ಅಬ್ಬಾ ಇವಳೆಂತಾ ಪಾಕಡಾ ಹುಡುಗಿ, ಬಾಯ್‌ಫ್ರೆಂಡ್‌ಗೆ ವಿಷ ಹಾಕಿ ಕೊಲೆಮಾಡಿ ಮಳ್ಳಿ ತರ ಇದ್ದವಳ ಬಂಧನ
Crime News Today: ಕೇರಳದ ತಿರುವನಂತಪುರಂನಲ್ಲಿ ಪ್ರೇಯಸಿಯೇ ಪ್ರಿಯತಮನಿಗೆ ವಿಷ ನೀಡಿ ಕೊಲೆ ಮಾಡಿರುವ ಘಟನೆ ನಡೆದಿದೆ. ಕೊಲೆ ಮಾಡಿ ಮಳ್ಳಿತರ ಇದ್ದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.
ತಿರುವನಂತಪುರಂ: ವೈದ್ಯರ ವರದಿಯಿಂದ ಖತರ್ನಾಕ್ ಕೊಲೆಗಾರ್ತಿಯೊಬ್ಬಳು ಬಂಧನಕ್ಕೊಳಗಾಗಿದ್ದಾರೆ. ಅಷ್ಟಕ್ಕೂ ಆಕೆ ಕೊಲೆ ಮಾಡಿದ್ದು ಬೇರೆ ಯಾರನ್ನೋ ಅಲ್ಲ, ಸ್ವಂತ ಬಾಯ್‌ಫ್ರೆಂಡ್‌ನನ್ನ ಅಂದರೆ ಅಯ್ಯಪ್ಪಾ ಎಂಬ ಉದ್ಗಾರ ನಿಮ್ಮಲ್ಲೂ ಬರಬಹುದು. ಹೌದು ಕೇರಳದ ತಿರುವನಂತಪುರಂನಲ್ಲಿ ಈ ಘಟನೆ ನಡೆದಿದೆ. ತಿರುವನಂತರಪುರಂನ ಪರಸ್ಸಲ ಎಂಬ ಊರಿನಲ್ಲಿ ಶರೊನ್ ರಾಜ್ ಎಂಬಾತ ಸಾವನ್ನಪ್ಪಿದ್ದ. ಆತನ ಗರ್ಲ್‌ಫ್ರೆಂಡ್ ಗ್ರೀಶ್ಮಾಳೇ ಆತನ ಕೊಲೆ ಮಾಡಿರುವುದು ಈಗ ಪತ್ತೆಯಾಗಿದ್ದು, ಪೊಲೀಸರು ಬಂಧಿಸಿದ್ದಾರೆ.
ಶರೊನ್ ರಾಜ್ ವಾಂತಿ ಹಸಿರು ಬಣ್ಣಕ್ಕೆ ತಿರುಗಿತ್ತು. ಸಾಮಾನ್ಯವಾಗಿ ವಾಂತಿ ಮತ್ತು ಮೂತ್ರ ಹಸಿರು ಬಣ್ಣಕ್ಕೆ ಅಥವಾ ಕಂದು ಬಣ್ಣಕ್ಕೆ ತಿರುಗುವುದು ವಿಷಸೇವನೆ ಮಾಡಿದಾಗ. ಈ ಕಾರಣಕ್ಕೆ ವೈದ್ಯರಿಗೆ ಶರೊನ್ ಸಾವಿನ ಬಗ್ಗೆ ಸಂಶಯ ಮೂಡಿದೆ. ಅವರು ತಮ್ಮ ವರದಿಯನ್ನು ಎಡಿಜಿಪಿ ಎಮ್‌ಆರ್ ಅಜಿತ್ ಕುಮಾರ್ ಅವರಿಗೆ ನೀಡಿದ್ದಾರೆ. ಇದರಿಂದ ಪೊಲೀಸರಿಗೂ ಸಂಶಯ ಮೂಡಿದೆ. ಫುಡ್ ಪಾಯ್ಸನ್ ಆಗಿರಬಹುದು ಎಂದು ಮೊದಲು ಅಂದುಕೊಳ್ಳಲಾಗಿತ್ತು. ಆದರೆ ವೈದ್ಯರ ವರದಿಯಿಂದ ಪೊಲೀಸರ ಸಂಶಯದ ವಾಸನೆ ಜಾಗೃತಿಯಾಗಿದೆ. ನಂತರ ಕೂಲಂಕುಷವಾಗಿ ತನಿಖೆ ಮಾಡಿದ ಪೊಲೀಸರಿಗೆ ಗ್ರೀಶ್ಮಾ ಬಗ್ಗೆ ಸಂಶಯ ಮೂಡಿದೆ. ವಿಚಾರಣೆಯ ನಂತರ ಕಾಪಿಕ್ ಎಂಬ ವಿಷವನ್ನು ಶರೊನ್ ರಾಜ್‌ನ ಕಷಾಯದ ಜೊತೆಗೆ ಸೇರಿಸಿರುವ ಬಗ್ಗೆ ಗ್ರೀಶ್ಮಾ ಹೇಳಿದ್ದಾಳೆ.
ಗ್ರೀಶ್ಮಾ ಮನೆಯಿಂದ ಕಾಪಿಕ್ ವಿಷದ ಬಾಟಲಿಯನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆದರೆ ಪೊಲೀಸರು ಈಗಲೂ ವಿಸ್ತೃತ ಪೋಸ್ಟ್‌ಮಾರ್ಟಮ್ ವರದಿಗಾಗಿ ಕಾಯುತ್ತಿದ್ದಾರೆ. ಶರೊನ್ ರಾಜ್‌ನಿಂದ ತಪ್ಪಿಸಿಕೊಳ್ಳಲು ಗ್ರೀಶ್ಮಾ ತಾನೊಬ್ಬಳೇ ಕೊಲೆಯನ್ನು ಮಾಡಿರುವುದಾಗಿ ಹೇಳಿಕೆ ನೀಡಿದ್ದಾಳೆ. ಆದರೆ ಶರೊನ್ ಕುಟುಂಬ ಗ್ರೀಶ್ಮಾ ಪೋಷಕರೂ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ಧಾರೆ. ಇದೇ ಕಾರಣಕ್ಕೆ ಪೊಲೀಸರಿಗೆ ಗ್ರೀಶ್ಮಾ ಹೇಳಿಕೆಯ ಮೇಲೂ ಸಂಶಯ ಮೂಡಿದೆ. ಗ್ರೀಶ್ಮಾ ಪೋಷಕರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ.
ಇದನ್ನೂ ಓದಿ: ಅಪ್ರಾಪ್ತೆ ಜತೆ ಲೈಂಗಿಕ ಸಂಪರ್ಕ ಪ್ರಕರಣ; ಮದುವೆ ಷರತ್ತು ವಿಧಿಸಿ ಆರೋಪಿಗೆ ಜಾಮೀನು
ಬ್ರೇಕ್ ಅಪ್‌ಗೆ ಒಪ್ಪದಿದ್ದಕ್ಕೆ ಕೊಲೆ:
ಶರೊನ್ ಜೊತೆ ಗ್ರೀಶ್ಮಾ ಬ್ರೇಕಪ್ ಮಾಡಿಕೊಳ್ಳಲು ನಿರ್ಧರಿಸಿದ್ದಳು. ಆದರೆ ಶರೊನ್ ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಒಂದಾಗಿಯೇ ಇರೋಣ ಎಂದು ಆಕೆಯನ್ನು ಪೀಡಿಸುತ್ತಿದ್ದ. ಇದಕ್ಕಿಂತಲೂ ಮುಖ್ಯವಾಗಿ ಜ್ಯೋತಿಷಿಯೊಬ್ಬರು ಗ್ರೀಶ್ಮಾ ಮದುವೆಯಾಗುವ ಮೊದಲ ಹುಡುಗ ನವೆಂಬರ್‌ನಲ್ಲಿ ಸಾಯುತ್ತಾನೆ ಎಂದು ಭವಿಷ್ಯ ನುಡಿದಿದ್ದ. ಆದರೆ ಶರೊನ್ ಇದನ್ನು ನಂಬುತ್ತಿರಲಿಲ್ಲ. ಇಬ್ಬರೂ ಕಳೆದೊಂದು ವರ್ಷದಿಂದ ಪ್ರೀತಿಸುತ್ತಿದ್ದರು. ಆದರೆ ಪೊಲೀಸರ ಪ್ರಕಾರ ಜ್ಯೋತಿಷಿ ಕತೆಯನ್ನು ಗ್ರೀಶ್ಮಾ ತಾನೇ ಹುಟ್ಟಿಸಿಕೊಂಡು ಹೇಳಿದ್ದಾಳೆ. ಈ ಮೂಲಕ ಶರೊನ್‌ನಿಂದ ದೂರಾಗಲು ಯತ್ನಿಸಿದ್ದಾಳೆ.
ಇದನ್ನೂ ಓದಿ: ರಸಗುಲ್ಲಾಕ್ಕಾಗಿ ಬಿತ್ತು ಹೆಣ: ಮದುವೆ ಮನೆಯಾಯ್ತು ಮಸಣ
ಗ್ರೀಶ್ಮಾ ಹೇಳಿಕೆ ಪ್ರಕಾರ ಇದೇ ವರ್ಷದ ಫೆಬ್ರವರಿಯಲ್ಲಿ ಶರೊನ್ ಜೊತೆ ಬ್ರೇಕಪ್ ಮಾಡಿಕೊಂಡಿದ್ದಳು. ಆದರೆ ಆತ ಪ್ರೀತಿಸುವಂತೆ ಪೀಡಿಸುತ್ತಲೇ ಇದ್ದ. ಪದೇ ಪದೇ ಕರೆ ಮಾಡುತ್ತಿದ್ದ. ಇದರಿಂದ ಬಚಾವಾಗಲು ಮನೆಗೆ ಊಟಕ್ಕೆ ಕರೆದು ಕಷಾಯದಲ್ಲಿ ವಿಷ ಹಾಕಿ ಗ್ರೀಶ್ಮಾ ಸಾಯಿಸಿದ್ದಾಳೆ. ಶರೊನ್ ಇನ್ನೊಬ್ಬ ಸ್ನೇಹಿತನ ಜೊತೆ ಬಂದಿದ್ದ. ಕಷಾಯ ಕುಡಿದ ತಕ್ಷಣ ಏನೋ ಕಮಟು ವಾಸನೆಯಿದೆ ಎಂದು ಶರೊನ್ ಹೇಳಿದಾಗ ಗ್ರೀಶ್ಮಾ ಆತನಿಗೆ ಜ್ಯೂಸ್ ಕೊಟ್ಟಿದ್ದಳು. ತಕ್ಷಣ ಆತ ವಾಂತಿ ಮಾಡಿಕೊಂಡಿದ್ದ. ವಾಂತಿ ಮಾಡಿಕೊಂಡವನೇ ಮನೆಯಿಂದ ಹೊರ ನಡೆದಿದ್ದ. ಅದಾದ ನಂತರ ಆತನನ್ನು ಆಸ್ಪತ್ರೆಗೆ ಕುಟುಂಬಸ್ಥರು ಸೇರಿಸಿದರಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಪ್ರಕರಣ ಸಂಬಂಧ ತನಿಖೆ ಮುಂದುವರೆದಿದೆ. ಗ್ರೀಶ್ಮಾ ಪೋಷಕರೂ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆಯಿದೆ. ಜತೆಗೆ ಗ್ರೀಶ್ಮಾ ಮತ್ತು ಶರೊನ್‌ಗೆ ಮದುವೆಯಾಗಿತ್ತು ಎಂಬ ಆರೋಪಗಳೂ ಕೇಳಿ ಬಂದಿವೆ.