ತೈಲ ಬೆಲೆ ದುಬಾರಿ ಆಗ್ತಿದ್ದಂತೆ ಬಂಕ್‌ಗೇ ಕನ್ನ: 4.50 ಲಕ್ಷದ ಪೆಟ್ರೋಲ್ ಕಳವು..!
* ಯಾದಗಿರಿಯ 2 ಬಂಕ್‌ಗಳಲ್ಲಿ ಇಂಧನ ಕಳ್ಳತನ
* ಒಂದು ಬಂಕ್‌ನಲ್ಲಿ 200 ಲೀ.ಗೂ ಹೆಚ್ಚು ಪೆಟ್ರೋಲ್ ಕಳವು
- ಮತ್ತೊಂದು ಬಂಕ್‌ನಲ್ಲಿ 2500 ಲೀ. ಡೀಸೆಲ್ ಕದ್ದ ಕಳ್ಳರು
ಯಾದಗಿರಿ(ಜು.03): ತೈಲದರ ಗಗನಕ್ಕೇರುತ್ತಿದ್ದಂತೆ ಕದೀಮರ ಕಣ್ಣೀಗ ಪೆಟ್ರೋಲ್ ಪಂಪ್‌ಗಳ ಮೇಲೆ ಬಿದ್ದಿದೆ. ಯಾದಗಿರಿ ನಗರದ ಹೊರವಲಯಲ್ಲಿ ಕಳ್ಳರು ಎರಡು ಪೆಟ್ರೋಲ್ ಬಂಕ್‌ಗಳಲ್ಲಿ ಸುಮಾರು 4.50 ಲಕ್ಷ ಮೌಲ್ಯದ 2700 ಲೀಟರ್‌ಗೂ ಹೆಚ್ಚು ಪೆಟ್ರೋಲ್, ಡೀಸೆಲ್ ಕದ್ದಿದ್ದಾರೆ.
ಹೌದು, ನಗರದ ಗುರು ಹಾಗೂ ಎಸ್ಸಾರ್ ಪೆಟ್ರೋಲ್ ಬಂಕ್‌ಗಳಲ್ಲಿ ಈ ಘಟನೆ ನಡೆದಿದೆ. ಗುರು ಪೆಟ್ರೋಲ್ ಬಂಕ್‌ನಲ್ಲಿ 200 ಲೀಟರ್‌ಗೂ ಹೆಚ್ಚು ಪೆಟ್ರೋಲ್ ಹಾಗೂ ಎಸ್ಸಾರ್ ಬಂಕ್‌ನಲ್ಲಿ 2500 ಲೀಟರ್ ಡೀಸೆಲ್ ಅನ್ನು ಭದ್ರತೆಯ ನಡುವೆಯೂ ಕದೀಮರು ಚಾಣಾಕ್ಷತನದಿಂದ ಕದ್ದಿದ್ದಾರೆ.
ರಾತ್ರೋ ರಾತ್ರಿ 8 ಕ್ವಿಂಟಾಲ್ ಗೋವಿನ ಸಗಣಿ ಹೊತ್ತೊಯ್ದ ಕಳ್ಳರು!
ಎರಡೂ ಪೆಟ್ರೋಲ್ ಬಂಕ್‌ನ ಸ್ಟಾಕ್ ಟ್ಯಾಂಕ್ (ಅಂಡರ್‌ಗ್ರೌಂಡ್) ಪೈಪ್ ಲೈನಿನ ಕೀಲಿ ಮುರಿದ ಕಳ್ಳರು, ಪೈಪ್ ಕತ್ತರಿಸಿ ಅದಕ್ಕೆ ಮತ್ತೊಂದು ಪೈಪ್ ಜೋಡಿಸಿ, ಮೋಟಾರ್ ಮೂಲಕ ಪೆಟ್ರೋಲ್, ಡೀಸೆಲ್ ಕದ್ದಿದ್ದಾರೆ.
ಬಂಕ್‌ಗಳಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಸಿಸಿಟಿವಿ ಇದ್ದರೂ ನಡೆದ ಈ ಕಳ್ಳತನ ಅಚ್ಚರಿ ಮೂಡಿಸಿದೆ. ಸಿಸಿಟಿವಿ ತಿರುಗಿಸಿ ಈ ಕೃತ್ಯ ಎಸಗಲಾಗಿದೆ. ಭದ್ರತಾ ಸಿಬ್ಬಂದಿ ಮಧ್ಯರಾತ್ರಿಯ ನಂತರ ಮಲಗಿದ್ದರು ಎನ್ನಲಾಗಿದ್ದು, ಇದರಿಂದ ಕಳ್ಳರಿಗೆ ಅನುಕೂಲವಾಯಿತು ಎನ್ನಲಾಗಿದೆ.