ಲಿಂಗಸುಗೂರು: ಮತ್ತೆ ಅಧಿಕಾರ ಹಿಡಿಯುವ ಯತ್ನ, ಲಾಡ್ಜ್‌ನಿಂದ ಗ್ರಾಪಂ ಮಾಜಿ ಅಧ್ಯಕ್ಷ ಕಿಡ್ನಾಪ್..!
* ಬಾಗಲಕೋಟೆ ಜಿಲ್ಲೆಯ ಬೀಳಗಿಯಲ್ಲಿ ನಡೆದ ಘಟನೆ
* ಸದಸ್ಯರೊಂದಿಗೆ ಪ್ರವಾಸಕ್ಕೆ ತೆರಳಿದ್ದಾಗ ಸಿನಿಮೀಯ ಘಟನೆ
* ಬಿಜೆಪಿಯ 7 ಮತ್ತು ಕಾಂಗ್ರೆಸ್‌ನ 3 ಸದಸ್ಯರೊಂದಿಗೆ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದ ಅಮರೇಶ
ಲಿಂಗಸುಗೂರು(ಜೂ.25): ಸದಸ್ಯರೊಂದಿಗೆ ಪ್ರವಾಸಕ್ಕೆ ತೆರಳಿ ಲಾಡ್ಜ್‌ನಲ್ಲಿ ತಂಗಿದ್ದ ರಾಯಚೂರು ಜಿಲ್ಲೆಯ ಮಾಜಿ ಗ್ರಾಮ ಪಂಚಾಯ್ತಿ ಸದಸ್ಯರೊಬ್ಬರನ್ನು ಸಿನಿಮೀಯ ರೀತಿಯಲ್ಲಿ ರಾತ್ರೋರಾತ್ರಿ ಅಪಹರಣ ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿಯಲ್ಲಿ ನಡೆದಿದೆ.
ಲಿಂಗಸಗೂರು ತಾಲೂಕಿನ ರೋಡಲಬಂಡಾ(ಯುಕೆಪಿ) ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಅಮರೇಶ ಸಂಗಪ್ಪ ಮೇಟಿ ಅಪಹರಣಕ್ಕೀಡಾದವರು. ಕಾಂಗ್ರೆಸ್ ಪಕ್ಷದಲ್ಲಿದ್ದ ಅಮರೇಶ ಮೇಟಿ ಇತ್ತೀಚೆಗಷ್ಟೇ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. 10 ಗ್ರಾ.ಪಂ. ಸದಸ್ಯರೊಂದಿಗೆ ಪ್ರವಾಸಕ್ಕೆ ಹೋಗಿದ್ದ ಅವರು ಲಾಡ್ಜ್‌ನಲ್ಲಿ ರಾತ್ರಿ ತಂಗಿದ್ದರು. ಈ ವಿಷಯ ತಿಳಿದ ಆರೋಪಿಗಳು ಲಾಡ್ಜ್‌ನ ಕೊಠಡಿಗೆ ತೆರಳಿ ಅಮರೇಶನನ್ನು ಸುತ್ತುವರಿದು ಅಲ್ಲಿಂದ ಅಪಹರಿಸಿಕೊಂಡು ತೆರಳಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅಮರೇಶ ಮೇಟಿ ಮತ್ತೆ ಅಧ್ಯಕ್ಷ ಸ್ಥಾನ ಹಿಡಿವ ಪ್ರಯತ್ನದಲ್ಲಿ ಬಿಜೆಪಿಯ 7 ಮತ್ತು ಕಾಂಗ್ರೆಸ್‌ನ ಮೂವರು ಸದಸ್ಯರೊಂದಿಗೆ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದರು ಎನ್ನಲಾಗಿದೆ.
ಬಾಲಕನ ಅಪಹರಿಸಿ 50 ಲಕ್ಷಕ್ಕೆ ಡಿಮ್ಯಾಂಡ್: ಸಿನಿಮೀಯ ರೀತಿಯಲ್ಲಿ ಬಾಲಕನ ರಕ್ಷಿಸಿದ ಪೊಲೀಸರು!
ಬಾಗಲಕೋಟೆ ಜಿಲ್ಲೆಯ ಬೀಳಗಿಯ ಲಾಡ್ಜ್‌ನಲ್ಲಿ ಮಾಜಿ ಅಧ್ಯಕ್ಷ ಅಮರೇಶ ಮೇಟಿ ತಂಗಿರುವ ಮಾಹಿತಿ ಅರಿತು ಜೂ.21ರ ರಾತ್ರಿ ಅಪಹರಿಸಲಾಗಿದೆ. ಅಧ್ಯಕ್ಷರ ಅಪಹರಣದ ವಿಡಿಯೋಗಳ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರಿಂದ ಅವರ ಸಂಬಂಧಿ ನಿಂಗಪ್ಪ ಮೇಟಿ ಅವರು ಅಮರೇಶ ಮೇಟಿಯವರನ್ನು 10 ಜನರ ತಂಡ ಅಪಹರಿಸಿದ್ದಾರೆ ಎಂದು ಬೀಳಗಿ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಒಟ್ಟು ಸದಸ್ಯ ಬಲದ ರೋಡಲಬಂಡಾ ಗ್ರಾಪಂನಲ್ಲಿ ಕಾಂಗ್ರೆಸ್ 10 ಮತ್ತು ಬಿಜೆಪಿ 7 ಸದಸ್ಯರನ್ನು ಹೊಂದಿದೆ. ಈ ಹಿಂದೆ ಕಾಂಗ್ರೆಸ್‌ನಿಂದ ಅಧ್ಯಕ್ಷರಾಗಿದ್ದ ಅಮರೇಶ ಮೇಟಿಗೆ 6 ತಿಂಗಳ ಬಳಿಕ ಅಧ್ಯಕ್ಷಸ್ಥಾನ ಬೇರೆಯವರಿಗೆ ಬಿಟ್ಟುಕೊಡುವಂತೆ ಒಪ್ಪಂದವಾಗಿತ್ತು.