ಹೊರರಾಜ್ಯದಿಂದ ಗಿಳಿ ತಂದು ನಗರದಲ್ಲಿ ಮಾರಾಟಕ್ಕೆ ಯತ್ನಿಸುತ್ತಿದ್ದ ನಾಲ್ವರನ್ನು ಬೆಂಗಳೂರಿನಲ್ಲಿ ಸೆರೆ ಹಿಡಿಯಲಾಗಿದೆ. ಆರೋಪಿಗಳಿಂದ 16 ಜೀವಂತ ಗಿಳಿಗಳನ್ನು ಜಪ್ತಿ ಮಾಡಲಾಗಿದೆ.

ಬೆಂಗಳೂರು (ಜ.24): ಹೊರ ರಾಜ್ಯದಿಂದ ಅಕ್ರಮವಾಗಿ ಖಾಸಗಿ ಬಸ್‌ಗಳಲ್ಲಿ ಅಲೆಗ್ಸಾಂಡ್ರಿಯಾ ಜಾತಿಯ ಗಿಳಿಗಳನ್ನು ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ವಿದ್ಯಾರ್ಥಿ ಸೇರಿದಂತೆ ನಾಲ್ವರನ್ನು ರಾಜ್ಯ ಅಪರಾಧ ತನಿಖಾ ದಳದ (ಸಿಐಡಿ) ಅರಣ್ಯ ಘಟಕದ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಚೆನ್ನೈ ನಗರದ ಅಬುರಾರ್‌, ತಮಿಳುನಾಡಿನ ಚಂಗಲ್‌ಪೇಟೆ ಜಿಲ್ಲೆಯ ಲತ್ತೂರು ಗ್ರಾಮದ ಗುರುವಾಯೂರಪ್ಪನ್‌, ನೀಲಸಂದ್ರದ ಮಿರ್ಜಾ ಮೊಹಮ್ಮದ್‌ ರಜಾಕ್‌ ಹಾಗೂ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಕಂಚನಹಳ್ಳಿ ಗ್ರಾಮದ ಕೃಷ್ಣ ಬಂಧಿತರಾಗಿದ್ದು, ಆರೋಪಿಗಳಿಂದ 16 ಜೀವಂತ ಗಿಳಿಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚಿಗೆ ತಮಿಳುನಾಡಿನಿಂದ ಕಾನೂನುಬಾಹಿರವಾಗಿ ಗಿಳಿಗಳನ್ನು ಬಸ್‌ಗಳಲ್ಲಿ ನಗರಕ್ಕೆ ಸಾಗಾಣಿಕೆ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಡಿವೈಎಸ್ಪಿ ರವಿಶಂಕರ್‌ ಹಾಗೂ ಸಬ್‌ ಇನ್ಸ್‌ಪೆಕ್ಟರ್‌ ಲತಾ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಭಾರಿ ಡಿಮ್ಯಾಂಡ್‌ : ಅಲೆಗ್ಸಾಂಡ್ರಿಯಾ ಜಾತಿಯ ಗಿಳಿ ಅಳಿವಿನಂಚಿನಲ್ಲಿರುವ ಪ್ರಬೇಧವಾಗಿದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ವಯ ಅವುಗಳ ಮಾರಾಟ ಅಥವಾ ಸಾಕಾಣಿಕೆಯನ್ನು ನಿಷೇಧಿಸಲಾಗಿದೆ. ಆದರೆ ಕೆಲವರು ಮನೆಗಳಲ್ಲಿ ಕಾನೂನುಬಾಹಿರವಾಗಿ ಈ ಜಾತಿಯ ಗಿಳಿಗಳನ್ನು ಸಾಕುತ್ತಾರೆ. ಇವುಗಳು ಮನುಷ್ಯರ ಜತೆ ಸಂಹವನ ಸಹ ನಡೆಸಬಲ್ಲವಾಗಿದ್ದು, ಜನರ ಮಾತಿಗೆ ಪ್ರತಿಕ್ರಿಯಿಸುತ್ತವೆ. ಹೀಗಾಗಿ ಮಾತನಾಡುವ ಗಿಳಿಗಳು ಎಂದು ಹೇಳಿ ಸಾರ್ವಜನಿಕರಿಗೆ ಆರೋಪಿಗಳು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಬಾಗಲಕೋಟೆ: ಇಬ್ಬರು ವಿದ್ಯಾರ್ಥಿನಿಯರ ಮೇಲೆ ಶಿಕ್ಷಕನಿಂದಲೇ ರೇಪ್‌

ಹಲವು ವರ್ಷಗಳಿಂದ ಗಿಳಿ ಮಾರಾಟ ಜಾಲದಲ್ಲಿ ಅಬುರಾರ್‌ ನಿರತನಾಗಿದ್ದು, ಆತನ ಮೇಲೆ ತಮಿಳುನಾಡು ಹಾಗೂ ಬೆಂಗಳೂರಿನಲ್ಲಿ ಪ್ರಕರಣಗಳು ದಾಖಲಾಗಿವೆ. ಹಣದಾಸೆ ತೋರಿಸಿ ಇನ್ನುಳಿದವರನ್ನು ಆತ ಬಳಸಿಕೊಂಡಿದ್ದ. ದಾಳಿ ವೇಳೆ ಗಿಳಿ ಸಾಕಾಣಿಕೆ ಕೇಂದ್ರ ನಡೆಸುತ್ತಿದ್ದ ಮತ್ತೊಬ್ಬ ಆರೋಪಿ ತಪ್ಪಿಸಿಕೊಂಡಿದ್ದು, ಆತನ ಪತ್ತೆಗೆ ತನಿಖೆ ನಡೆದಿದೆ. ಮಾರುಕಟ್ಟೆಯಲ್ಲಿ ಈ ಗಿಳಿಗಳಿಗೆ ಭಾರಿ ಬೇಡಿಕೆ ಇಟ್ಟು, ಆರೋಪಿಗಳು ಮರಿಗಿಳಿಗೆ ತಲಾ 2 ಸಾವಿರ ರುಗೆ ಮಾರುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ, ಟ್ರಾನ್ಸ್‌ಫಾರ್ಮರ್‌ಗೆ ಲೈನ್‌ಮ್ಯಾನ್‌ ಬಲಿ

ಖಾಸಗಿ ಬಸ್‌ ಚಾಲಕರ ಜತೆ ಡೀಲ್‌: ಚೆನ್ನೈನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಟ್ರಾವೆಲ್ಸ್‌ ಬಸ್‌ಗಳ ಜತೆ ಅಬುರಾರ್‌ ಡೀಲ್‌ ಕುದುರಿಸುತ್ತಿದ್ದು, ಹಣ ನೀಡಿ ಚಾಲಕರ ಸಹಕಾÃದಿಂದ ಗಿಳಿಗಳನ್ನು ಸಾಗಾಣಿಕೆ ಮಾಡುತ್ತಿದ್ದ. ಇದಕ್ಕಾಗಿ ವಿದ್ಯಾರ್ಥಿಗಳನ್ನು ಆತ ಬಳಸಿಕೊಳ್ಳುತ್ತಿದ್ದ. ಈ ಜಾಲದಲ್ಲಿ ಬಿಕಾಂ ವಿದ್ಯಾರ್ಥಿ ಮಿರ್ಜಾ ಸಾಥ್‌ ತೊಡಗಿದ್ದ. ಜ.15 ರಂದು ಚೆನ್ನೈನಿಂದ ಖಾಸಗಿ ಬಸ್‌ನಲ್ಲಿ ನಗರಕ್ಕೆ ಗಿಳಿಗಳನ್ನು ತಂದ ಮಿರ್ಜಾನನ್ನು ಬಂಧಿಸಲಾಯಿತು. ಆತ ನೀಡಿದ ಮಾಹಿತಿ ಮೇರೆಗೆ ಇನ್ನುಳಿದ ಆರೋಪಿಗಳು ಸಿಕ್ಕಿಬಿದ್ದರು. ಮೊದಲು ಅಬುರಾರ್‌ನಿಂದ 12 ಗಿಳಿಗಳನ್ನು ಜಪ್ತಿ ಮಾಡಲಾಯಿತು. ಈತನ ನೀಡಿದ ಸುಳಿವಿನ ಮೇರೆಗೆ ಮಂಡ್ಯದ ಕೃಷ್ಣನನ್ನು ಬಂಧಿಸಿ 4 ಗಿಳಿಗಳನ್ನು ವಶಪಡಿಸಿಕೊಳ್ಳ ಲಾಯಿತು. ಚೆನ್ನೈ ನಗರದ ಅಬುರಾರ್‌ ಮನೆ ದಾಳಿ ನಡೆಸಿ ಪರಿಶೀಲಿಸಲಾಯಿತು. ಜಪ್ತಿಯಾದ ಗಿಳಿಗಳನ್ನು ಬನ್ನೇರುಘಟ್ಟರಾಷ್ಟ್ರೀಯ ಉದ್ಯಾನಕ್ಕೆ ನೀಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.