Hubli Crime News: ಕಾರ್ಪೋರೆಟರ್ ಹತ್ಯೆಗೆ ಪತಿಯಿಂದಲೇ ಯತ್ನ: ದೂರು ದಾಖಲು
Hubli Crime News: ಪತಿ ನನ್ನ ಮೇಲೆ ದೌರ್ಜನ್ಯ ಎಸಗಿದಲ್ಲದೇ ಕತ್ತು ಹಿಸುಕಿ ಕೊಲೆ ಮಾಡಲು ಪ್ರಯತ್ನಿಸಿದ್ದಾನೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಕಾರ್ಪೋರೆಟರ್ ತಮ್ಮ ಪತಿ ವಿರುದ್ಧ ಪ್ರರಕಣ ದಾಖಲಿಸಿದ್ದಾರೆ
ಹುಬ್ಬಳ್ಳಿ (ಜೂ. 28): ಪತಿ ನನ್ನ ಮೇಲೆ ದೌರ್ಜನ್ಯ ಎಸಗಿದಲ್ಲದೇ ಕತ್ತು ಹಿಸುಕಿ ಕೊಲೆ ಮಾಡಲು ಪ್ರಯತ್ನಿಸಿದ್ದಾನೆ (Attempt To Murder) ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಕಾರ್ಪೋರೆಟರ್ ಶೃತಿ ಚಲವಾದಿ ತಮ್ಮ ಪತಿ ಸಂತೋಷ ವಿರುದ್ಧ ಕೇಶ್ವಾಪೂರ ಪೊಲೀಸ್ ಠಾಣೆಯಲ್ಲಿ ಪ್ರರಕಣ ದಾಖಲಿಸಿದ್ದಾರೆ. ಹಲವು ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಜೈಲಿನಿಂದ ಹೊರಬಂದಿರುವ ಪತಿ ಸಂತೋಷ ಪರಸ್ತ್ರಿಯೊಂದಿಗೆ ಸಂಪರ್ಕದಲ್ಲಿದ್ದು, ಮೊಬೈಲ್‌ನಲ್ಲಿ ಮಾತನಾಡುವುದು ಮತ್ತು ಮೇಸೆಜ್ ಮಾಡುವ ವಿಷಯಕ್ಕೆ ಹಲವಾರು ಬಾರಿ ಇಬ್ಬರ ಮಧ್ಯೆ ವಾಗ್ವಾದವಾಗಿದೆ.
ಈ ಜಗಳ ಭಾನುವಾರ ಅತೀರೇಖಕ್ಕೆ ತಲುಪಿದ್ದು, ಪತ್ನಿ ಶೃತಿ ಗರ್ಭಿಣಿಯೆಂದು ಲೆಕ್ಕಿಸದೆ ಹಲ್ಲೆ ನಡಸಿದ್ದಾನೆ ಎಂದು ಆರೋಪಿಸಲಾಗಿದೆ. ಈಗಾಗಲೇ ಪರಸ್ತ್ರಿಯೊಂದಿಗೆ ಸಂಬಂಧವಿದ್ದು, ನಾನು ಅವಳನ್ನು ಮದುವೆಯಾಗಿ ನಿನಗೆ ವಿಚ್ಛೆಧನ ನೀಡುತ್ತೇನೆ ಮನೆ ಬಿಟ್ಟು ಹೋಗು ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ ಎಂದು ಪಾಲಿಕೆ ಸದಸ್ಯೆ ದೂರಿನಲ್ಲಿ ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ ನಿನ್ನನ್ನು ಮತ್ತು ನಿಮ್ಮ ಅಣ್ಣನನ್ನು ಹುಡುಗರು ಕರೆಸಿ ಕೊಲೆ ಮಾಡಿಸುತ್ತೇನೆ ಎಂದು ಪತ್ನಿಯ ಕುತ್ತಿಗೆ ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದು, ಈ ಕುರಿತು ಕೇಶ್ವಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಹಣ ದ್ವಿಗುಣಗೊಳಿ ಕೊಡ್ತೇವೆ ಎಂದ ಪರ್ಲ್ಸ್, ನಂಬಿ ಪರದೇಶಿಗಳಾದ ಏಜೆಂಟರು
ಕಾರ್ಪೋರೆಟರ್ ಶೃತಿ ಚಲವಾದಿ ಸಹೋದರ ಚೇತನ ಸಹ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯರಾಗಿದ್ದು ಅವರ ಹತ್ಯೆಗೂ ಸಂಚು ರೂಪಿಸಿದ ಆರೋಪ ಕೇಳಿ ಬಂದಿದೆ. ಪತಿಯ ವಿರುದ್ಧ ದೂರು ನೀಡುತ್ತಿದ್ದಂತೆ ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸರು ಆರೋಪಿ ಸಂತೋಷ ಚಲುವಾದಿಯನ್ನು ಬಂಧಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ದುಷ್ಕರ್ಮಿಗಳ ದಾಂದಲೇ: ಇನ್ನು ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಒಂದಿಲ್ಲೊಂದು ಕಾರಣಕ್ಕೆ ಗಲಾಟೆ ಹಾಗೂ ಕೊಲೆಯಂತ ಕ್ರೈಮ್ ಪ್ರಕರಣಗಳು ನಡೆಯುತ್ತಲೇ ಇವೆ. ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆಯೊಂದು ಹುಬ್ಬಳ್ಳಿಯಲ್ಲಿ ನಡೆದಿದೆ.
ಬಾರ್‌ನಲ್ಲಿ ಮದ್ಯ ಸೇವನೆ ಮಾಡುತ್ತಿದ್ದವರ ನಡುವೆ ಗಲಾಟೆ ಬಿಡಿಸಲು ಮುಂದಾದ ಸಿಬ್ಬಂದಿಗೆ ಮೂವರು ಸೇರಿ ಒಡೆದ ಬಾಟಲಿಯಿಂದ ಹಲ್ಲೆ ನಡೆಸಿ ಹತ್ಯೆಗೆ ಮುಂದಾದ ಪ್ರಕರಣ ಇಲ್ಲಿನ ಶಿರೂರ ಪಾರ್ಕ್‌ನ ಸಿಲ್ವರ್ ಸ್ಪೋನ್ ಮತ್ತು ರೆಸ್ಟೋರೆಂಟ್‌ನಲ್ಲಿ ನಡೆದಿದೆ. ಹೊಸೂರಿನ ಸುಪ್ರಿತ್, ಆದಿತ್ಯ, ಪ್ರಜ್ವಲ್ ಸೇರಿ ನಾಲ್ವರ ವಿರುದ್ಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಪತಿ, ಮೂವರು ಸ್ನೇಹಿತರಿಂದ ಸಾಮೂಹಿಕ ರೇಪ್
ಆರೋಪಿಗಳು, ಸ್ನೇಹಿತರ ಜೊತೆ ಮದ್ಯ ಸೇವನೆ ಮಾಡುತ್ತಿದ್ದಾಗ ಪಕ್ಕದ ಟೇಬಲ್‌ನಲ್ಲಿ ಕುಳಿತವರ ಜೊತೆ ಜಗಳ ಮಾಡಿ, ಬಾಟಲಿ ಒಡೆದು ಹಲ್ಲೆಗೆ ಯತ್ನಿಸಿದ್ದರು. ಬಾರ್ ವ್ಯವಸ್ಥಾಪಕ ಮಂದಾರ್ ಮತ್ತು ಸಿಬ್ಬಂದಿ ಮಿಥುನ್ ಅದನ್ನು ತಡೆದಾಗ, ಅಶ್ಲೀಲವಾಗಿ ಬೈದು ಅವರ ಮೇಲೆಯೇ ಹಲ್ಲೆಗೆ ಮುಂದಾಗಿದ್ದರು. ಅದನ್ನು ತಪ್ಪಿಸಲು ಸಿಬ್ಬಂದಿ ರವಿ, ಮಂಜುನಾಥ ಮತ್ತು ಸಂತೋಷ ಹೋದಾಗ, ಆರೋಪಿಗಳು ಸಂತೋಷ ಅವರ ತಲೆಗೆ ಬಾಟಲಿಯಿಂದ ಹೊಡೆದಿದ್ದಾರೆ. ಪ್ರಿಂಟರ್ ಹಾಗೂ ಗಾಜಿನ ಕದ ಒಡೆದು ಹಾನಿ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.