ಬೆಂಗಳೂರು [ಡಿ.01]:  ಹೆಣ್ಣು ಶಿಶು ಎಂಬ ಕಾರಣಕ್ಕೆ ಮನೆಯ ಕಿಟಿಕಿಯಿಂದ ಎಂಟು ದಿನಗಳ ಹಸುಳೆಯನ್ನು ಹೊರಗೆ ಎಸೆದು ಅಜ್ಜಿಯೇ ಭೀಕರವಾಗಿ ಕೊಂದಿರುವ ಪೈಶಾಚಿಕ ಘಟನೆ ಬೆಂಗಳೂರು ನಗರ ಹೊರವಲಯದ ಸೋಲದೇವನಹಳ್ಳಿ ಸಮೀಪ ಶುಕ್ರವಾರ ನಡೆದಿದೆ.

ಮೇದರಹಳ್ಳಿ ನಿವಾಸಿಗಳಾದ ಮಾರ್ಷಲ್‌ ಮತ್ತು ತಮಿಳುಸೆಲ್ವಿ ದಂಪತಿ ಮಗು ಹತ್ಯೆಗೀಡಾಗಿದ್ದು, ಘಟನೆ ಸಂಬಂಧ ಮೃತ ಮಗುವಿನ ಅಜ್ಜಿ ಪರಮೇಶ್ವರಿಯನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ತಮಿಳುನಾಡಿನ ತಿರುಚ್ಚಿ ಮೂಲದ ಮಾರ್ಷಲ್‌, ವರ್ಷದ ಹಿಂದೆ ತಮ್ಮೂರಿನ ತಮಿಳುಸೆಲ್ವಿ ಜತೆ ಪ್ರೇಮ ವಿವಾಹವಾಗಿದ್ದರು. ತಮಿಳುಸೆಲ್ವಿ, 8 ತಿಂಗಳಿಗೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಅವಧಿ ಪೂರ್ವ ಜನಿಸಿದ ಹಿನ್ನೆಲೆಯಲ್ಲಿ ಮಗುವಿಗೆ ಜಾಂಡೀಸ್‌ ಕಾಣಿಸಿಕೊಂಡಿತ್ತು. ಶುಕ್ರವಾರ ರಾತ್ರಿ 9ರ ಸುಮಾರಿಗೆ ಅತ್ತೆ (ಪರಮೇಶ್ವರಿ) ಬಳಿ ಮಗು ಬಿಟ್ಟು ಶೌಚಾಲಯಕ್ಕೆ ತೆರಳಿದ್ದರು. ಹತ್ತು ನಿಮಿಷಗಳ ಬಳಿಕ ಮಗು ಎತ್ತಿಕೊಳ್ಳಲು ತಾಯಿ ಬಂದಿದ್ದಾಳೆ. ಆದರೆ ಮಗು ಕಾಣಸಿಲ್ಲ, ಈ ಬಗ್ಗೆ ಅತ್ತೆಯನ್ನು ಪ್ರಶ್ನಿಸಿದ್ದಾರೆ. ಆಗ ತನಗೇನು ಗೊತ್ತಿಲ್ಲ ಎಂದು ಅತ್ತೆ ಉತ್ತರಿಸಿದ್ದಾಳೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ವಿಷಯ ತಿಳಿದ ಪತಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಖಾಲಿ ನಿವೇಶನದಲ್ಲಿ ಮಗು ಪತ್ತೆ ಆಗಿದೆ. ಹೆಣ್ಣು ಮಗು ಎಂಬ ದ್ವೇಷದಿಂದ ಅತ್ತೆ (ಪರಮೇಶ್ವರಿ) ಮಗುವನ್ನು ಕೊಂದಿದ್ದಾಳೆ ಎಂದು ಆರೋಪಿಸಿ ಸೋಲದೇವನಹಳ್ಳಿ ಪೊಲೀಸರಿಗೆ ತಮಿಳುಸೆಲ್ಪಿ ದೂರು ನೀಡಿದ್ದಾರೆ.