ಕೊಡಗು: ಕೊಲೆಯಾದ 18 ವರ್ಷಗಳ ಬಳಿಕ ಬಾಲಕಿಯ ಅಂತ್ಯ ಸಂಸ್ಕಾರ!
ನ್ಯಾಯಾಲಯದ ನಿರ್ದೇಶನದ ಮೇರೆಗೆ ಸಫಿಯಾಳ ಅಸ್ಥಿ ಪಂಜರವನ್ನು ಆಕೆಯ ಪೋಷಕರಿಗೆ ಹಸ್ತಾಂತರಿಸಲಾಯಿತು. ಬಳಿಕ ಪೋಷಕರು, ಅಯ್ಯಂಗೇರಿಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ದಫನ ಕಾರ್ಯ ನಡೆಸಿದ್ದಾರೆ.
ಮಡಿಕೇರಿ(ನ.13): ಅಪರೂಪದ ಪ್ರಕರಣದಲ್ಲಿ ಕೊಲೆಯಾದ ಬರೋಬ್ಬರಿ 18 ವರ್ಷಗಳ ಬಳಿಕ ಕೊಡಗಿನ ಅಯ್ಯಂಗೇರಿಯ ಬಾಲಕಿಯ ಅಂತ್ಯ ಸಂಸ್ಕಾರ (ದಫನ ಕಾರ್ಯ) ಸೋಮವಾರ ನಡೆದಿದೆ. 2006ರ ಡಿಸೆಂಬರ್‌ನಲ್ಲಿ ಗೋವಾದಲ್ಲಿ ಅಯ್ಯಂಗೇರಿಯ 13ರ ಬಾಲಕಿ ಸಫಿಯಾಳ ಕೊಲೆ ನಡೆದಿತ್ತು.
2008ರ ಜೂನ್ 5ರಂದು ಆಕೆಯ ತಲೆಬುರುಡೆ ಮತ್ತು ಕೆಲವು ಮೂಳೆ ತುಣುಕುಗಳು ಪತ್ತೆಯಾಗಿದ್ದವು. ಅದನ್ನು ಕಾಸರಗೋಡು ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ಇರಿಸಲಾಗಿತ್ತು. ಸೋಮವಾರ ನ್ಯಾಯಾಲಯದ ನಿರ್ದೇಶನದ ಮೇರೆಗೆ ಸಫಿಯಾಳ ಅಸ್ಥಿ ಪಂಜರವನ್ನು ಆಕೆಯ ಪೋಷಕರಿಗೆ ಹಸ್ತಾಂತರಿಸಲಾಯಿತು. ಬಳಿಕ ಪೋಷಕರು, ಅಯ್ಯಂಗೇರಿಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ದಫನ ಕಾರ್ಯ ನಡೆಸಿದ್ದಾರೆ.
ಪ್ರಕರಣವೇನು?:
ಸಫಿಯಾಳನ್ನು ಕಾಸರಗೋಡಿನ ಮುಲಿಯಾರ್‌ಮಸ್ತಿಕುಂದ್‌ನ ಸಿವಿಲ್ ಕಾಂಟ್ರಾಕ್ಟರ್ ಕೆ.ಸಿ.ಹಂಝ ಮತ್ತು ಮೈಮೂನ ದಂಪತಿ 2006ರಲ್ಲಿ ಮನೆ ಕೆಲಸಕ್ಕೆ ನೇಮಿಸಿಕೊಂಡಿದ್ದರು. ದಂಪತಿ ಗೋವಾಕ್ಕೆ ಹೋಗುವಾಗ ಸಫಿಯಾಳನ್ನು ಕರೆದೊಯ್ದಿದ್ದರು. ಸಫಿಯಾ ಕಾಣೆಯಾಗಿದ್ದಾಳೆ ಎಂದು ಹಂಝ ಆಕೆಗೆ ತಂದೆಗೆ ಹೇಳಿದ್ದರು. ಆದೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಒಂದೂವರೆ ವರ್ಷಗಳ ನಂತರ ಕೇರಳ ಕ್ರೈಂ ಬ್ರಾಂಚ್ ಸಫಿಯಾಳನ್ನು ಹಂಝ ಕೊಲೆ ಮಾಡಿದ್ದಾರೆ ಎಂದು ತಿಳಿಸಿದ್ದರು. ಕೆಲಸ ಮಾಡುವಾಗ ಬಿಸಿ ಗಂಜಿ ಸಫಿಯಾಳ ಮೈಮೇಲೆ ಬಿದ್ದು, ಸುಟ್ಟ ಗಾಯ ಆಗಿತ್ತು. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲು, ಆಕೆಯನ್ನು ಯಾರಾದರು ನೋಡಿದರೆ ಮನೆಯಲ್ಲಿ ಹಿಂಸಿಸಲಾಗಿದೆ ಅಂದುಕೊಳ್ಳುತ್ತಾರೆ. ಬಾಲ ಕಾರ್ಮಿಕ ಕೇಸ್ ಬೀಳುತ್ತದೆ ಎಂದು ಯೋಚಿಸಿದ ಹಂಝ, ಕೊಲೆ ಮಾಡಿದ್ದ. ಆತನಿಗೆ ಜೀವಾವಧಿ ಶಿಕ್ಷೆ ಆಗಿದೆ.