ಗದಗ ಜಿಲ್ಲೆಯ ಬೆಟಗೇರಿ ಬಡಾವಣೆಯ ಪುಟ್ಟರಾಜನಗರದ ನಿವಾಸಿ ಮಧುಶ್ರೀ ಈರಪ್ಪ ಅಂಗಡಿ (23) ಕೊಲೆಯಾದ ಯುವತಿ. ಈಕೆಯ ಪ್ರಿಯಕರ ನಾರಾಯಣಪುರ ನಿವಾಸಿ ಸತೀಶ ಹಿರೇಮಠ (28) ಜೈಲು ಸೇರಿದ್ದಾನೆ.

ಗದಗ (ಜೂ.16): ಆರು ತಿಂಗಳ ಹಿಂದೆ ಯುವತಿ ನಾಪತ್ತೆಯಾಗಿದ್ದ ಪ್ರಕರಣ ಭಾರೀ ಟ್ವಿಸ್ಟ್‌ ಸಿಕ್ಕಿದೆ. ಮದುವೆ ಆಗುವಂತೆ ಒತ್ತಾಯಿಸಿದ್ದಕ್ಕೆ ಆಕೆಯನ್ನು ತನ್ನ ಜಮೀನಿಗೆ ಕರೆದುಕೊಂಡು ಹೋಗಿ ವೇಲ್‌ನಿಂದ ಬಿಗಿದು ಕೊಂದು, ಜಮೀನಿನಲ್ಲಿ ಹೂತು ಹಾಕಿದ್ದಲ್ಲದೆ, ಮೂಳೆಗಳನ್ನು ಚದುರಿಸಿದ ಕಿರಾತಕ ಪ್ರೇಮಿಯನ್ನು ಪೊಲೀಸರು ಜೈಲಿಗೆ ಅಟ್ಟಿದ್ದಾರೆ. ಇದು ಮಲಯಾಳಂನ ಸೂಕ್ಷ್ಮದರ್ಶಿನಿ ಸಿನಿಮಾದ ಕಥೆಯನ್ನು ಹೋಲುತ್ತದೆ ಎನ್ನಲಾಗಿದೆ. ಗದಗ ಜಿಲ್ಲೆಯ ಬೆಟಗೇರಿ ಬಡಾವಣೆಯ ಪುಟ್ಟರಾಜನಗರದ ನಿವಾಸಿ ಮಧುಶ್ರೀ ಈರಪ್ಪ ಅಂಗಡಿ (23) ಕೊಲೆಯಾದ ಯುವತಿ. ಈಕೆಯ ಪ್ರಿಯಕರ ನಾರಾಯಣಪುರ ನಿವಾಸಿ ಸತೀಶ ಹಿರೇಮಠ (28) ಜೈಲು ಸೇರಿದ್ದಾನೆ.

ಘಟನೆ ವಿವರ: ಮಧುಶ್ರೀ ಮತ್ತು ಸತೀಶ ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು. ತನ್ನನ್ನು ಮದುವೆ ಆಗುವಂತೆ ಆಕೆ ಒತ್ತಾಯಿಸುತ್ತಿದ್ದಳು. ಅದರಂತೆ 2024ರ ಡಿ.16ರ ರಾತ್ರಿ 10ರ ಸುಮಾರಿಗೆ ಆಕೆಯ ಗದಗ ನಗರದಲ್ಲಿ ಇರುವ ಚಿಕ್ಕಪ್ಪನ ಮನೆಯಿಂದ ಸತೀಶ ತನ್ನ ಬೈಕ್‌ನಲ್ಲಿ ನಾರಾಯಣಪುರದ ತನ್ನ ಜಮೀನಿಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ಮತ್ತೆ ಆಕೆ ತನ್ನನ್ನು ಈಗಲೇ ಮದುವೆ ಆಗುವಂತೆ ಒತ್ತಾಯಿಸಲು ಆರಂಭಿಸಿದ್ದಾಳೆ. ಡಿ.17ರಂದು ಮದುವೆ ವಿಚಾರವಾಗಿ ಇಬ್ಬರ ನಡುವೆ ಜಗಳ ಆಗಿದೆ. ಈ ವೇಳೆ ಆಕೆಯ ಮೇಲೆ ಕೋಪಗೊಂಡ ಸತೀಶ, ಮಧುಶ್ರೀ ಧರಿಸಿದ್ದ ವೇಲ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ಬಳಿಕ ಶವವನ್ನು ಜಮೀನಿನ ಬದುವಿನ ಬಳಿ ಮಣ್ಣು ಮಾಡಿದ್ದಾನೆ.

ಇತ್ತ 2025ರ ಜ.12ರಂದು ಬೆಟಗೇರಿ ಬಡಾವಣೆ ಪೊಲೀಸ್‌ ಠಾಣೆಗೆ ಗದಗ ಪುಟ್ಟರಾಜನಗರದ ನಿವಾಸಿ ಬಸವರಾಜ ಅಂಗಡಿ ತಮ್ಮ ತಂಗಿ ಮಧುಶ್ರೀ ನಾಪತ್ತೆ ಆಗಿದ್ದಾಳೆ ಎಂದು ದೂರು ನೀಡಿದ್ದರು. ವಿಚಾರಣೆ ನಡೆಸಿದ ಪೊಲೀಸರಿಗೆ ಸತೀಶ, ಆಕೆಯನ್ನು ಹಾತಲಗೇರಿ ಗ್ರಾಮದಲ್ಲಿ ಬಿಟ್ಟು ಬಂದಿದ್ದೇನೆ ಎಂದು ಹೇಳಿದ್ದಾನೆ. ಅಲ್ಲಿನ ಸುತ್ತಮುತ್ತಲ ಸ್ಥಳಗಳನ್ನು ಪೊಲೀಸರು ಶೋಧಿಸಿದರೂ ಮಧುಶ್ರೀ ಸುಳಿವು ಸಿಕ್ಕಿಲ್ಲ. ಇದರಿಂದ ಸತೀಶನ ಮೇಲೆ ಮತ್ತಷ್ಟು ಸಂಶಯಗೊಂಡ ಪೊಲೀಸರು, ಆತನ ಮೊಬೈಲ್‌ ಲೊಕೇಶನ್‌ ಮತ್ತು ಆತನ ಮೇಲೆ ನಿಗಾ ಇಟ್ಟಾರೆ.

ಮತ್ತೊಂಡೆದೆ ಆತ ನೀಡಿದ ಹೇಳಿಕೆಗೂ ಘಟನೆ ನಡೆದ ದಿನ ಆತ ಇದ್ದ ಸ್ಥಳದ ಮೊಬೈಲ್‌ ಲೊಕೇಶನ್‌ಗೂ ತಾಳೆ ಆಗಿಲ್ಲ. ಈ ವೇಳೆ ಸಂಶಯಗೊಂಡ ಪೊಲೀಸರು ಆತನನ್ನು ಮತ್ತಷ್ಟು ತೀವ್ರವಾಗಿ ವಿಚಾರಣೆ ನಡೆಸಿದ್ದಾರೆ. ಆಗ ಸತೀಶ ನಿಜ ಸಂಗತಿ ಬಾಯಿ ಬಿಟ್ಟಿದ್ದಾನೆ. ಮಧುಶ್ರೀಯನ್ನು ಕೊಂದ ಬಳಿಕ ಆಕೆಯ ಮೂಳೆಗಳು ಸಮಾಧಿಯಿಂದ ಎದ್ದಿದ್ದವು. ಅವುಗಳನ್ನು ನಾನೇ ಬೇರೆಡೆಗೆ ಎಸೆದೆ ಎಂದು ಒಪ್ಪಿಕೊಂಡಿದ್ದಾನೆ ಎಂದು ಗದಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ್ರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.