ಹಾವೇರಿ ಜಿಲ್ಲೆಯಲ್ಲಿ ಯುವಕನೊಬ್ಬ ತನ್ನ ಪ್ರೇಮ ನಿವೇದನೆ ತಿರಸ್ಕರಿಸಿದ್ದಕ್ಕೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಹಲವು ವರ್ಷಗಳ ಸ್ನೇಹಿತೆಯೇ ಆತನ ಪ್ರೇಮ ನಿವೇದನೆಯನ್ನು ತಿರಸ್ಕರಿಸಿದ್ದರಿಂದ ಈ ಘಟನೆ ನಡೆದಿದೆ.

ಹಾವೇರಿ (ಡಿ.06): ಏಲಕ್ಕಿ ನಾಡು ಹಾವೇರಿ ಜಿಲ್ಲೆಯಲ್ಲೊಂದು ವಿಚಿತ್ರ ಪ್ರೇಮ ಪ್ರಕರಣದಿಂದ ಯುವಕ ಸಾವಿನ ದವಡೆಗೆ ಹೋಗಿರುವ ಘಟನೆ ನಡೆದಿದೆ. ತನ್ನ ಹಲವು ವರ್ಷದ ಸ್ನೇಹಿತೆಗೆ ಪ್ರೇಮ ನಿವೇದನೆ ಮಾಡಿದರೂ ತಿರಸ್ಕರಿಸಿದ ಕಾರಣ ಆಕೆಯನ್ನು ಪ್ರೀತಿ ಮಾಡುತ್ತಿದ್ದ ಗೆಳೆಯ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ.

ನಾವಿಬ್ಬರೂ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದೇವೆ. ಈಗ ನಾನು ನಿನ್ನ ಲವ್ ಮಾಡುತ್ತಿದ್ದೇನೆ, ಮದುವೆ ಆಗೋಣ ಎಂದು ಪ್ರೇಮ ನಿವೇದನೆಯನ್ನೂ ಮಾಡಿದ್ದಾನೆ. ಆದರೆ, ಪ್ರೇಮ ನಿವೇದನೆಗೆ ಗೆಳತಿ ಒಪ್ಪಿಕೊಳ್ಳದಿದ್ದಾಗ ಆಕೆಯ ಎದುರೇ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಈ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕು ತಡಸ ಗ್ರಾಮದ ಬಳಿ ನಡೆದಿದೆ. ಇನ್ನು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪಾಗಲ್ ಪ್ರೇಮಿಯನ್ನು ಪ್ರವೀಣ್ ಬೆಟದೂರ (25) ಎಂದು ಗುರುತಿಸಲಾಗಿದೆ. ಈತನ ಪ್ರೇಮ ನಿವೇದನೆ ತಿರಸ್ಕಾರ ಮಾಡಿದ ಗೆಳತಿ ಬಸಮ್ಮ (21) ಆಗಿದ್ದಾಳೆ.

ಯುವಕ ಪ್ರವೀಣ್ ಬೆಟ್ಟದೂರು ಹುಬ್ಬಳ್ಳಿ ತಾಲೂಕು ಬೆಳಗಲಿ ಗ್ರಾಮದ ನಿವಾಸಿ. ಯುವತಿ ಬಸಮ್ಮ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕು ಶೀರೂರು ಗ್ರಾಮದವರು. ಇಬ್ಬರೂ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದು, ಸಲುಗೆಯನ್ನೂ ಹೊಂದಿದ್ದರು. ಪ್ರವೀಣ್ ಹೊನ್ನಾವರದಲ್ಲಿ ಹಣ್ಣಿನ ವ್ಯಾಪಾರ ಮಾಡಿಕೊಂಡಿದ್ದಾನೆ. ಇತ್ತ ಯುವತಿ ಹುಬ್ಬಳ್ಳಿಯ ಖಾಸಗಿ ಕಾಲೇಜೊಂದರಲ್ಲಿ ಬಿ.ಎಸ್ ಸಿ ನರ್ಸಿಂಗ್ ಮಾಡುತ್ತಿದ್ದಾಳೆ. ಇಬ್ಬರ ನಡುವಿನ ಹಲವು ವರ್ಷಗಳ ಸ್ನೇಹ ಸಲುಗೆಯಿಂದಾಗಿ ಯುವಕ ಪ್ರವೀಣ, ಬಸಮ್ಮನ ಬಳಿ ಪ್ರೇಮ ನಿವೇದನೆ ಮಾಡಿದ್ದಾನೆ. ಆದರೆ, ಪ್ರವೀಣ್ ಲವ್ ಪ್ರಪೋಸ್ ಮಾಡಿದ್ದನ್ನು ಬಸಮ್ಮ ತಿರಸ್ಕರಿಸಿದ್ದಾಳೆ.

ಇದನ್ನೂ ಓದಿ: ₹2.5 ಕೋಟಿ ಪೀಕಿದ ಹೈಸ್ಕೂಲ್ ಬಾಯ್‌ಫ್ರೆಂಡ್‌ಗೆ ತನು, ಮನ, ಧನ ಮತ್ತು ದೇಹವನ್ನೂ ಅರ್ಪಿಸಿದ ಯುವತಿ!

ಇದರಿಂದ ಪ್ರವೀಣ್ ಬೆಟದೂರ ತನಗೆ ಪ್ರೀತಿಸಿದ ಹುಡುಗಿ ಸಿಗಲಿಲ್ಲವೆಂದು ಬೇಸರದಲ್ಲಿದ್ದನು. ಇದಾದ ನಂತರ ಸ್ನೇಹವನ್ನು ಮುಂದುವರೆಸುವುದಾಗಿ ಹೇಳಿಕೊಂಡು ಇಂದು ಬಸಮ್ಮನಿಗೆ ಕರೆ ಮಾಡಿ ನಿನ್ನೊಂದಿಗೆ ಮಾತನಾಡುವುದು ಇದೆ ಬಾ ಎಂದು ಶಿಗ್ಗಾವಿ ತಾಲೂಕು ತಡಸ ಗ್ರಾಮದ ಹೊರ ವಲಯದ ತಾಯವ್ವನ ದೇವಸ್ಥಾನದ ಬಳಿ ಗಾಡಿ ನಿಲ್ಲಿಸಿದ್ದಾನೆ. ನಂತರ ನೀನು ನನ್ನ ಪ್ರೀತಿ ಒಪ್ಪಿಕೊಳ್ಳದಿದ್ದಕ್ಕೆ ನನಗೆ ಬದುಕುವ ಆಸೆಯೇ ಇಲ್ಲದಂತಾಗಿದೆ ಎಂದು ಆಕೆಯ ಎದುರಿಗೆ ನೋವು ತೋಡಿಕೊಂಡಿದ್ದಾನೆ. ನಂತರ, ತಾನು ಬಾಟಲ್‌ ಒಂದರಲ್ಲಿ ತಂದಿದ್ದ ಪೆಟ್ರೋಲ್ ಅನ್ನು ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ.

ಇದನ್ನೂ ಓದಿ: ಬೆಳಗಾವಿ: ಮಗಳನ್ನು ಪ್ರೀತಿಸಲು ನಿರಾಕರಿಸಿದ ತಾಯಿ, ಮಗನ ಬರ್ಬರ ಹತ್ಯೆ

ಇದರಿಂದ ಬೆಂಕಿಯ ಜ್ವಾಲೆಯಲ್ಲಿ ದೇಹ ಸುಟ್ಟು ಹೋಗುತ್ತಿದ್ದರಿಂದ ಯುವಕ ಪ್ರವೀಣ್ ಉರಿ ತಾಳಲಾರದೇ ಜೋರಾಗಿ ಚೀರಾಡಿದ್ದಾರೆ. ಗಈ ವೇಳೆ ಆತನನ್ನು ಬೆಂಕಿಯಿಂದ ಕಾಪಾಡಲು ಯುವತಿ ಕೂಡ ಪ್ರಯತ್ನ ಮಾಡಿದ್ದು, ಸಹಾಯಕ್ಕಾಗಿ ಗ್ರಾಮಸ್ಥರನ್ನು ಕರೆದಿದ್ದಾಳೆ. ಆದರೆ, ಪೆಟ್ರೋಲ್ ಇಂಧನ ಶಕ್ತಿ ಖಾಲಿ ಆಗುವವರೆಗೆ ಬೆಂಕಿ ಹೊತ್ತಿ ಉರಿದಿದ್ದು, ದೇಹದ ಶೇ.50ಕ್ಕೂ ಹೆಚ್ಚು ಭಾಗ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಸ್ಥಳಕ್ಕೆ ಬಂದ ಗ್ರಾಮಸ್ಥರು ಯುವಕನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶಿಗ್ಗಾವಿ ತಾಲೂಕು ತಡಸ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ.