Breaking: ಪ್ರಜ್ವಲ್ ಗೆ ಬೇಲ್ ನಿರಾಕರಿಸಿ 6 ದಿನ ಎಸ್‌ಐಟಿ ಕಸ್ಟಡಿಗೆ ಆದೇಶಿಸಿದ ನ್ಯಾಯಾಲಯ
ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳದ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ನ್ಯಾಯಾಲಯ ಜಾಮೀನು ನಿರಾಕರಿಸಿದ್ದು, 6 ದಿನಗಳ ಕಾಲ ಎಸ್ ಐಟಿ ಕಸ್ಟಡಿಗೆ ನೀಡಿ ಆದೇಶಿಸಿದೆ.
ಬೆಂಗಳೂರು (ಮೇ.31): ವಿದೇಶದಿಂದ ಬಂದು ಮೇ.31ರ ಮಧ್ಯರಾತ್ರಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಎಸ್‌ಐಟಿಯಿಂದ ಬಂಧಿಸಲ್ಪಟ್ಟ ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳದ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ ಜಾಮೀನು ನಿರಾಕರಿಸಿದ್ದು, 6 ದಿನಗಳ ಕಾಲ ಎಸ್ ಐಟಿ ಕಸ್ಟಡಿಗೆ ನೀಡಿ ಆದೇಶಿಸಿದೆ. ಎಸ್‌ಐಟಿ ಕಸ್ಟಡಿಗೆ ನೀಡಿದರೆ ವಕೀಲರ ಭೇಟಿಗೆ ಅವಕಾಶ ನೀಡಬೇಕು. ಜೊತೆಗೆ ಮನೆ ಊಟ ನೀಡಲು ಅವಕಾಶ ನೀಡಬೇಕು ಎಂದು ಪ್ರಜ್ವಲ್ ಪರ ವಕೀಲರು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ 9.30 ರಿಂದ 11.30 ಒಳಗೆ ವಕೀಲರ ಭೇಟಿಗೆ ಅವಕಾಶ ನೀಡಿ ನ್ಯಾಯಾಲಯ ಆದೇಶಿಸಿದೆ. ಪ್ರಜ್ವಲ್ ರೇವಣ್ಣಗೆ ಮೆಡಿಕಲ್ ಪರೀಕ್ಷೆ ಗೆ ಸಹಕಾರ ನೀಡಬೇಕೆಂದು ಹೇಳಿದ್ರೆ, ಆರೋಪಿ ಪ್ರಜ್ವಲ್ ಗೆ ತನಿಖೆ ಹೆಸರಿನಲ್ಲಿ ಕಿರುಕುಳ ನೀಡಬಾರದು ಎಂದು ಕೋರ್ಟ್ ಹೇಳಿದೆ.
ಇದಕ್ಕೂ ಮುನ್ನ ಕೋರ್ಟ್ ಗೆ ಪ್ರಜ್ವಲ್ ರೇವಣ್ಣ ನನ್ನು ಎಸ್‌ಐಟಿ ಪೊಲೀಸರು ಹಾಜರುಪಡಿಸಿದರು. ಈ ವೇಳೆ ನ್ಯಾಯಾಧೀಶರ ಮುಂದೆ ಪ್ರಜ್ವಲ್ ಕೈ ಕಟ್ಟಿ ನಿಂತರು. ವಾದ-ಪ್ರತಿವಾದಕ್ಕೂ ಮುನ್ನ ಎಸ್ಐಟಿ ಎರಡು ವರದಿ ಸಲ್ಲಿಸಿತ್ತು. ಎಸ್ಐಟಿ ಕಸ್ಟಡಿಗೆ ನೀಡುವಂತೆ ರಿಮಾಂಡ್ ಅರ್ಜಿ ಸಲ್ಲಿಸಿತು.
ಕೋರ್ಟ್ ನಲ್ಲಿ ನ್ಯಾಯಾಧೀಶರ ಮುಂದೆ ಕೈ ಕಟ್ಟಿ ನಿಂತ ಪ್ರಜ್ವಲ್‌ಗೆ ಜಡ್ಡ್ ಪ್ರಶ್ನೆ ಕೇಳಿದರು.
ಜಡ್ಡ್: ನಿಮ್ಮ ಹೆಸರೇನು ?
ಪ್ರಜ್ವಲ್: ಪ್ರಜ್ವಲ್
ಜಡ್ಡ್: ನಿಮ್ಮನ್ನ ಎಲ್ಲಿ ಅರೆಸ್ಟ್ ಮಾಡಿದ್ರು?
ಪ್ರಜ್ವಲ್: ಕೆಂಪೇಗೌಡ ಏರ್ಪೋರ್ಟ್ ನಲ್ಲಿ ನಿನ್ನೆ ರಾತ್ರಿ 1 ಗಂಟೆಗೆ ಅರೆಸ್ಟ್ ಮಾಡಿದ್ರು
ಜಡ್ಡ್: ಅರೆಸ್ಟ್ ಮಾಡಿದ್ದನ್ನ ನಿಮ್ಮ ಸಂಬಂಧಿಕರಿಗೆ ಹೇಳಿದ್ದಾರಾ?
ಪ್ರಜ್ವಲ್: ತಂದೆಗೆ ಹೇಳಿದ್ದಾರೆ
ಜಡ್ಡ್:ಏನಾದರೂ ತೊಂದರೆ ಕೊಟ್ರಾ?
ಪ್ರಜ್ವಲ್: ಇಲ್ಲ, ಆದರೆ ಕೊಠಡಿ ಕ್ಲೀನ್ ಇಲ್ಲ. ಶೌಚಾಲಯ ವಾಸನೆ ಇದೆ.
ವಶಕ್ಕೆ ನೀಡುವಂತೆ ಎಸ್ಪಿಪಿ ಅಶೋಕ್ ನಾಯಕ್ ವಾದ ಮಂಡಿಸಿ, ಪ್ರಜ್ವಲ್ ಮೇಲೆ ಅತ್ಯಾಚಾರ ಆರೋಪ ಇದೆ ಎಂದು ಹೊಳೆನರಸೀಪುರದ ಕೇಸ್ ಉಲ್ಲೇಖಿಸಿದರು. ಸಂತ್ರಸ್ತೆ ಮನೆಯ ಕೆಲಸದಾಕೆ ಆದ್ರೂ ಇವರು ತುಂಬಾ ಡೆಂಜರ್ ಇದ್ದಾರೆ, ಹುಷಾರಾಗಿರು ಅಂತ ಮಹಿಳೆಗೆ ಹಲವು ಬಾರಿ ಎಚ್ಚರಿಸಿದ್ದಾರೆ. ಇಂತಹದ್ದನ್ನ ಮಾಡುವುದೇ ಇವನ ಹವ್ಯಾಸ. ಚುನಾವಣೆ ಯಲ್ಲಿ ಎರಡನೇ ಬಾರಿ ಸ್ಪರ್ಧಿಸಿದ್ದಾರೆ. 100ಕ್ಕೂ ಅಧಿಕ ಸಂತ್ರಸ್ತೆಯರು ಇದ್ದಾರೆ. ಮೀಡಿಯಾದಲ್ಲಿ ಸುದ್ದಿ ಆಗಬಾರದು ಎಂದು ಸ್ಟೇ ತಗೊಂಡಿದ್ದಾರೆ. ಈತ ಒಬ್ಬ ವಿಕೃತ ಕಾಮಿ. ಎಲ್ಲಾ ಮಹಿಳೆಯರ ಮುಖ ಇದೆ. ಸಂತ್ರಸ್ತೆ ಮಹಿಳೆ ಹೇಳಿಕೆ ಪ್ರಕಾರ ಇದು ಅತ್ಯಾಚಾರ. ತನ್ನದೇ ವಿಡಿಯೋವನ್ನ ಇವನೇ ಸೆರೆಹಿಡಿದಿದ್ದಾನೆ. ವಾಟ್ಸಪ್ ಕಾಲ್ ಮಾಡಿ ಬಟ್ಟೆ ಬಿಚ್ಚಲು ಹೇಳಿದ್ದಾನೆ ಎಂದರು. ಈ ವೇಳೆ ಜಡ್ಜ್ ನೀವು ಪೂರ್ಣ ಸ್ಟೋರಿ ಹೇಳಬೇಡಿ. ಕಸ್ಟಡಿಗೆ ಕಾರಣ ಮಾತ್ರ ಹೇಳಿ ಎಂದರು.
ಬಳಿಕ ಈತನನ್ನು ಸಂಪೂರ್ಣ ವಿಚಾರಣೆ ಮಾಡಬೇಕಿದೆ. ಹಲವು ಸಂತ್ರಸ್ತರು ಮುಂದೆ ಬರ್ತಿಲ್ಲ. ಇದರ ಹಿಂದೆ ದೊಡ್ಡ ಷಡ್ಯಂತ್ರ ಆಗಿದೆ. ಹಲವು ಮಹಿಳೆಯರ ಮನೆಯಲ್ಲಿ ಬೆಂಕಿಬಿದ್ದಿದೆ. ಅವರ ಮನೆಯಲ್ಲಿ ಅನುಮಾನ ಪಡ್ತಾ ಇದ್ದಾರೆ. ವಿಡಿಯೋ ವೈರಲ್ ಆದ ನಂತರ ಮಹಿಳೆಯರು ಸಂಕಷ್ಟ ದಲ್ಲಿ ಇದ್ದಾರೆ. ಹೀಗಾಗಿ ಪ್ರಜ್ವಲ್ ನನ್ನ ತನಿಖೆ ಮಾಡಬೇಕಿದೆ. ವಿಡಿಯೋ ಮಾಡಿದ್ದ ಮೊಬೈಲ್ ಪತ್ತೆ ಮಾಡಬೇಕಿದೆ. ಜೊತೆಗೆ ಹಲವು ಸಾಕ್ಷಿಗಳನ್ನ ಕಲೆಹಾಕಬೇಕಿದೆ. ಈತನ ಡ್ರೈವರ್ ನ ಮೊಬೈಲ್ ಮಾತ್ರ ರಿಕವರಿ ಮಾಡಲಾಗಿದೆ.ಪ್ರಜ್ವಲ್ ಮೊಬೈಲ್ ಗೆ ಪೇಸ್ ಲಾಕ್ ಇತ್ತು. ಚಾಲಕನ ಪೇಸ್ ಲಾಕ್ ಕೂಡ ಇತ್ತು. ಇದನ್ನೆಲ್ಳಾ ತನಿಖೆ ಮಾಡಬೇಕಿದೆ ಎಂದರು.
ಈತ ರಾಜತಾಂತ್ರಿಕ ಪಾಸ್‌ಪೋರ್ಟ್ ಬಳಕೆ ಮಾಡಿ ದೇಶ ಬಿಟ್ಟು ಹೋಗಿದ್ದ. ವಾಪಸ್ ಬರುವ ಉದ್ದೇಶ ಈತನದ್ದಾಗಿರಲಿಲ್ಲ. ಯಾಕೆ ವಿದೇಶಕ್ಕೆ ಹೋಗಿದ್ದ ಈವರೆಗೂ ಅವನು ಹೇಳಿಲ್ಲ. ಒಂದು ವಾರದಲ್ಲಿ ಬರ್ತಿನಿ ಅಂದವನು, ಅವನ ಹೇಳಿದ ಸಮಯಕ್ಕೆ ಬರಲೇ ಇಲ್ಲ. ಸಮಯ ಕೋರಿದ್ದಾಗ ಅವರ ವಕೀಲರು ಪ್ರವಾಸದಲ್ಲಿ ಇದ್ದರು ಅಂತ ಹೇಳಿದ್ದಾರೆ ಹೊರತು ವಿದೇಶಕ್ಕೆ ಹೋಗಿದ್ದನ್ನ ಹೇಳಿಲ್ಲ. ವಿದೇಶದಲ್ಲಿ ಅರೆಸ್ಟ್ ಆಗ್ತಿನಿ ಅಂತ ಈಗ ಬಂದಿದ್ದಾನೆ. ಸಂತ್ರಸ್ತೆಯರಿಗೆ ಕಿರುಕುಳ ನೀಡಲಾಗ್ತಿದೆ. ನಿನ್ನೆ ಹಾಸನದಲ್ಲಿ ದೊಡ್ಡ ಪ್ರತಿಭಟನೆ ನಡೆದಿದೆ. ಸಂತ್ರಸ್ತೆಯ ಮಗಳ ಸಾಕ್ಷಿಯನ್ನೂ ಪಡೆದುಕೊಳ್ಳಬೇಕಿದೆ ಎಂದು 14 ದಿನಗಳ ಕಾಲ ವಶಕ್ಕೆ ನೀಡುವಂತೆ ಎಸ್ಪಿಪಿ ಮನವಿ ಮಾಡಿದರು.
ಇನ್ನು ಕೋರ್ಟ್ ನಲ್ಲಿ ವಾದ ಮಂಡಿಸಿದ ಪ್ರಜ್ವಲ್ ಪರ ವಕೀಲ ಅರುಣ್, ಇದು ನಾಲ್ಕು ವರ್ಷಗಳ ಹಿಂದೆ ನಡೆದ ಘಟನೆ ಎಂದು ಹೇಳಲಾಗಿದೆ. ದೂರಿನ ಪ್ರಕಾರ ಅತ್ಯಾಚಾರ ಆರೋಪ ಇಲ್ಲ. ದೂರು ನೀಡಲು 4 ವರ್ಷ ತಡವಾಗಿದೆ. ಏ.28ಕ್ಕೆ ಎಫ್ಐಆರ್ ದಾಖಲಾಗಿದೆ. ಮೇ.5ವರೆಗೂ ಸೆ.164 ಅಡಿ ಹೇಳಿಕೆ ದಾಖಲಾಗಿಲ್ಲ. ಕೇವಲ ಸೆ.161 ರ ಹೇಳಿಕೆ ಪ್ರಕಾರ ಅತ್ಯಾಚಾರ ಕೇಸ್ ದಾಖಲಿಸಿದ್ದಾರೆ. ಜಾಮೀನು ನೀಡಬಹುದಾದ ಕೇಸಲ್ಲಿ ಅತ್ಯಾಚಾರ ಆರೋಪ ಮಾಡುತ್ತಿದ್ದಾರೆ. 41a ನೋಟಿಸ್ ಗೆ ಉತ್ತರ ನೀಡಿಲ್ಲ ಅಂತ ಅರೆಸ್ಟ್ ಮಾಡಿದ್ದಾರೆ. ಬೇರೆ ಕೇಸ್ ಉಲ್ಲೆಖಿಸಿ ಕಸ್ಟಡಿ ಪಡೆಯಬಾರದು. 14 ದಿನ ಕಸ್ಟಡಿಗೆ ಯಾಕೆ ಅಂತ ಗೊತ್ತಾಗ್ತಾ ಇಲ್ಲ. ಪ್ರಜ್ವಲ್ ತನಿಖೆಗೆ ಸಹಕರಿಸಲು ಸಿದ್ದರಿದ್ದಾರೆ. ಹೀಗಾಗಿ ಒಂದು ದಿನ ಮಾತ್ರ ಕಸ್ಟಡಿಗೆ ನೀಡಿ ಎಂದು ಮನವಿ ಮಾಡಿದರು.