Asianet Suvarna News Asianet Suvarna News

ಕೊಪ್ಪಳದಲ್ಲಿ ಭೀಕರ ರಸ್ತೆ ಅಪಘಾತ: ಬರ್ತಡೇ ಮುಗಿಸಿಕೊಂಡು ಹೊರಟಿದ್ದವರು ಮಸಣದ ಪಾಲು

ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪೂರದ ಬಳಿ ರಾತ್ರಿ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲಿಯೇ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದು, 4 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. 

horrible road accident near koppal five people dead gvd
Author
Bangalore, First Published Jul 24, 2022, 8:20 AM IST

ಕೊಪ್ಪಳ (ಜು.24): ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪೂರದ ಬಳಿ ರಾತ್ರಿ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲಿಯೇ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದು, 4 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ದೇವಪ್ಪ ಕೊಪ್ಪದ (62), ಮೃತರ ಸೊಸೆ ಗಿರಿಜಮ್ಮ(45), ಅಣ್ಣನ ಮಕ್ಕಳಾದ ಶಾಂತಮ್ಮ (35), ಪಾರ್ವತಮ್ಮ (32), ಸಂಬಂಧಿ ಕಸ್ತೂರಮ್ಮ (20) ಸ್ಥಳದಲ್ಲೆ ಸಾವನಪ್ಪಿದ್ದು, ಚಾಲಕ ಹರ್ಷವರ್ಧನ, ಮಕ್ಕಳಾದ ಬಸವರಾಜ, ಪುಟ್ಟರಾಜ, ಭೂಮಿಕಾ ಎನ್ನುವರಿಗೆ ಗಾಯವಾಗಿದೆ. 

ಇವರೆಲ್ಲಾ ಕೊಪ್ಪಳದಲ್ಲಿ ಬರ್ತಡೇ ಮುಗಿಸಿಕೊಂಡು ಊರಿಗೆ ಹೊರಟಿದ್ದರು. ಮಾರ್ಗ ಮಧ್ಯೆ ಅಪರಿಚಿತ ವಾಹನ ಡಿಕ್ಕಿಯಾಗಿದ್ದು, ಅದರ ರಭಸಕ್ಕೆ ಸ್ಕಾರ್ಪಿಯೋ ಕಾರು ನುಜ್ಜು ನುಜ್ಜಾಗಿದೆ. ಘಟನಾ ಸ್ಥಳಕ್ಕೆ ಎಸ್ಪಿ ಅರುಣಾಂಗ್ಷು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮಾತ್ರವಲ್ಲದೇ ಸ್ಕಾರ್ಪಿಯೋದಲ್ಲಿರುವ ಶವಗಳನ್ನು ಹೊರಗಡೆ ತೆಗೆಯಲು ಬರದ ಪರಿಸ್ಥಿತಿಯಲ್ಲಿದ್ದರೂ ಕಷ್ಟಪಟ್ಟು ಶವಗಳನ್ನು ಸ್ಥಳೀಯರು, ಸಂಬಂಧಿಗಳು ಹಾಗೂ ಪೊಲೀಸರು ಹೊರತೆಗೆದಿದ್ದಾರೆ. ಇನ್ನು ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಅಪರಿಚಿತ ವಾಹನಕ್ಕಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಅಪಘಾತದಲ್ಲಿ ಜಜ್ಜಿ ಹೋಗಿದ್ದ ವ್ಯಕ್ತಿಯ ಮುಖ ಜೋಡಿಸಿ ಪ್ರಕರಣ ಭೇದಿಸಿದ ಪೊಲೀಸರು!

ಪಾನಮತ್ತನಾಗಿ ಅಡ್ಡಾದಿಡ್ಡಿ ಟಿಟಿ ಚಲಾಯಿಸಿದ ಚಾಲಕ: ಪಾನಮತ್ತ ಚಾಲಕ ವಾಹನವನ್ನು (ಟಿಟಿ) ಅಡ್ಡಾದಿಡ್ಡಿ ಚಲಾಯಿಸಿ ಸರಣಿ ಅಪಘಾತ ಎಸಗಿದ್ದು, ಎರಡು ಕಾರು ಹಾಗೂ ಒಂದು ಆಟೋ ಹಾನಿಯಾಗಿರುವ ಘಟನೆ ಯಶವಂತಪುರ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನೆಲಮಂಗಲ ಮೂಲದ ಶರತ್‌ (28) ಪಾನಮತ್ತ ಚಾಲಕ. 

ಶುಕ್ರವಾರ ರಾತ್ರಿ 8.30ರ ಸುಮಾರಿಗೆ ಮತ್ತಿಕೆರೆಯ ಬಾಂಬೆ ಡೈಯಿಂಗ್‌ ರಸ್ತೆಯಲ್ಲಿ ಪಾನಮತ್ತನಾಗಿ ಟಿಟಿ ವಾಹನ ಚಾಲನೆ ಮಾಡಿಕೊಂಡು ಬಂದಿದ್ದು, ಎರಡು ಕಾರು, ಆಟೋಗೆ ಡಿಕ್ಕಿ ಹೊಡೆದು ಹಾನಿಗೊಳಿಸಿದ್ದಾನೆ. ಈ ವೇಳೆ ರೊಚ್ಚಿಗೆದ್ದ ಸ್ಥಳೀಯರು ಚಾಲಕ ಶರತ್‌ನನ್ನು ಹಿಡಿದು ಧರ್ಮದೇಟು ಕೊಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ. ಚಾಲಕ ಶರತ್‌ ಮದ್ಯದ ಅಮಲಿನಲ್ಲಿ ಅಡ್ಡಾದಿಡ್ಡಿ ವಾಹನ ಚಲಾಯಿಸಿ ಕೆಲ ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಅದೃಷ್ಟವಶಾತ್‌ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆ ಸಂಬಂಧ ಆತನ ವಿರುದ್ಧ ‘ಡ್ರಿಂಕ್‌ ಆ್ಯಂಡ್‌ ಡ್ರೈವ್‌’ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾವಿನಲ್ಲೂ ಸಾರ್ಥಕತೆ ಮೆರೆದ ಕಾಡಂಚಿನ ಗ್ರಾಮದ ಯುವಕ: ನಾಲ್ವರ ಜೀವ ಉಳಿಸಿದ

ಜಕ್ಕೂರು ಫ್ಲೈ ಓವರ್‌ನಲ್ಲಿ ಸರಣಿ ಅಪಘಾತ: ಬೆಂಗಳೂರು-ಬಳ್ಳಾರಿ ಹೆದ್ದಾರಿಯ ಜಕ್ಕೂರು ಫ್ಲೈ ಓವರ್‌ನಲ್ಲಿ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಕಾರು ಚಾಲಕ ಮೃತಪಟ್ಟು, ಆಟೋ ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಜಾಲಹಳ್ಳಿ ನಿವಾಸಿ ಸಂಜೀವ್‌ ಕುಮಾರ್‌(35) ಮೃತ ಕಾರು ಚಾಲಕ. ಆಟೋ ಚಾಲಕ ಯಾರಬ್‌ ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತ ಸಂಜೀವ್‌ ಕುಮಾರ್‌ ಶುಕ್ರವಾರ ರಾತ್ರಿ 9ರ ಸುಮಾರಿಗೆ ಬೆಂಗಳೂರು-ಬಳ್ಳಾರಿ ಹೆದ್ದಾರಿಯ ಜಕ್ಕೂರು ಫ್ಲೈ ಓವರ್‌ನಲ್ಲಿ ಕಾರಿನಲ್ಲಿ ಬರುತ್ತಿದ್ದರು. ಇದೇ ವೇಳೆ ಯಲಹಂಕ ಕಡೆಯಿಂದ ಬೆಂಗಳೂರು ಕಡೆಗೆ ಅತಿವೇಗವಾಗಿ ಬಂದು 108 ಆ್ಯಂಬುಲೆನ್ಸ್‌ ಚಾಲಕನ ನಿಯಂತ್ರಣ ತಪ್ಪಿ ಸಂಜೀವ್‌ ಕುಮಾರ್‌ ಕಾರಿಗೆ ಡಿಕ್ಕಿ ಹೊಡೆದಿದೆ. ಸಂಜೀವ್‌ ಕುಮಾರ್‌ ಕಾರು ಮುಂದೆ ಹೋಗುತ್ತಿದ್ದ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದಿದೆ. ಈ ಸರಣಿ ಅಪಘಾತದಲ್ಲಿ ಕಾರು ಚಾಲಕ ಸಂಜೀವ್‌ ಕುಮಾರ್‌ ಮತ್ತು ಆಟೋ ಚಾಲಕ ಯಾರಬ್‌ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಇಬ್ಬರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದರಿಂದ ಸಂಜೀವ್‌ ಕುಮಾರ್‌ ಚಿಕಿತ್ಸೆ ಫಲಿಸದೆ ಶುಕ್ರವಾರ ತಡರಾತ್ರಿ 12.50ರ ಸುಮಾರಿಗೆ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow Us:
Download App:
  • android
  • ios