ಸಮಾಜದಲ್ಲಿ ಉನ್ನತ ಸ್ಥಾನದಲ್ಲಿದ್ದ ಅಧಿಕಾರಿಗಳು, ಅಕ್ರಮವನ್ನು ತಡೆದು ಬುದ್ಧಿ ಹೇಳಬೇಕಾದ ಇನ್ಸ್‌ಪೆಕ್ಟರ್‌ ತಹಸೀಲ್ದಾರ್‌, ಪ್ರೊಫೆಸರ್ ಮುಂತಾದ ಹುದ್ದೆಗಳಲ್ಲಿದ್ದವರೇ ಜೂಜಾಟ ನಡೆಸಿ ಸಿಕ್ಕಿಬಿದ್ದಿದ್ದಾರೆ. ಅದೂ ದೂರದ ರಾಜಸ್ತಾನದಲ್ಲಿ.

ಜೈಪುರ/ಬೆಂಗಳೂರು: ಸಮಾಜದಲ್ಲಿ ಉನ್ನತ ಸ್ಥಾನದಲ್ಲಿದ್ದ ಅಧಿಕಾರಿಗಳು, ಅಕ್ರಮವನ್ನು ತಡೆದು ಬುದ್ಧಿ ಹೇಳಬೇಕಾದ ಇನ್ಸ್‌ಪೆಕ್ಟರ್‌ ತಹಸೀಲ್ದಾರ್‌, ಪ್ರೊಫೆಸರ್ ಮುಂತಾದ ಹುದ್ದೆಗಳಲ್ಲಿದ್ದವರೇ ಜೂಜಾಟ ನಡೆಸಿ ಸಿಕ್ಕಿಬಿದ್ದಿದ್ದಾರೆ. ಅದೂ ದೂರದ ರಾಜಸ್ತಾನದಲ್ಲಿ. ಬಹುಶಃ ಇವರು ಇಲ್ಲಿ ಜೂಜಾಡಿದರೆ ಗೊತ್ತಾಗುತ್ತದೆ ಎಂಬ ಕಾರಣಕ್ಕೆ ದೂರದ ರಾಜಸ್ತಾನಕ್ಕೆ ಹೋಗಿ ಜೂಜಾಟ ನಡೆಸಿ ಅಲ್ಲಿನ ಪೊಲೀಸರ ಬಲೆಗೆ ಬೀಳುವ ಜೊತೆಗೆ ರಾಜ್ಯದ ಮಾನ ಹರಾಜು ಮಾಡಿದ್ದಾರೆ. 


ಐಷಾರಾಮಿ ರೆಸಾರ್ಟ್‌ನಲ್ಲಿ ಅಕ್ರಮ ಕ್ಯಾಸಿನೋ, ಮೋಜು ಮಸ್ತಿ

ರಾಜಸ್ಥಾನದ ಜೈಸಿಂಗಾಪುರ್‌ ಖೋರ್‌ ಪ್ರದೇಶದಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿದ ಸ್ಥಳೀಯ ಪೊಲೀಸರು ಬೆಂಗಳೂರಿನ ತಹಶೀಲ್ದಾರ್‌, ಕರ್ನಾಟಕ ಪೊಲೀಸ್‌ ಇನ್ಸ್‌ಪೆಕ್ಟರ್‌, ಪ್ರೊಫೆಸರ್‌ ರಮೇಶ್‌ ಸೇರಿದಂತೆ 84 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ 13 ಮಹಿಳೆಯರು ಸೇರಿದ್ದಾರೆ. ಬಂಧಿತರ ಪೈಕಿ ತಹಸೀಲ್ದಾರ್‌ ಹೆಸರು ನಾಥ್‌, ಇನ್‌ಸ್ಪೆಕ್ಟರ್‌ ಹೆಸರು ಅಂಜಯ್ಯ ಮತ್ತು ಪ್ರೊಫೆಸರ್‌ ಹೆಸರು ಕೆ.ಎಲ್‌.ರಮೇಶ್‌ ಎಂದು ಪೊಲೀಸ್‌ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿದೆ.


ಇಲ್ಲಿನ ಸಾಯಿಪುರ ಭಾಗ್‌ ಅರಮನೆಯಲ್ಲಿ ಅಕ್ರಮವಾಗಿ ಜೂಜು ಅಡ್ಡೆ ನಡೆಸಲಾಗುತ್ತಿದೆ ಎಂಬ ಮಾಹಿತಿಯ ಮೇಲೆ ಶನಿವಾರ ತಡರಾತ್ರಿ ದಾಳಿ ನಡೆಸಿದ ಪೊಲೀಸರು, 13 ಮಹಿಳೆಯರು ಸೇರಿದಂತೆ 84 ಮಂದಿಯನ್ನು ಬಂಧಿಸಿದ್ದಾರೆ. ಅಲ್ಲದೇ 9 ಹುಕ್ಕಾ, 44 ಐಎಂಎಫ್‌ಎಲ್‌ ಬಾಟಲ್‌ಗಳು, 14 ಐಶಾರಾಮಿ ಕಾರುಗಳು, ಒಂದು ಟ್ರಕ್‌ ಮತ್ತು 23.78 ಲಕ್ಷ ರು. ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತರ ಪೈಕಿ ಬಹುತೇಕರು ಕರ್ನಾಟಕ, ಹರ್ಯಾಣ, ಪಂಜಾಬ್‌, ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಿಗೆ ಸೇರಿದವರಾಗಿದ್ದಾರೆ ಎಂದು ಜೈಪುರ ಹೆಚ್ಚುವರಿ ಕಮಿಷನರ್‌ ಅಜಯ್‌ಪಾಲ್‌ ಲಂಬಾ ತಿಳಿಸಿದ್ದಾರೆ. ದೆಹಲಿ ಮೂಲದ ಮನೀಶ್‌ ಎಂಬಾತ ಈ ಪಾರ್ಟಿ ಆಯೋಜಿಸಿದ್ದ. ಆತನಿಗೆ ದೇಶವ್ಯಾಪಿ ಜೂಜು ಅಡ್ಡೆಗಳ ಸಂಪರ್ಕವಿದ್ದು, ಈ ಹಿಂದೆಯೂ ದೇಶದ ಹಲವು ಭಾಗಗಳಲ್ಲಿ ಇಂಥ ಪಾರ್ಟಿ ಆಯೋಜಿಸಿದ್ದ ಎಂದು ಮೂಲಗಳು ತಿಳಿಸಿವೆ.


ಬಂಧಿತರಲ್ಲಿ ಓರ್ವ ಬೆಂಗಳೂರು ಉಳಿದ ಆರು ಜನ ಕೋಲಾರದವರು ಎಂದು ತಿಳಿದು ಬಂದಿದೆ. ಇವರು ತಲಾ 2 ಲಕ್ಷ ರೂ. ಪ್ರವೇಶ ಶುಲ್ಕ ಕೊಟ್ಟು ಜೂಜಾಡಿದ್ದರು ಎಂದು ತಿಳಿದು ಬಂದಿದೆ. ಕೋಲಾರದ ಸೈಬರ್‌ ಕ್ರೈಂ ಇನ್ಸ್‌ಪೆಕ್ಟರ್‌ ಆಂಜಿನಪ್ಪ, ಉಪನ್ಯಾಸಕ ಪ್ರೊ.ರಮೇಶ್‌, ಟೊಮೆಟೋ ವ್ಯಾಪಾರಿ ಸುಧಾಕರ್‌ಗೌಡ, ಆರ್‌ಟಿಒ ಸಿಬ್ಬಂದಿ ಶಬರೀಶ್‌, ನಗರಸಭೆ ಸದಸ್ಯ ಸತೀಶ್‌ ಮತ್ತು ಕೆಎಎಸ್‌ ಅಧಿಕಾರಿ ಶ್ರೀನಾಥ್‌ ಬಂಧಿತರು. ಮತ್ತೊಬ್ಬ ವ್ಯಕ್ತಿ ಬೆಂಗಳೂರಿನವರು ಎನ್ನಲಾಗಿದೆ. ಇವರಲ್ಲಿ ಇನ್ಸ್‌ಪೆಕ್ಟರ್‌ ಆಂಜಿನಪ್ಪ ಅವರನ್ನು ಅಮಾನತು ಮಾಡಿ ಕೇಂದ್ರವಲಯ ಐಜಿಪಿ ಚಂದ್ರಶೇಖರ್‌ ಆದೇಶ ಹೊರಡಿಸಿದ್ದಾರೆ. ಇವರು ಮೂರು ದಿನ ರಜೆ ಹಾಕಿ ರಾಜಸ್ಥಾನಕ್ಕೆ ಹೋಗಿದ್ದರು ಎನ್ನಲಾಗಿದೆ.