* ದಂಪತಿಯಿಂದ ಒಂದೇ ವರ್ಷದಲ್ಲಿ 20 ಕೋಟಿ ಸುಲಿಗೆ* ದಂಪತಿ ಹನಿ ಟ್ರ್ಯಾಪ್‌ ಬಲೆಗೆ 300 ಮಂದಿ

ಗಾಜಿಯಾಬಾದ್‌(ಅ.25): ಹುಡುಗಿಯರನ್ನು ಬಿಟ್ಟು ಉದ್ಯಮಿಗಳು ಮತ್ತು ಶ್ರೀಮಂತರನ್ನು ಹನಿಟ್ರ್ಯಾಪ್‌(Honey Trap) ಜಾಲಕ್ಕೆ ಬೀಳಿಸಿ ಸುಲಿಗೆ ಮಾಡುತ್ತಿದ್ದ ದಂಪತಿಯನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.

ಗಾಜಿಯಾಬಾದ್‌(Ghaziabad) ಮೂಲದ ಯೋಗೇಶ್‌ ಮತ್ತು ಸಪ್ನಾ ಗೌತಮ್‌ ದಂಪತಿ ಈ ಮಾಂಸ ದಂಧೆಯ ಪ್ರಮುಖ ಆರೋಪಿಗಳಾಗಿದ್ದು, ಇವರು ಸುಮಾರು 30 ಮಹಿಳೆಯರನ್ನಿಟ್ಟುಕೊಂಡು ಈ ದಂಧೆ ನಡೆಸುತ್ತಿದ್ದುದು ತಿಳಿದುಬಂದಿದೆ. ಈ ದಂಪತಿ ದೇಶಾದ್ಯಂತ ಸುಮಾರು 300 ಮಂದಿಗೆ ಹನಿಟ್ರ್ಯಾಪ್‌(Honey Trap) ಮಾಡಿದ್ದು, ಒಂದೇ ವರ್ಷದಲ್ಲಿ 20 ಕೋಟಿಗೂ ಅಧಿಕ ಹಣ ಸುಲಿಗೆ ಮಾಡಿದ್ದಾರೆ.

ಯೋಗೇಶ್‌ ಶ್ರೀಮಂತರು, ಉದ್ಯಮಿಗಳನ್ನು ಟಾರ್ಗೆಟ್‌ ಮಾಡಿ ಮೊದಲು ಅವರ ಬ್ಯಾಂಕ್‌ ವಹಿವಾಟಿನ ಜತೆಗೆ ಫೋನ್‌ ನಂಬರ್‌ ಸಹಿತ ವಿವರ ತಿಳಿದುಕೊಳ್ಳುತ್ತಿದ್ದ. ನಂತರ ಯೋಗೇಶ್‌ ಪತ್ನಿ ಸಪ್ನಾ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ತೆಗೆದು, ಅವರೊಂದಿಗೆ ಚಾಟ್‌ ಮಾಡಲು ಶುರು ಮಾಡುತ್ತಿದ್ದಳು. ಅಲ್ಲದೇ ಈ ಕೆಲಸಕ್ಕೆ ಕೆಲ ಮಹಿಳೆಯರನ್ನೂ ನೇಮಿಸಿದ್ದಳು ಎಂಬುದು ತನಿಖೆ ವೇಳೆ ತಿಳಿದು ಬಂದಿದೆ.

ಇನ್ನು ವೆಬ್‌ಸೈಟ್‌(Website) ಒಂದರಲ್ಲಿ ‘ಸೆಕ್ಸ್‌ ಚಾಟ್‌’ ನಡೆಸಿ ಅದರ ಮೂಲಕವೂ ಕಮೀಷನ್‌ ಪಡೆಯುತ್ತಿದ್ದರು ಎಂಬ ವಿಷಯ ತನಿಖೆಯಲ್ಲಿ ಬಯಲಾಗಿದೆ.

ವಂಚನೆ ಹೇಗೆ?:

ಉದ್ಯಮಿಗಳಿಗೆ ವಾಟ್ಸಾಪ್‌ ಆ್ಯಪ್‌ ಕಾಲ ಮಾಡಿ ಅಶ್ಲೀಲವಾಗಿ ವರ್ತಿಸಿ, ಅಲ್ಲದೇ ಭೇಟಿ ವೇಳೆಯ ಖಾಸಗಿ ಕ್ಷಣಗಳನ್ನು ಸೆರೆಹಿಡಿದು, ಅವುಗಳನ್ನು ವಾಟ್ಸಾಪ್‌ ಮೂಲಕ ಮೊಬೈಲ್‌ಗೆ ಕಳುಹಿಸಿ ಬ್ಲಾಕ್‌ಮೇಲ್‌ ಮಾಡಿ ಈ ದಂಪತಿ ಹಣ ವಸೂಲಿ ಮಾಡುತ್ತಿದ್ದರು.

ಕಳೆದ ಅಕ್ಟೋಬರ್‌ನಲ್ಲಿ ಗುಜರಾತ್‌ನ ರಾಜಕೋಟ್‌ನಲ್ಲಿ ತಮ್ಮ ಕಂಪನಿಯ ಖಾತೆಯಿಂದ ಇವರ ಬ್ಯಾಂಕ್‌ ಖಾತೆಗೆ 80 ಲಕ್ಷ ವರ್ಗಾವಣೆಯಾಗಿದೆ, ನಮ್ಮ ಉದ್ಯೋಗಿಯೊಬ್ಬರು ಈ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಚಾರ್ಟೆಡ್‌ ಅಕೌಂಟೆಂಟ್‌ ಒಬ್ಬರು ದೂರು ನೀಡಿದ್ದರು. ತನಿಖೆ ಕೈಗೊತ್ತಿಕೊಂಡ ಪೊಲೀಸರಿಗೆ ಉದ್ಯೋಗಿ ಹನಿಟ್ರ್ಯಾಪ್‌ಗೆ ಒಳಗಾಗಿ ಹಣ ವರ್ಗಾವಣೆ ಮಾಡಿದ್ದು ತಿಳಿದುಬಂದಿದೆ. ಬಳಿಕ ಈ ದಂಪತಿ ಖಾಕಿ ಬಲೆಗೆ ಬಿದ್ದಿದ್ದಾರೆ