ಬೆಳಗಾವಿ: ಮಗಳನ್ನು ಪ್ರೀತಿಸಲು ನಿರಾಕರಿಸಿದ ತಾಯಿ, ಮಗನ ಬರ್ಬರ ಹತ್ಯೆ
ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಮಗಳ ಪ್ರೀತಿ ವಿರೋಧಿಸಿದ್ದಕ್ಕೆ ತಾಯಿ ಮತ್ತು ಮಗನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಪ್ರೇಯಸಿಯ ತಾಯಿ ಮತ್ತು ಅಣ್ಣನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಆರೋಪಿ ಮತ್ತು ಪ್ರೇಯಸಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಳಗಾವಿ (ಡಿ.05): ನಾನು ನಿನ್ನ ಮಗಳನ್ನು ಪ್ರೀತಿ ಮಾಡುತ್ತಿದ್ದೀನಿ ಎಂದು ಹೇಳಿದರೂ ಮಗಳ ಪ್ರೀತಿ ವಿರೋಧಿಸಿದ್ದಕ್ಕೆ ತಾಯಿ, ಮಗನ ಬರ್ಬರ್ ಹತ್ಯೆ ಮಾಡಿದ ದುರ್ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಅಕ್ಕೋಳ ಗ್ರಾಮದಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ಮನೆಗೆ ನುಗ್ಗಿ ತಾಯಿ, ಮಗನ ಮೇಲೆ ಮಾರಾಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಅಕ್ಕೋಳ ಗ್ರಾಮದ ನಿವಾಸಿ ಮಂಗಳಾ ನಾಯಕ (45) ಹಾಗೂ ಆಕೆಯ ಪುತ್ರ ಪ್ರಜ್ವಲ್ ನಾಯಕ (18) ಕೊಲೆಯಾದ ದುರ್ದೈವಿಗಳು. ಮಂಗಳಾ ಅವರ ಪುತ್ರಿ ಪ್ರಾಜಕ್ತಾ (17) ಮತ್ತು ರವಿ ಇಬ್ಬರೂ ಪ್ರೀತಿಸುತ್ತಿದ್ದರು. ಪ್ರಾಜಕ್ತಾ ಮತ್ತು ರವಿ ಒಂದೇ ಸಮುದಾಯದಕ್ಕೆ ಸೇರಿದ್ದರೂ ಲವ್ ಮ್ಯಾರೇಜ್ ಗೆ ತಾಯಿ ವಿರೋಧ ವ್ಯಕ್ತಪಡಿಸಿದ್ದರು.
ಇದರಿಂದ ಕೋಪಗೊಂಡಿದ್ದ ರವಿ ತಮ್ಮ ಮದುವೆ ನಿರಾಕರಿಸಿದ ತನ್ನ ಅತ್ತೆಯನ್ನು ಸುಮ್ಮನೆ ಬಿಡಬಾರದು ಎಂದು ನಿನ್ನೆ ರಾತ್ರಿ ಮನೆಗೆ ನುಗ್ಗಿ ಪ್ರೇಯಸಿಯ ತಾಯಿ ಹಾಗೂ ಅಣ್ಣನನ್ನು ಮಾರಕಾಸ್ತ್ರಗಳಿಂದ ಭೀಕರವಾಗಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ಸದ್ಯ ಪೊಲೀಸರು ಆರೋಪಿ ರವಿ ಮತ್ತು ಪ್ರೇಯಸಿ ಪ್ರಾಜಕ್ತಾ ವಶಕ್ಕೆ ಪಡೆದಿದ್ದಾರೆ. ಇನ್ನು ಸ್ಥಳಕ್ಕೆ ಭೇಟಿ ಮಾಡಿದ ಪೊಲೀಸರು ಪರಿಶೀಲನೆ ನಡೆಸಿ ಮೃತ ದೇಹಗಳನ್ನ ಮರಣೋತ್ತರ ಪರೀಕ್ಷೆಗೆ ನಿಪ್ಪಾಣಿ ಆಸ್ಪತ್ರೆ ರವಾನೆ ಮಾಡಿದ್ದಾರೆ. ಈ ಘಟನೆ ಕುರಿತಂತೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.