*   ಗೋಕುಲ ಪೊಲೀಸ್‌ ಠಾಣೆಯೆದುರು ನೂರಾರು ಜನ ಸೇರಿ ಪ್ರತಿಭಟನೆ*   ಪತ್ನಿ ಸಹನಾ ಅಪಹರಣ ಮಾಡಿದ್ದಾರೆಂದು ನಿಖಿಲ್‌ ದೂರು ಹಿನ್ನೆಲೆ*  ಖಡಕ್‌ ಎಚ್ಚರಿಕೆ ನೀಡಿದ ಪೊಲೀಸರು  

ಹುಬ್ಬಳ್ಳಿ(ಜೂ.26): ಪಾಲಿಕೆ ಸದಸ್ಯ ಚೇತನ ಹಿರೇಕೆರೂರ ವಿರುದ್ಧ ಕುಟುಂಬದ ಮಹಿಳೆ ಅಪಹರಣ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಗೋಕುಲ ಪೊಲೀಸರು ಅವರನ್ನು ಶನಿವಾರ ವಶಕ್ಕೆ ಪಡೆದು ವಿಚಾರಣೆ ನಡೆಸಿದರು.
ಈ ವೇಳೆ ಚೇತನ ಬಿಡುಗಡೆ ಮಾಡುವಂತೆ ನೂರಾರು ಬೆಂಬಲಿಗರು ಸೇರಿ ಪ್ರತಿಭಟಿಸಿದ್ದು, ಠಾಣೆಯೆದುರು ಹೈಡ್ರಾಮಾ ನಡೆಯಿತು.

ಚೇತನ ಹಾಗೂ ಅವರ ತಂದೆ-ತಾಯಿ ಸೇರಿ ತಮ್ಮ ಪತ್ನಿ ಸಹನಾ ಹಿರೇಕೆರೂರ ಅವರನ್ನು ಅಪಹರಣ ಮಾಡಿದ್ದಾರೆ ಎಂದು ಪತಿ ನಿಖಿಲ್‌ ದಾಂಡೇಲಿ ಎಂಬುವವರು ಇಲ್ಲಿನ ಗೋಕುಲ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗಾಗಿ ಇನ್‌ಸ್ಪೆಕ್ಟರ್‌ ಜೆ.ಎಂ. ಕಾಲಿಮಿರ್ಚಿ ಅವರು ಆರೋಪಿ ಚೇತನ ಹಿರೇಕೆರೂರ ಅವರನ್ನು ವಿಚಾರಣೆ ಮಾಡುತ್ತಿದ್ದರು. ಈ ವಿಚಾರ ತಿಳಿದ ಹೆಗ್ಗೇರಿ, ಮಾರುತಿನಗರ, ಹೊಸೂರು ನಿವಾಸಿಗಳು ಹಾಗೂ ಆಟೋ ಚಾಲಕರು ಸೇರಿ ನೂರಾರು ಜನರು ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ನೀರಾವರಿ ನಿಗಮದ ಅವ್ಯವಹಾರ ಸಿಬಿಐಗೆ ವಹಿಸಿ: ವೀರೇಶ ಸೊಬರದಮಠ

ಪಾಲಿಕೆ ಸದಸ್ಯ ಚೇತನ, ಸಾಕಷ್ಟುಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಬಡಾವಣೆಗಳಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಕೃತ್ಯಕ್ಕೆ ಕಡಿವಾಣ ಹಾಕಿ, ನೆಮ್ಮದಿ ನೆಲೆಸುವಂತೆ ಮಾಡಿದ್ದಾರೆ. ಇಂತಹವರು ತಮ್ಮ ಕುಟುಂಬದ ಯುವತಿ ಅಪಹರಣ ಮಾಡುತ್ತಾರೆ ಎಂದರೆ ಯಾರೂ ನಂಬುವುದಿಲ್ಲ. ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು ಎಂದರು.

‘ಚೇತನ ವಿರುದ್ಧ ಪ್ರಕರಣ ದಾಖಲಾಗಿದೆ. ಪತ್ನಿ ಅಪಹರಣವಾಗಿದೆ ಎಂದು ಸಹನಾ ಪತಿ ದೂರು ನೀಡಿದ್ದು, ಈ ಸಂಬಂಧ ಚೇತನ ಹೇಳಿಕೆ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂದು ಚೇತನ ಬೆಂಬಲಿಗರಿಗೆ ಇನ್‌ಸ್ಪೆಕ್ಟರ್‌ ಜೆ.ಎಂ. ಕಾಲಿಮಿರ್ಚಿ ಹೇಳಿದರು. ಆದರೆ ಇದನ್ನು ಒಪ್ಪದ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು. ‘ನಿಯಂತ್ರಣ ತಪ್ಪಿ ಮಾತನಾಡಿದರೆ ನಾವು ಸಹ ಪೊಲೀಸ್‌ ಏನು ಎಂಬುದನ್ನು ತೋರಿಸಬೇಕಾಗುತ್ತದೆ. ಸಮಾಧಾನದಿಂದ ನಿಮ್ಮ ಮಾತು ಆಲಿಸಿದ್ದೇನೆ. ಅದು ಬಿಟ್ಟು ನೀವು ಆಕ್ರೋಶ ವ್ಯಕ್ತಪಡಿಸಿದರೆ ನಾವು ಸಹ ನಮ್ಮ ಕೆಲಸ ಮಾಡುತ್ತೇವೆ’ ಎಂದು ಇನ್‌ಸ್ಪೆಕ್ಟರ್‌ ಖಡಕ್‌ ಎಚ್ಚರಿಕೆ ನೀಡಿದರು.

‘ಪೊಲೀಸರು ನನ್ನನ್ನು ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಯಾರೂ ಆವೇಷ ಪಡುವುದು ಬೇಡ. ಇದೇನು ಹೊಸದಲ್ಲ, ಹಿಂದೆ ಠಾಣೆಯಲ್ಲಿ ಐದಾರು ದಿನ ಇದ್ದು ಬಂದಿದ್ದೇನೆ’ ಎಂದು ಚೇತನ ಹಿರೇಕೆರೂರ ಬೆಂಬಲಿಗರಿಗೆ ಸಮಾಧಾನ ಪಡಿಸಿ ಠಾಣೆಯಿಂದ ಹೊರಗೆ ಕಳುಹಿಸಿದರು.