Ghaziabad Gang Rape: ಜಮೀನು ವಿವಾದ ಪರಿಹರಿಸಲು ಅತ್ಯಾಚಾರದ ಕಥೆ ಕಟ್ಟಿದ್ದ ಮಹಿಳೆ
Ghaziabad Gang Rape updates: ಗಾಜಿಯಾಬಾದಿನಲ್ಲಿ ನಡೆದಿದ್ದ ಗ್ಯಾಂಗ್ ರೇಪ್ ಪ್ರಕರಣದ ತನಿಖೆಯಲ್ಲಿ ಹೊಸ ಟ್ವಿಸ್ಟ್ ಸಿಕ್ಕಿದ್ದು ಜಮೀನು ವಿವಾದ ಪರಿಹಾರಕ್ಕಾಗಿ ಆರೋಪಿಗಳನ್ನು ಸಿಕ್ಕಿಹಾಕಿಸಲು ಸುಳ್ಳು ಪ್ರಕರಣ ದಾಖಲಿಸಿರುವುದು ತಿಳಿದುಬಂದಿದೆ.
ನವದೆಹಲಿ: ನವದೆಹಲಿಯ ಗಾಜಿಯಾಬಾದಿನ ಗ್ಯಾಂಗ್ ರೇಪ್ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು ಜಮೀನು ವಿವಾದ ಇದ್ದರಿಂದ ಮಹಿಳೆ ಆರೋಪಿಗಳನ್ನು ಸಿಕ್ಕಿಹಾಕಿಸಲು ಅತ್ಯಾಚಾರದ ಕಥೆ ಕಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆ ಮತ್ತು ಬಂಧಿತ ಆರೋಪಿಗಳ ನಡುವೆ ಜಮೀನಿನ ವ್ಯಾಧಿಯಿತ್ತು. ಈ ಕಾರಣಕ್ಕಾಗಿ ಅವರನ್ನು ಗ್ಯಾಂಗ್ ರೇಪ್ ಪ್ರಕರಣದಲ್ಲಿ ಜೈಲಿಗಟ್ಟುವ ತಂತ್ರವನ್ನು ಮಹಿಳೆ ರೂಪಿಸಿ ಇಡೀ ವೃತ್ತಾಂತವನ್ನು ಸೃಷ್ಟಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. "ಆಕೆ ಎರಡು ದಿನಗಳ ಕಾಲ ಇಬ್ಬರು ಸ್ನೇಹಿತರ ಜೊತೆಗಿದ್ದರು. ಈ ಎರಡು ದಿನಗಳಲ್ಲೇ ತನ್ನನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ ಎಂದು ಮಹಿಳೆ ಪೊಲೀಸರಿಗೆ ದೂರಿನಲ್ಲಿ ತಿಳಿಸಿದ್ದರು," ಎಂದು ಉತ್ತರ ಪ್ರದೇಶ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿ ಪ್ರವೀಣ್ ಕುಮಾರ್ ತಿಳಿಸಿದ್ದಾರೆ.
ಗಾಜಿಯಾಬಾದ್‌ನ ಆಶ್ರಮ ರಸ್ತೆಯಲ್ಲಿ ಮಹಿಳೆ ಕೈಕಾಲು ಬಿಗಿದ ಸ್ಥಿತಿಯಲ್ಲಿ ಗೋಣಿ ಚೀಲದೊಳಗೆ ಪತ್ತೆಯಾಗಿದ್ದರು. ಆಕೆಯ ಖಾಸಗಿ ಭಾಗದೊಳಗೆ ಕಬ್ಬಿಣದ ಸಲಾಕೆ ಕೂಡ ಇತ್ತು. ಈ ಪ್ರಕರಣವನ್ನು ದೆಹಲಿ ಮಹಿಳಾ ಆಯೋಗ ಗಂಭೀರವಾಗಿ ಪರಿಗಣಿಸಿತ್ತು. ತಕ್ಷಣ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಂತೆ ಪೊಲೀಸರಿಗೆ ಆಯೋಗದ ಅಧ್ಯಕ್ಷೆ ಸ್ವಾತಿ ಮಳಿವಾಲ್ ನೊಟೀಸ್ ನೀಡಿದ್ದರು. ಇದರ ಬೆನ್ನಲ್ಲೇ ಮಹಿಳೆ ಹೇಳಿಕೆ ದಾಖಲಿಸಿಕೊಂಡು ನಾಲ್ವರನ್ನು ಪೊಲೀಸರು ಬಂಧಿಸಿದ್ದರು. ಆದರೆ ಆಸ್ಪತ್ರೆ ವೈದ್ಯಾಧಿಕಾರಿಗಳು ಆಕೆಯ ಮೇಲೆ ಅತ್ಯಾಚಾರವಾಗಲಿ ಅಥವಾ ಖಾಸಗಿ ಅಂಗದ ಆಂತರಿಕ ಭಾಗದ ಮೇಲೆ ಹಲ್ಲೆಯಾಗಲೀ ಆಗಿಲ್ಲ. ಅತ್ಯಾಚಾರ ನಡೆದಿರುವ ಯಾವುದೇ ಕುರುಹು ಸಿಗುತ್ತಿಲ್ಲ ಎಂದು ತಿಳಿಸಿದ್ದರು.
ಇದಾದ ಬಳಿಕ ಮಹಿಳೆಗೂ ಮತ್ತು ಆರೋಪಿತರಿಗೂ ನಡುವೆ ಜಮೀನಿನ ವಿವಾದವಿದೆ. ಅದು ಸದ್ಯ ನ್ಯಾಯಾಲಯದಲ್ಲಿದೆ ಎಂಬುದು ತಿಳಿದುಬಂದಿತ್ತು. ತನಿಖೆಯನ್ನು ಇನ್ನೊಂದು ಆಯಾಮದಲ್ಲಿ ಆರಂಭಿಸಿದ ಪೊಲೀಸರಿಗೆ ಹೊಸ ಸಾಕ್ಷಿಗಳು ಸಿಕ್ಕಿವೆ. ಮಹಿಳೆಯ ಸ್ನೇಹಿತರೊಬ್ಬರ ಮೊಬೈಲ್ ಸಂಖ್ಯೆ ಮಹಿಳೆ ಸಿಕ್ಕ ಜಾಗದ ಹತ್ತಿರದಿಂದಲೇ ಸ್ವಿಚ್ ಆಫ್ ಆಗಿತ್ತು ಬೆಳಕಿಗೆ ಬಂದಿದೆ. ನಂತರ ಮಹಿಳೆಯ ನೆಟ್‌ವರ್ಕ್ ಮ್ಯಾಪಿಂಗ್ ಮಾಡಿದಾಗ ಆಕೆ ಎರಡು ದಿನಗಳ ಕಾಲ ಸ್ನೇಹಿತರ ಜೊತೆ ಇರುವುದು ಪತ್ತೆಯಾಗಿದೆ. ನಂತರ ಸ್ನೇಹಿತರನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಸಂಗತಿ ಆಚೆ ಬಂದಿದೆ. ಪೊಲೀಸರು ಈಗ ಮಹಿಳೆಯ ವಿರುದ್ಧವೇ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ.
ಹೈದರಾಬಾದಿನಲ್ಲಿ ಈ ಹಿಂದೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಯ ಭೀಕರ ಘಟನೆಯನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು. ಘಟನೆಯಾಗಿ 24 ಗಂಟೆಯೊಳಗೆ ಆರೋಪಿಗಳನ್ನು ಎನ್‌ಕೌಂಟರ್ ಮಾಡಲಾಗಿತ್ತು. ಈ ಪ್ರಕರಣದಲ್ಲೂ ಪೊಲೀಸರು ಕೇವಲ ಒಂದು ಕಡೆಯ ಮಾಹಿತಿಯನ್ನೇ ಸತ್ಯ ಎಂದುಕೊಂಡು ಎನ್‌ಕೌಂಟರ್ ರೀತಿಯ ಇನ್ಸ್‌ಟಂಟ್ ನ್ಯಾಯಕ್ಕೆ ಮುಂದಾಗಿದ್ದರೆ ದೊಡ್ಡ ದುರಂತವೇ ಸಂಭವಿಸುತ್ತಿತ್ತು.
ಪ್ರಾಥಮಿಕ ತನಿಖೆಯಲ್ಲಿ ಕಂಡಿದ್ದೇನು:
"ಪ್ರಾಥಮಿಕ ತನಿಖೆಯ ಪ್ರಕಾರ ಸಂತ್ರಸ್ಥೆ ಮತ್ತು ಆರೋಪಿಗಳು ಪರಿಚಿತರು. ಅವರ ನಡುವೆ ಜಮೀನಿನ ಸಂಬಂಧ ಕೋರ್ಟ್‌ನಲ್ಲಿ ಪ್ರಕರಣ ನಡೆಯುತ್ತಿದೆ. ನಾವು ತನಿಖೆ ಮಾಡುತ್ತಿದ್ದೇವೆ. ಸಂತ್ರಸ್ಥೆಗೆ ನ್ಯಾಯ ಕೊಡುವತ್ತ ಎಲ್ಲಾ ರೀತಿಯ ಕ್ರಮವನ್ನೂ ತೆಗೆದುಕೊಳ್ಳುತ್ತೇವೆ," ಎಂದು ಗಾಜಿಯಾಬಾದ್ ಎಸ್‌ಪಿ ನಿಪುಣ್ ಅಗರ್ವಾಲ್ ಎಎನ್‌ಐಗೆ ಮಾಹಿತಿ ನೀಡಿದ್ದಾರೆ.
ದೆಹಲಿ ಮಹಿಳಾ ಆಯೋಗ ಆರೋಪಿಗಳ ಮಾಹಿತಿಯನ್ನು ನೀಡುವಂತೆ ಪೊಲೀಸರಿಗೆ ನಿರ್ದೇಶಿಸಿದೆ. ಪ್ರಕರಣ ಗಂಭೀರ ಸ್ವರೂಪದ್ದಾಗಿದ್ದು, ಪ್ರಕರಣದ ಎಲ್ಲಾ ಮಾಹಿತಿಯನ್ನೂ ನೀಡಿ ಎಂದು ಆಯೋಗ ನೊಟೀಸ್ ಜಾರಿ ಮಾಡಿದೆ. "ಸಂತ್ರಸ್ಥ ಮಹಿಳೆ ಗಂಭೀರ ಸ್ವರೂಪದಲ್ಲಿ ರಕ್ತದ ಮಡುವಿನಲ್ಲಿ ರಸ್ತೆಯಲ್ಲಿ ಬಿದ್ದಿದ್ದರು. ಅವರೊಳಗೆ ಕಬ್ಬಿಣದ ಸಲಾಕೆ ಇನ್ನೂ ಹಾಗೆ ಇತ್ತು. ಆಕೆಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ," ಎಂದು ಸ್ವಾತಿ ಮಳಿವಾಲ್ ಹೇಳಿದ್ದರು.
ಇದನ್ನೂ ಓದಿ: Madhya Pradesh: ಪತ್ನಿ ‘ಅದಲು - ಬದಲು’ ಗೇಮ್‌ಗೆ ಒಪ್ಪದ ಮಹಿಳೆಗೆ ಕಿರುಕುಳ, 50 ಲಕ್ಷ ವರದಕ್ಷಿಣೆಗೂ ಡಿಮ್ಯಾಂಡ್
"ಸಂತ್ರಸ್ಥೆ ಗಾಜಿಯಾಬಾದ್‌ನಿಂದ ತನ್ನ ಮನೆಗೆ ರಾತ್ರಿ ವಾಪಸ್ ಹೋಗುತ್ತಿದ್ದ ವೇಳೆ ಆರೋಪಿಗಳು ಬಲವಂತದಿಂದ ಆಕಯನ್ನು ಕಾರಿನಲ್ಲಿ ಅಪಹರಿಸಿದ್ದಾರೆ. ಐವರು ಆರೋಪಿಗಳು ಸತತ ಎರಡು ದಿನಗಳ ಕಾಲ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾರೆ. ನಂತರ ಆಕೆಯ ಖಾಸಗಿ ಭಾಗದೊಳಗೆ ಕಬ್ಬಿಣದ ಸಲಾಕೆ ಹಾಕಲಾಗಿದೆ. ಆಕೆ ರಕ್ತದ ಮಡುವಿನಲ್ಲಿ ಆಶ್ರಮ ರಸ್ತೆಯಲ್ಲಿ ಸಿಕ್ಕಾಗ ಆಕೆಯ ಖಾಸಗಿ ಭಾಗದೊಳಗೆ ಕಬ್ಬಿಣದ ರಾಡ್ ಹಾಗೇ ಇತ್ತು. ಸಾವು ಬದುಕಿನ ನಡುವೆ ಆಕೆ ಆಸ್ಪತ್ರೆಯಲ್ಲಿ ಹೋರಾಡುತ್ತಿದ್ದಾರೆ. ಗಾಜಿಯಾಬಾದ್ ಹಿರಿಯ ಎಸ್‌ಪಿಗೆ ನೊಟೀಸ್ ಮನೀಡಿದ್ದೇವೆ," ಎಂದು ಸ್ವಾತಿ ಮಳಿವಾಲ್ ಟ್ವೀಟ್ ಮಾಡಿದ್ದಾರೆ. ಐವರು ಆರೋಪಿಗಳಲ್ಲಿ ನಾಲ್ವರ ಬಂಧನವಾಗಿದ್ದು, ಇನ್ನೊಬ್ಬ ತಲೆ ಮರೆಸಿಕೊಂಡಿದ್ಧಾನೆ ಎಂದಿದ್ದರು. ಆದರೆ ಈ ಆರೋಪ ಈಗ ಸಂಪೂರ್ಣ ಹುಸಿಯೆಂದು ಸಾಬೀತಾಗಿದೆ.