ಹಾಸನದಲ್ಲಿ ಎರಡನೇ ಮದುವೆ ವಿಚಾರವಾಗಿ ಪ್ರಶ್ನಿಸಿದ್ದಕ್ಕೆ ಪತಿಯೇ ಪತ್ನಿಯನ್ನು ಕೊಂದು ನದಿಗೆ ಎಸೆದರೆ, ಮತ್ತೊಂದು ಪ್ರಕರಣದಲ್ಲಿ ಮರುಮದುವೆಗೆ ಒಪ್ಪದ ಪತ್ನಿಯನ್ನು ಪತಿ ಕತ್ತು ಹಿಸುಕಿ ಕೊಂದಿದ್ದಾನೆ. 

ಹಾಸನ: ಎರಡನೇ ಮದುವೆ ವಿಚಾರವಾಗಿ ಪ್ರಶ್ನೆ ಮಾಡಿದಕ್ಕೆ ಮೊದಲ ಪತ್ನಿ ರಾಧಾ (40) ಅವರನ್ನು ಪತಿ ಕುಮಾರ್ ಹತ್ಯೆ ಮಾಡಿ, ಶವವನ್ನು ಯಗಚಿ ನದಿಗೆ ಎಸೆದಿರುವ ಘಟನೆ ಜ.10 ರ ರಾತ್ರಿ ತಾಲೂಕಿನ ಯಡೂರು ಗ್ರಾಮದಲ್ಲಿ ನಡಿದಿರುವುದು ತಿಳಿದುಬಂದಿದೆ.

ಮೃತ ರಾಧಾ ಕಳೆದ ನಾಲ್ಕು ವರ್ಷಗಳಿಂದ ಪತಿಯಿಂದ ಬೇರ್ಪಟ್ಟು ವಾಸವಾಗಿದ್ದರು. ಈ ನಡುವೆ ಜನವರಿ ಮೊದಲ ವಾರದಲ್ಲಿ ಕುಮಾ‌ರ್ ಶಬರಿಮಲೆಗೆ ತೆರಳಿದ್ದು, ಇರುಮುಡಿ ಕಟ್ಟುವ ವೇಳೆ ಪತ್ನಿಯ ಸ್ಥಾನದಲ್ಲಿ ಮತ್ತೊಬ್ಬ ಮಹಿಳೆ ಪೂಜೆ ಸಲ್ಲಿಸಿರುವ ಮಾಹಿತಿ ರಾಧಾಗೆ ಲಭ್ಯವಾಗಿತ್ತು. ಈ ವಿಚಾರವನ್ನು ಪ್ರಶ್ನಿಸಲು ಶನಿವಾರ ರಾತ್ರಿ ರಾಧಾ ಯಡೂರಿಗೆ ಬಂದಿದ್ದಾಳೆ. ಇದೇ ವಿಚಾರವಾಗಿ ಗಲಾಟೆ ನಡೆದಿದ್ದು, ಅದೇ ರಾತ್ರಿ ರಾಧಾಳನ್ನು ಪತಿ ಕುಮಾರ್ ಹತ್ಯೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಬಳಿಕ ಹಾಸನ ತಾಲೂಕಿನ ಕಂದಲಿ ಸಮೀಪದ ಯಗಚಿ ನದಿಗೆ ಶವವನ್ನು ಬಿಸಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಯಗಚಿ ನದಿಯಲ್ಲಿ ಶವ ಪತ್ತೆ

ಘಟನೆಗೆ ಸಂಬಂಧಿಸಿದಂತೆ ಪತಿ ಕುಮಾರ್ ಹಾಗೂ ಆತನ ಮನೆಯವರು ಸೇರಿ ಹತ್ಯೆ ನಡೆಸಿದ್ದಾರೆ ಎಂದು ರಾಧಾ ಕುಟುಂಬದವರು ಆರೋಪಿಸಿದ್ದಾರೆ. ಪೊಲೀಸರು ಯಗಚಿ ನದಿಯಿಂದ ಶವ ಹೊರತೆಗೆದಿದ್ದಾರೆ. ಈ ಘಟನೆ ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮೃತಳ ಕುಟುಂಬದವರು ಆಗ್ರಹಿಸಿದ್ದಾರೆ.

ಹೆಂಡತಿ ಕತ್ತುಹಿಸುಕಿ ಕೊಲೆ

ಎರಡನೇ ಮದುವೆಗೆ ಪತ್ನಿ ಒಪ್ಪುತಿಲ್ಲ ಎಂದು ಹೆಂಡತಿಯ ಕತ್ತು ಹಿಸುಕಿ ಸಾಯಿಸಿರುವ ಪ್ರಕರಣ ಪಟ್ಟಣದ ಠಾಣೆಯಲ್ಲಿ ದಾಖಲಾಗಿದೆ. ಸಮೀಪದ ಬೊಮ್ಮನಕಟ್ಟೆಯ ಪಂಡರಹಳ್ಳಿ ಕ್ಯಾಂಪಿನ ನಿವಾಸಿ ಚಂದನಾಬಾಯಿ (23) ಮೃತ ದುರ್ದೈವಿ. ಪತಿ ಪಂಡರಹಳ್ಳಿಯ ಗೋಪಿ (28) ಅಕ್ರಮ ಸಂಬಂಧಗಳಿನಿಟ್ಟುಕೊಂಡಿರುವ ಬಗ್ಗೆ ದಂಪತಿಗಳ ನಡುವೆ ಹಾಗಾಗೇ ಜಗಳಗಳು ನಡೆಯುತ್ತಿದವು. ಅಲ್ಲದೆ ಗೋಪಿ ಕೆಲ ದಿನಗಳಿಂದ ಇನ್ನೊಂದು ಮದುವೆಯಾಗುವುದಾಗಿ ಹೇಳುತ್ತಿದ. ಎರಡನೇ ಮದುವೆಗೆ ಒಪ್ಪಿಗೆ ಸೂಚಿಸುವಂತೆ ಪದೇ ಪದೇ ಒತ್ತಾಯಿಸಿ ಪತ್ನಿ ಮೇಲೆ ಹಲ್ಲೆ ಮಾಡುತ್ತಿದ್ದ.

ಭಾನುವಾರ ಸಂಜೆ ಹೆಂಡತಿ ಚಂದನಬಾಯಿ ಜೊತೆ ಮಾತನಾಡಬೇಕೆಂದು ಮನೆಯಲ್ಲಿದ್ದವರನ್ನು ಹೊರಗೆ ಕಳಿಸಿ ಚಂದನಬಾಯಿಯೊಟ್ಟಿಗೆ ಜಗಳವಾಡಿದ್ದಾನೆ. ಚಂದನಾಳ ಕತ್ತು ಇಸುಕಿ ಕೋಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಆರೋಪಿ ಗೋಪಿ ಈ ಹಿಂದೆ ಪೋಕ್ಸೊ ಪ್ರಕರಣದಲ್ಲಿ ಜೈಲು ವಾಸ ಅನುಭವಿಸಿ ಬಂದಿದ್ದ. ಹೊಳೆಹೊನ್ನೂರು ಪೊಲೀಸರು ಗೋಪಿಯನ್ನು ಬಂಧಿಸಿದ್ದಾರೆ.