಯಕ್ತಿಕ ಕಾರಣಗಳಿಂದಾಗಿ ಈ ಮನನೊಂದ ನಿರ್ಧಾರ ಕೈಗೊಂಡಿದ್ದಾರೆ' ಎಂದು ಮಾಹಿತಿ ನೀಡಿದರು.
ಮೃತ ಪಲ್ಲವಿ ತಂದೆ ಹೇಳಿಕೆ:
ಹುಬ್ಬಳ್ಳಿ - ರೈಲ್ವೆ ಹಳಿಯಲ್ಲಿ ವಿದ್ಯಾರ್ಥಿನಿ ಸಾವು ಪ್ರಕರಣ ಸಂಬಂಧ ಪಲ್ಲವಿ ಕಗ್ಗಲ್ ತಂದೆ ಉಲ್ತೆಪ್ಪ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಮಗಳಿಗೆ ಆರೋಗ್ಯ ಸಮಸ್ಯೆ, ವೈಯಕ್ತಿಕ ಸಮಸ್ಯೆ ಹಿನ್ನೆಲೆಯಲ್ಲಿ ಈ ರೀತಿ ಮಾಡಿಕೊಂಡಿದ್ದಾಳೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಪಲ್ಲವಿ ಪೊಲೀಸ್ ಇಲಾಖೆ ನೇಮಕಾತಿಯಲ್ಲಿ ಫಿಸಿಕಲ್ ನಲ್ಲಿ ಪಾಸ್ ಆಗಿದ್ದಳು. ಆದರೆ ಅಂತಿಮ ಸುತ್ತಿಗೆ ಆಯ್ಕೆಯಾಗಿರಲಿಲ್ಲ ಹೀಗಾಗಿ ಮತ್ತೆ ಸ್ಪರ್ಧಾ ಪರೀಕ್ಷೆ ಎದುರಿಸಲು ಕಳೆದ ಸೆಪ್ಟೆಂಬರ್ ನಲ್ಲಿ ಧಾರವಾಡಕ್ಕೆ ಬಂದಿದ್ದಳು. ಮಗಳು ಓದುತ್ತಾಳೆ ಅನ್ನೋ ನಂಬಿಕೆ ಇತ್ತು. ಆ ನಂಬಿಕೆ ಮೇಲೆ ಕಳಿಸಿಕೊಟ್ಟಿದ್ದೆವು. ಆದರೆ ಈ ರೀತಿ ಮಾಡಿಕೊಂಡಿದ್ದಾಳೆ. ಮಗಳಿಗೆ ಮದುವೆ ಇನ್ನೂ ಫಿಕ್ಸ್ ಆಗಿರಲಿಲ್ಲ ಎಂದು ತಿಳಿಸಿದ್ದಾರೆ.


