ಶಿಗ್ಗಾಂವಿ[ಜ.09]: ವಿವಾಹಿತ ಮಹಿಳೆಯ ಗುಪ್ತಾಂಗದ ಮೇಲೆ ಆ್ಯಸಿಡ್‌ ಎರಚಿ ಕೊಲೆ ಮಾಡಲು ಯತ್ನಿಸಿದ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಹುಣಸಿಕಟ್ಟಿ ಗ್ರಾಮದ ಹತ್ತಿರದ ಶಿದ್ದನಗುಡ್ಡದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಶಿಗ್ಗಾವಿ ಪಟ್ಟಣದ ಮಲ್ಲಿಕಾರ್ಜುನ ನಗರದ ನಿವಾಸಿ ಮಂಜುನಾಥ ಪರಸಪ್ಪ ಕಳಸದ ಎಂಬಾತನೇ ಆ್ಯಸಿಡ್‌ ದಾಳಿ ಮಾಡಿದ ಆರೋಪಿ. ದಾಳಿಯಿಂದ ತೀವ್ರ ಗಾಯಗೊಂಡ ರಾಜೀವ ನಗರದ ಮಹಿಳೆಗೆ ಬಂಕಾಪುರ ಸಮುದಾಯ ಆರೊಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಗಿದೆ.

ಸಿನಿಮಾ ನಿರ್ದೇಶಕನ ಜತೆ ಪರಾರಿಯಾದ ನಟಿ: ಅಜ್ಜಿ ಆತ್ಮಹತ್ಯೆ

ಮಹಿಳೆ ಮತ್ತು ಆರೋಪಿ ನಡುವೆ ಅನೈತಿಕ ಸಂಬಂಧ ಇತ್ತು ಎನ್ನಲಾಗಿದೆ. ಇದೇ ವಿಷಯವಾಗಿ ಇಬ್ಬರ ಮಧ್ಯೆ ಆಗಾಗ ಜಗಳವಾಗುತ್ತಿತ್ತು. ಮಂಗಳವಾರ ಮಹಿಳೆಯನ್ನು ಟಾಟಾ ಏಸ್‌ ವಾಹನದಲ್ಲಿ ಹುಣಸಿಕಟ್ಟಿಗ್ರಾಮದ ಶಿದ್ದನಗುಡ್ಡಕ್ಕೆ ಕರೆದುಕೊಂಡು ಬಂದಿದ್ದ ವೇಳೆ ಮತ್ತೆ ಜಗಳವಾಗಿದೆ.

ಆ ವೇಳೆ ಮಹಿಳೆಯ ಕಾಲು ಮತ್ತು ಗುಪ್ತಾಂಗದ ಮೇಲೆ ಮಂಜುನಾಥ ಆ್ಯಸಿಡ್‌ ಎರಚಿ ಕೊಲೆಗೆ ಯತ್ನಿಸಿದ ಎನ್ನಲಾಗಿದೆ. ಮಹಿಳೆಯ ಕಿರುಚಾಟ ಕೇಳಿದ ಗ್ರಾಮಸ್ಥರು ರಕ್ಷಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಂಕಾಪುರ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.