ಬೆಂಗ​ಳೂರು(ಅ.13): ಡ್ರಗ್ಸ್‌ ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ನಟಿ ಸಂಜನಾ ಗಲ್ರಾನಿ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಸಿಸಿಬಿ ಮತ್ತು ಕಾಟನ್‌ ಪೇಟೆ ಠಾಣಾ ಪೊಲೀಸರಿಗೆ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.

ಸಂಜನಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ್‌ ಹರೀಶ್‌ ಕುಮಾರ್‌, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸಿಸಿಬಿ ಪೊಲೀಸರು ಮತ್ತು ಕಾಟನ್‌ ಪೇಟೆ ಠಾಣಾ ಪೊಲೀಸರಿಗೆ ಸೂಚಿಸಿ ವಿಚಾರಣೆಯನ್ನು ಅ.20ಕ್ಕೆ ಮುಂದೂಡಿದರು.

ಮೋಜು, ಮಸ್ತಿ, ಪಾರ್ಟಿಯಿಲ್ಲ; ಜೈಲಿನಲ್ಲೇ ಸಂಜನಾ ಸಿಂಪಲ್ ಬರ್ತಡೇ

ಪ್ರಕರಣ ಸಂಬಂಧ ತಮ್ಮ ವಿರುದ್ಧ ಮಾಡಲಾಗಿರುವ ಯಾವುದೇ ಆರೋಪಕ್ಕೆ ಸಾಕ್ಷ್ಯಧಾರ ಹಾಗೂ ದಾಖಲೆ ಇಲ್ಲ. ದೂರುದಾರ ಸಲ್ಲಿಸಿರುವ ಸ್ವಯಂಪ್ರೇರಿತ ವರದಿಯಲ್ಲಿ ತಮ್ಮ ಹೆಸರು ಇಲ್ಲ. ಪೊಲೀಸರ ವಿಚಾರಣೆಯಲ್ಲಿ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ತಪಾಸಣೆ ವೇಳೆ ತಮ್ಮ ಮನೆಯಲ್ಲಿ ಯಾವುದೇ ಮಾದಕ ಪದಾರ್ಥಗಳು ಸಿಕ್ಕಿಲ್ಲ. ವಶಪಡಿಸಿ ಕೊಳ್ಳಲಾದ ವಸ್ತುಗಳಿಂದ ಡ್ರಗ್ಸ್‌ ಮಾರಾಟ ಜಾಲದಲ್ಲಿ ಭಾಗಿಯಾಗಿರುವ ಅಥವಾ ಡ್ರಗ್ಸ್‌ ಸೇವಿಸಿದ ಬಗ್ಗೆ ಯಾವುದೇ ಪುರಾವೆಗಳು ಸಿಕ್ಕಿಲ್ಲ. ಆದರೂ ತಮ್ಮನ್ನು ಪೊಲೀಸರು ಬಂಧಿಸಿದ್ದು, ಜಾಮೀನು ನೀಡಬೇಕು ಎಂದು ಸಂಜನಾ ನ್ಯಾಯಾಲಯವನ್ನು ಕೋರಿದ್ದಾರೆ.