ಗುರಾಯಿಸ್ತಿದ್ದವನನ್ನ ಪ್ರಶ್ನೆ ಮಾಡಿದ್ದಕ್ಕೆ ಚಾಕುವಿನಿಂದ ತಿವಿದ: ಕೋಮು ದ್ವೇಷಕ್ಕಾಗಿ ಕೊಲೆ ಯತ್ನ ಎಂದ SDPI
* ಗುರಾಯಿಸ್ತಿದ್ದವನನ್ನು ಪ್ರಶ್ನೆ ಮಾಡಿದ್ದಕ್ಕೆ ಚಾಕುವಿನಿಂದ ಇರಿದು ಪರಾರಿ,
* ಕೋಮು ದ್ವೇಷ ಹಿನ್ನೆಲೆ ಸಮೀವುಲ್ಲಾ ಕೊಲೆಗೆ ಯತ್ನ ಎಂದು SDPI ಜಿಲ್ಲಾಧ್ಯಕ್ಷ ಆರೋಪ.
* ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಆಲೂರು ಗ್ರಾಮದಲ್ಲಿ ನಡೆದ ಘಟನೆ
ಚಿತ್ರದುರ್ಗ, (ಜುಲೈ.03): ಸುಮ್ಮನೆ ತನ್ನ ಗುರಾಯಿಸ್ತಿದ್ದವನನ್ನು ಪ್ರಶ್ನೆ ಮಾಡಿದ್ದಕ್ಕೆ ಚಾಕು ಇರಿದು ಪರಾರಿಯಾಗಿರೋ ಘಟನೆ ಕೋಟೆನಾಡಿನಲ್ಲಿ ನಡೆದಿದೆ. ಗಾಯಗೊಂಡ ಯುವಕನ ಸ್ಥಿತಿ ಗಂಭೀರವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಕೋಮು ದ್ವೇಷ ಹಿನ್ನೆಲೆಯೇ ಈ ಘಟನೆ ನಡೆದಿರೋದು ಎಂದು SDPI ಕಾರ್ಯಕರ್ತರಿಂದ ಗಂಭೀರ ಆರೋಪ ಕೇಳಿ ಬಂದಿದೆ. ಈ ಕುರಿತು ಒಂದು ವರದಿ ಇಲ್ಲಿದೆ.
ನೂತನ್ ಗುರುಗುಟ್ಟಿ ಎನ್ನುವಾತ ಸಮೀವುಲ್ಲಾಗೆ ಚಾಕು ಹಿರಿದು ಪರಾರಿಯಾಗಿದ್ದಾನೆ. ಈ ನಿನ್ನೆ(ಶನಿವಾರ) ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಆಲೂರು ಗ್ರಾಮದಲ್ಲಿ ನಡೆದಿದೆ. ಸಮೀವುಲ್ಲಾನನ್ನು ಆರೋಪಿ ನೂತನ್ ಗುರುಗುಟ್ಟಿ ನೋಡಿ ಗುರಾಯಿಸುತ್ತಿದ್ದದ್ದನ್ನು ಕಂಡು ಯಾಕೆ ಎಂದು ಪ್ರಶ್ನೆ ಮಾಡಿದ್ದಕ್ಕೆ ಇಬ್ಬರ ನಡುವೆ ಗಲಾಟೆ ಶುರುವಾಗಿದೆ. ಆ ಸಂದರ್ಭದಲ್ಲಿ ನೂತನ್ ಎಂಬ ಯುವಕ ಸಮೀವುಲ್ಲಾ ಎಂಬಾತನಿಗೆ ಚಾಕುವಿನಿಂದ ಬಲವಾಗಿ ಇರಿದು ಪರಾರಿಯಾಗಿದ್ದಾನೆ.
Chitradurga ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿ ಕಿರಾತಕರು ಪರಾರಿ
ಇದ್ರಿಂದ ಆಕ್ರೋಶಗೊಂಡ ಸಂಬಂಧಿಕರು ಹಾಗೂ SDPI ಕಾರ್ಯಕರ್ತರು ಇದು ಬೇಕಂತಲೇ ಕೋಮು ದ್ವೇಷಕ್ಕೋಸ್ಕರ ಈ ರೀತಿ ಸಮೀವುಲ್ಲಾ ಮೇಲೆ ಕೊಲೆ ಪ್ರಯತ್ನ ಮಾಡಿದ್ದಾರೆ. ನೂತನ್ ಓರ್ವ ಭಜರಂಗದಳ ಕಾರ್ಯಕರ್ತ, ಈ ಹಿಂದೆ ಸುಖಾ ಸುಮ್ಮನೇ ಗಲಾಟೆ ಮಾಡಿಕೊಂಡಿದ್ದನು. ನೂತನ್ ಹಿಂದೆ ಹಿಂದೂ ಪರ ಸಂಘಟನೆಗಳು ಹಾಗೂ ಬಿಜೆಪಿ ಕೈವಾಡವಿದೆ. ಕೂಡಲೇ ಪೊಲೀಸ್ ಇಲಾಖೆ ಆರೋಪಿಯನ್ನು ಬಂಧಿಸಿ ಸಮೀವುಲ್ಲಾ ಕುಟುಂಬಕ್ಕೆ ರಕ್ಷಣೆ ಕೊಡಬೇಕಿದೆ ಎಂದು SDPI ಜಿಲ್ಲಾಧ್ಯಕ್ಷ ಹಾಗೂ ಗಾಯಾಳು ಸಹೋದರ ಆಗ್ರಹಿಸಿದ್ದಾರೆ.
ಇನ್ನೂ ಈ ಘಟನೆಗೆ ಸಂಬಂಧಿಸಿದಂತೆ ಎಸ್ಪಿ ಅವರಿಗೆ ವಿಚಾರಿಸಿದ್ರೆ, ನಿನ್ನೆ ಆಲೂರಿನಲ್ಲಿ ಸಮೀವುಲ್ಲಾ ಎಂಬಾತನ ಮೇಲೆ ನೂತನ್ ಎಂಬ ಯುವಕನಿಂದ ಚಾಕು ಇರಿತವಾಗಿದ್ದು, ಕೊಲೆ ಆರೋಪದಡಿ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಸಮೀವುಲ್ಲಾ ಅವರಿಗೆ ಚಾಕು ಇರಿತದಿಂದ ಗಾಯಗಳಾಗಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸದ್ಯ ಅವರ ಜೀವಕ್ಕೆ ಯಾವುದೇ ರೀತಿಯ ಅಪಾಯ ಇರುವುದಿಲ್ಲ. ಈಗಾಗಲೇ ನಮ್ಮ ಪೊಲೀಸರು ನಿನ್ನೆ ಸಂಜೆಯೇ ದಾವಣಗೆರೆಯ ಹೆಬ್ಬಾಳ ಟೋಲ್ ಗೇಟ್ ಬಳಿ ಆರೋಪಿ ನೂತನ್ ನನ್ನು ಬಂಧಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಆರೋಪಿಯ ವಿಚಾರಣೆ ನಡೆಯುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಇವರ ಮಧ್ಯ ಯಾವುದೇ ದ್ವೇಷ ಇರಲಿಲ್ಲ. ಆದ್ರೆ ಸಡನ್ ಆಗಿ ಆಗಿರುವ ಕೋಪದಿಂದ ಈ ಘಟನೆ ನಡೆದಿದೆ ಎಂದರು.
ಒಟ್ಟಾರೆಯಾಗಿ ಮೊನ್ನೆ ತಾನೇ ರಾಜಸ್ಥಾನದ ಉದಯಪುರದಲ್ಲಿ ಹಿಂದೂ ಯುವಕನೋರ್ವನನ್ನು ಮುಸ್ಲಿಂರು ಕೊಲೆಗೈದಿರೋ ಘಟನೆ ಮಾಸುವ ಮುನ್ನವೇ, ಹಿರಿಯೂರು ತಾಲ್ಲೂಕಿನಲ್ಲಿ ಹಿಂದೂ ಯುವಕ ಹಾಗೂ ಮುಸ್ಲಿಂ ಯುವಕರ ನಡುವೆ ನಡೆದಿರೋ ಘಟನೆ ಜಿಲ್ಲೆಯಲ್ಲಿ ಹೆಚ್ಚು ಸದ್ದು ಮಾಡ್ತಿದೆ. ಆದ್ದರಿಂದ ಕೂಡಲೇ ಪೊಲೀಸರು ಈ ಪ್ರಕರಣಕ್ಕೆ ನಾಂದಿ ಹಾಡಬೇಕಿದೆ.