ಕೋವಿಡ್ ವೇಳೆ ಆತ್ಮಹತ್ಯೆ ಮಾಡಿಕೊಂಡವರೆಷ್ಟು? ಗಾಬರಿ ಮೂಡಿಸುತ್ತಿದೆ ಕೇಂದ್ರದ ವರದಿ
ಕೋವಿಡ್ ಸಾಂಕ್ರಾಮಿಕ ತಾಂಡವವಾಡುತ್ತಿದ್ದ 2021ರಲ್ಲಿ ಪ್ರಾಣ ಉಳಿಸಿಕೊಳ್ಳಲು ಜನರು ಹರಸಾಹಸ ಪಡುತ್ತಿದ್ದರೆ, 37,751 ಮಂದಿ ದಿನಗೂಲಿ ನೌಕರರು ಹಾಗೂ 11724 ಮಂದಿ ನಿರುದ್ಯೋಗಿಗಳು ಸಾವಿಗೆ ಶರಣಾಗಿರುವ ಕಳವಳಕಾರಿ ಸಂಗತಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ವರದಿಯಿಂದ ಬೆಳಕಿಗೆ ಬಂದಿದೆ.
ದೆಹಲಿ: ಕೋವಿಡ್ ಸಾಂಕ್ರಾಮಿಕ ತಾಂಡವವಾಡುತ್ತಿದ್ದ 2021ರಲ್ಲಿ ಪ್ರಾಣ ಉಳಿಸಿಕೊಳ್ಳಲು ಜನರು ಹರಸಾಹಸ ಪಡುತ್ತಿದ್ದರೆ, 37,751 ಮಂದಿ ದಿನಗೂಲಿ ನೌಕರರು ಹಾಗೂ 11724 ಮಂದಿ ನಿರುದ್ಯೋಗಿಗಳು ಸಾವಿಗೆ ಶರಣಾಗಿರುವ ಕಳವಳಕಾರಿ ಸಂಗತಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ವರದಿಯಿಂದ ಬೆಳಕಿಗೆ ಬಂದಿದೆ.
2021ರಲ್ಲಿ ದೇಶದಲ್ಲಿ 1,64,033 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪೈಕಿ ದಿನಗೂಲಿ ನೌಕರರ ಸಂಖ್ಯೆ (37,751) ಅತಿ ಹೆಚ್ಚಿದ್ದರೆ, 18,803 ಸಾವಿನೊಂದಿಗೆ ಸ್ವಯಂ ಉದ್ಯೋಗಿಗಳು 2ನೇ ಸ್ಥಾನದಲ್ಲಿದ್ದಾರೆ. ನಿರುದ್ಯೋಗಿಗಳು (11,724) ಮೂರನೇ ಸ್ಥಾನದಲ್ಲಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ವರದಿ ತಿಳಿಸಿದೆ.1.64 ಲಕ್ಷ ಆತ್ಮಹತ್ಯೆಗಳಲ್ಲಿ ಸ್ತ್ರೀಯರ ಸಂಖ್ಯೆ 45026 ಇದೆ. 1898 ಸರ್ಕಾರಿ ನೌಕರರು, 11431 ಖಾಸಗಿ ಉದ್ಯೋಗಿಗಳು, 2541 ಸರ್ಕಾರಿ ಸ್ವಾಮ್ಯದ ಕಂಪನಿಗಳ ಸಿಬ್ಬಂದಿ ಸಾವಿಗೆ ಶರಣಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಂಡವರಲ್ಲಿ ಶೇ.64.02 (1,05,242) ಮಂದಿಯ ಆದಾಯ 1 ಲಕ್ಷಕ್ಕಿಂತ ಕಡಿಮೆ ಇದೆ. ಶೇ.31.6 (51812) ಜನರ ಆದಾಯ 1ರಿಂದ 5 ಲಕ್ಷದೊಳಗಿದೆ ಎಂದು ವರದಿ ವಿವರಿಸಿದೆ.
ಮಹಿಳೆಯರಲ್ಲಿ ಅರ್ಧಕ್ಕಿಂತ ಹೆಚ್ಚು ಗೃಹಿಣಿಯರು
2021ನೇ ಸಾಲಿನಲ್ಲಿ ದೇಶದಲ್ಲಿ ಒಟ್ಟಾರೆ 45,026 ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರಲ್ಲಿ ಅವರಲ್ಲಿ ಅರ್ಧಕ್ಕಿಂತ ಹೆಚ್ಚು ಗೃಹಿಣಿಯರಾಗಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ (ಎನ್‌ಸಿಆರ್‌ಬಿ) ಇತ್ತೀಚಿನ ವರದಿ ತಿಳಿಸಿದೆ. ವರದಕ್ಷಿಣೆ ಕಿರುಕುಳ ಹಾಗೂ ಬಂಜೆತನ ಮಹಿಳೆಯರ ಆತ್ಮಹತ್ಯೆಗೆ ಪ್ರಮುಖ ಕಾರಣ ಎಂದು ವರದಿ ತಿಳಿಸಿದೆ. ವರದಿಯ ಪ್ರಕಾರ ದೇಶದಲ್ಲಿ 2021ರಲ್ಲಿ 1,64,033 ಜನರು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರಲ್ಲಿ 1,18,979 ಜನರು ಪುರುಷರು, 45,026 ಮಹಿಳೆಯರು. ಮಹಿಳೆಯರ ಪೈಕಿ 23,178 ಗೃಹಿಣಿಯರಾಗಿದ್ದಾರೆ. ಇದಲ್ಲದೇ 5,693 ವಿದ್ಯಾರ್ಥಿನಿಯರು ಹಾಗೂ 4,246 ದಿನಗೂಲಿ ಕಾರ್ಮಿಕ ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮಹಿಳೆಯರ ಆತ್ಮಹತ್ಯೆ ಪಟ್ಟಿಯಲ್ಲಿ ತಮಿಳುನಾಡು (3,221), ಮಧ್ಯಪ್ರದೇಶ (3,055), ಮಹಾರಾಷ್ಟ್ರ (2,861) ಮೊದಲ ಮೂರು ಸ್ಥಾನದಲ್ಲಿವೆ.
ರೈತರ ಆತ್ಮಹತ್ಯೆಯಲ್ಲಿ ರಾಜ್ಯಕ್ಕೆ 2ನೇ ಸ್ಥಾನ
ದೇಶಾದ್ಯಂತ 2021ನೇ ಸಾಲಿನಲ್ಲಿ 10881 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪೈಕಿ ಅತಿ ಹೆಚ್ಚು ಮಂದಿ ಮಹಾರಾಷ್ಟ್ರದವರಾಗಿದ್ದರೆ, 2ನೇ ಅತಿ ಹೆಚ್ಚು ಮಂದಿ ಕರ್ನಾಟಕದ ರೈತರಾಗಿದ್ದಾರೆ ಎಂಬ ಕಳವಳಕಾರಿ ಸಂಗತಿ ಬಹಿರಂಗವಾಗಿದೆ. ಗಮನಾರ್ಹ ಎಂದರೆ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಒಡಿಶಾದಂತಹ ರಾಜ್ಯಗಳಲ್ಲಿ ರೈತರ ಶೂನ್ಯ ಆತ್ಮಹತ್ಯೆ ವರದಿಯಾಗಿದೆ. ಮರಣವನ್ನಪ್ಪಿದ ಅನ್ನದಾತರ ಪೈಕಿ 5318 ಮಂದಿ ಕೃಷಿಕರಾಗಿದ್ದರೆ, 5563 ಮಂದಿ ಕೃಷಿ ಕಾರ್ಮಿಕರಾಗಿದ್ದಾರೆ. ಇದರರ್ಥ ಭೂಮಾಲೀಕರಿಗಿಂತ ಕೃಷಿ ಕಾರ್ಮಿಕರೇ ಹೆಚ್ಚು ಸಾವಿಗೀಡಾಗಿದ್ದಾರೆ. ದೇಶದಲ್ಲಿ 2021ನಲ್ಲಿ 1,64,033 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅದರಲ್ಲಿ ಕೃಷಿಕರ ಪ್ರಮಾಣ ಶೇ.6.6ರಷ್ಟಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಬಿಡುಗಡೆ ಮಾಡಿರುವ ದಾಖಲೆ ಹೇಳುತ್ತದೆ.
ಸಾವಿಗೆ ಶರಣಾದ ಒಟ್ಟು ಕೃಷಿಕರ ಪೈಕಿ ಶೇ.37.3ರಷ್ಟು ಮಂದಿ ಮಹಾರಾಷ್ಟ್ರದವರು. ಶೇ.19.9 ಮಂದಿ ಕರ್ನಾಟಕದವರು. ನಂತರದ ಸ್ಥಾನದಲ್ಲಿ ಆಂಧ್ರಪ್ರದೇಶ (ಶೇ.9.8), ಮಧ್ಯಪ್ರದೇಶ (ಶೇ.6.2) ಹಾಗೂ ತಮಿಳುನಾಡು (ಶೇ.5.5) ಇವೆ. ಆತ್ಮಹತ್ಯೆ ಮಾಡಿಕೊಂಡ 5318 ಕೃಷಿಕರ ಪೈಕಿ 5107 ಮಂದಿ ಪುರುಷರು ಹಾಗೂ 211 ಮಂದಿ ಮಹಿಳೆಯರು. 5563 ಕೃಷಿ ಕಾರ್ಮಿಕರ ಪೈಕಿ 5121 ಪುರುಷರು ಹಾಗೂ 442 ಮಹಿಳೆಯರಿದ್ದಾರೆ ಎಂದು ವರದಿ ವಿವರಿಸಿದೆ.